ಸಿದ್ಧರಾಮಯ್ಯ ಅವರ ಮೇಲಿರುವ ಆರೋಪಗಳಲ್ಲಿ ಒಂದು ಸಿದ್ಧರಾಮಯ್ಯ ಅವರ ಹಿಂದೂ ವಿರೋಧಿ. ಆಚರಣೆಗಳ ವಿರೋಧಿ ಹಾಗೂ ಮುಸ್ಲಿಂ ಪ್ರೇಮಿ ಎನ್ನುವುದು. ಸಿಟಿ ರವಿ, ಪ್ರತಾಪ್ ಸಿಂಹ.. ಅವರಂತಹ ಹಿಂದೂ ನಾಯಕರು ಸಿದ್ಧರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದೇ ಕರೆಯುತ್ತಾರೆ. ಹಾಗೆ ಕರೆಯುವವರಿಗೆ ಸಿದ್ಧರಾಮಯ್ಯ ಹಲವು ಬಾರಿ ಅವಕಾಶಗಳನ್ನೂ ಕೊಡುತ್ತಾರೆ. ಈಗ ಚರ್ಚೆಯಾಗಿರುವುದು ಸಿದ್ಧರಾಮಯ್ಯ ಅವರು ಹಾಕಿರುವ ಟೋಪಿ.
ಮಹಮ್ಮದ್ ಪೈಗಂಬರ್ ಅವರ 1500ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ಮಿಲಾದ್ ಸಮಿತಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಮಿಲಾದ್ ಸಮ್ಮೇಳನ 2025 ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಬಹುತೇಕ ಮುಸ್ಲಿಂ ನಾಯಕರ ಜೊತೆ ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಪರಮೇಶ್ವರ್ ಕೂಡಾ ಭಾಗವಹಿಸಿದ್ದರು. ಈ ವೇಳೆ ಆಯೋಜಕರು ಸಿದ್ಧರಾಮಯ್ಯ ಅವರಿಗೆ ಮುಸ್ಲಿಮರ ಹೆಗ್ಗುರುತಾದ ಟೋಪಿಯನ್ನು ಕೊಟ್ಟರು. ಟೋಪಿಯನ್ನು ನಗು ನಗುತ್ತಲೇ ಧರಿಸಿದ ಸಿದ್ಧರಾಮಯ್ಯ ಕಾರ್ಯಕ್ರಮ ಮುಗಿಯುವವರೆಗೂ ಟೋಪಿ ಧರಿಸಿಯೇ ಇದ್ದರು. ಭಾಷಣದಲ್ಲಿಯೂ ಪ್ರವಾದಿಗಳನ್ನು ಹೊಗಳಿದ ಸಿದ್ಧರಾಮಯ್ಯ ಭಾಷಣದ ಕೊನೆಗೆ ಎಂದಿನಂತೆ ಜೈಹಿಂದ್ ಜೈ ಕರ್ನಾಟಕದ ಜೊತೆಗೆ ಜೈ ಹಿಂದು ಮುಸ್ಲಿಂ ಎಂದು ಘೋಷಣೆ ಕೂಗಿದರು. ಸಿಎಂ ಘೋಷಣೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನತೆ ಕೂಡ ಬೆಂಬಲ ಸೂಚಿಸಿದರು.
ಎಲ್ಲವೂ ಓಕೆ. ಆದರೆ.. ಇದೇ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮೈಸೂರು ಪೇಟಾ ಕೊಡಲು ಹೋದಾಗ ಬೇಡ ಎಂದು ಅಲ್ಲಿಯೇ ನಿರಾಕರಿಸಿದ್ದರು. ಆ ವಿಡಿಯೋ ವೈರಲ್ ಆಗುತ್ತಿದೆ. ಇನ್ನು ದೇವಸ್ಥಾನಕ್ಕೆ ಹೋಗುವ ಸಿದ್ಧರಾಮಯ್ಯ ಅಲ್ಲಿ ಕುಂಕುಮ ಧರಿಸುವುದಿಲ್ಲ. ಅರ್ಚಕರು ಕುಂಕುಮ ಹಚ್ಚಲು ಬಂದರೆ ಬೇಡ ಎಂದು ಹೇಳುತ್ತಾರೆ. ಸಿದ್ಧರಾಮಯ್ಯ ಪರಮ ನಾಸ್ತಿಕರೇನಲ್ಲ. ಹಾಗಂತ ಸಂಪೂರ್ಣ ಆಸ್ತಿಕರೂ ಅಲ್ಲ.
ಪತ್ನಿಗಾಗಿ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಬಹಿರಂಗವಾಗಿಯೇ ಹೇಳುವ ಸಿದ್ಧರಾಮಯ್ಯ ಅವರ ಈ ಮುಸ್ಲಿಂ ಪ್ರೀತಿ ಈ ಹಿಂದೆಯೂ ಚರ್ಚೆಯಾಗಿದೆ. ಇತ್ತೀಚೆಗೆ ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿ ವಿವಾದ ಮಾಡಿಕೊಂಡಿದ್ದಾರೆ. ಈ ವಿವಾದದ ನಡುವೆ ನಾಡ ಹಬ್ಬಾ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹಣೆಯಲ್ಲಿ ಕುಂಕುಮ ಹಚ್ಚಿ ಬರಬೇಕಿಲ್ಲ ಎಂದು ಸಮರ್ಥನೆ ನೀಡಿದ್ದ ಸಿದ್ಧರಾಮಯ್ಯ ಅವರನ್ನು ಟೀಕಿಸಿದ್ದ ಬಿಜೆಪಿ ನಾಯಕರು ʻಇದೇ ಸಿದ್ಧರಾಮಯ್ಯ ಇಫ್ತಾರ್ ಕೂಟಕ್ಕೆ ಹೋದಾಗ ಮುಸ್ಲಿಂ ಟೋಪಿ ಧರಿಸಿ, ಭುಜಕ್ಕೆ ಕಲರ್ ಕಲರ್ ಚೆಕ್ಸ್ ಶಾಲೂ ಹೊದಿಸಿಯೇ ಹೋಗುತ್ತಾರೆʼʼ ಎಂದು ಟೀಕಿಸಿದ್ದರು. ಹೀಗಿರುವಾಗಲೇ ಸಿದ್ಧರಾಮಯ್ಯ ಈ ಬಾರಿಯೂ ಮುಸ್ಲಿಂ ಟೋಪಿ ಧರಿಸಿದ್ದಾರೆ.
ಮೈಸೂರು ಪೇಟ ಅಂದರೆ ಆಗಲ್ಲ. ಕುಂಕುಮ ಅಂದ್ರೆ ಆಗಲ್ಲ. ಆದರೆ.. ಮುಸ್ಲಿಂ ಟೋಪಿ ಓಕೆನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.



