ನಾಯಕತ್ವ ಬದಲಾವಣೆ ಕುರಿತ ಬಣ ಬಡಿದಾಟಕ್ಕೆ ಬ್ರೇಕ್‌ಫಾಸ್ಟ್ ಮೀಟಿಂಗ್‌ನಿಂದ ದೊರಕಿದ್ದ ತಾತ್ಕಾಲಿಕ ವಿರಾಮ ಸಿಕ್ಕ ಮೇಲೆ, ಸಿದ್ದರಾಮಯ್ಯ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಹೇಳಿದರೆ, ಇತ್ತ ಡಿಕೆ ಟೀಂನಿಂದ ಜನವರಿ 9ರವರೆಗೆ ವೇಯ್ಟ್ ಮಾಡಿ ಅನ್ನೋ ಸಿಗ್ನಲ್ ಬಂದಿದೆ. ಏನಿದು ಜನವರಿ 9ರ ಸೀಕ್ರೆಟ್..?
ಇಷ್ಟಕ್ಕೂ ಯತೀಂದ್ರ ಸಿದ್ದರಾಮಯ್ಯ ಹೈಕಮಾಂಡ್ ಫೈನಲ್ ಹೇಳಿಕೆ ನೀಡಿದೆ ಎಂದೇನೂ ಹೇಳಲಿಲ್ಲ. ಅವರು ಮತ್ತೊಮ್ಮೆ ಹೇಳಿದ್ದೂ ವೈಯಕ್ತಿಕ ಅಭಿಪ್ರಾಯವನ್ನೇ. ಆದರೆ ಈ ಹೇಳಿಕೆಯಲ್ಲೊಂದು ಪದ ಬಳಕೆ ಇದೆ. ʻʻ ನನಗೆ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂಬ ವಿಶ್ವಾಸವಿದೆ. ಏಕೆಂದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬದಲಾವಣೆ ಬಯಕೆಗೆ ಹೈಕಮಾಂಡ್ ಸದ್ಯಕ್ಕೆ ಒಪ್ಪಿಲ್ಲʼʼ ಇಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬದಲಾವಣೆ ಬಯಕೆಗೆ ಹೈಕಮಾಂಡ್ ಸದ್ಯಕ್ಕೆ ಒಪ್ಪಿಲ್ಲ ಎಂಬ ಮಾತು ಡಿಕೆ ಟೀಂ ಕೆರಳುವಂತೆ ಮಾಡಿದೆ. ಉಭಯ ಬಣಗಳ ನಡುವೆ ಮತ್ತೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಯತೀಂದ್ರ ಅವರ ಒಟ್ಟಾರೆ ಮಾತು ಇಷ್ಟು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ, ತಮಗೂ ಅವಕಾಶ ಕೊಡಿ ಎಂದು ಕೋರಿದ್ದರು. ಆದರೆ, ಹೈಕಮಾಂಡ್ ಸದ್ಯಕ್ಕೆ ಒಪ್ಪಿಲ್ಲ, ಈಗ ನಾಯಕತ್ವ ಬದಲಾವಣೆಯ ಪರಿಸ್ಥಿತಿ ಇಲ್ಲ ಎಂದು ಹೇಳಿದೆ. ಹೀಗಾಗಿ ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನನಗೆ ವಿಶ್ವಾಸವಿದೆ.
ಇಷ್ಟಾದ ಕೂಡಲೇ ಅಲರ್ಟ್ ಆದ ಡಿಕೆ ಟೀಂನವರು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಜ.8 ಮತ್ತು 9ಕ್ಕೆ ಕಾಯಿರಿ ಎನ್ನೋಕೆ ಶುರು ಮಾಡಿದ್ರು. ಡಿ.ಕೆ ಶಿವಕುಮಾರ್ ಆಪ್ತ ಶಾಸಕರಾದ ರವಿ ಗಣಿಗ, ಬಸವರಾಜ ಶಿವಗಂಗಾ, ಎಚ್.ಡಿ. ರಂಗನಾಥ್ ಸೇರಿ ಸಾಲು-ಸಾಲು ಶಾಸಕರು ಡಿ.ಕೆ. ಶಿವಕುಮಾರ್ ಪರ ದನಿ ಎತ್ತಿದ್ದಾರೆ.
ಜನವರಿ 9ರ ನಂತರವೇ ಏಕೆ..?
ಸದ್ಯಕ್ಕೆ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಮುಗಿಯುವ ಹೊತ್ತಿಗೆ ಧನುರ್ಮಾಸ ಶುರುವಾಗುತ್ತದೆ. ಅದು ಕೊನೆಯಾಗುವುದು ಸಂಕ್ರಾಂತಿಯ ಬಳಿಕ. 9ರ ನಂತರ ನಡೆಯುವ ರಾಜಕೀಯ ಚಟುವಟಿಕೆಗಳು ಡಿಕೆ ಶಿವಕುಮಾರ್ ಅವರಿಗೆ ಪೂರಕವಾಗಿ ನಡಯಲಿವೆ ಎನ್ನುವುದು ಡಿಕೆ ಬಣದ ಶಾಸಕರೆಲ್ಲರ ನಿರೀಕ್ಷೆ.
ಈ ದಿನಾಂಕ ಹೇಳಿರುವುದು ಇಕ್ಬಾಲ್ ಹುಸೇನ್. ಜ. 8 ಮತ್ತು 9 ರವರೆಗೆ ಕಾಯಿರಿ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಇಕ್ಬಾಲ್ ಹುಸೇನ್ ಹೇಳಿದರೆ, ಮತ್ತೊಬ್ಬ ಆಪ್ತ ಶಾಸಕ ಬಸವರಾಜ ಶಿವಗಂಗಾ ಜ.2 ರಂದು ಬಂದು ಮಾತನಾಡುತ್ತೇನೆ ಎಂದಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಬಣದಲ್ಲಿರುವ, ನೋಟಿಸ್ ಕೂಡಾ ಪಡೆದಿರುವ ಶಾಸಕರು ಯತೀಂದ್ರಗೆ ಯಾಕೆ ನೊಟೀಸ್ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡ್ತಿದ್ದಾರೆ.



