ಬಹುಶಃ ಇತ್ತೀಚೆಗೆ ಸಿದ್ದರಾಮಯ್ಯ ಅವರಿಗೆ ತಮ್ಮ ನಿರ್ಧಾರವನ್ನ ತಾವೇ ಮರುಪರಿಶೀಲನೆ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಲೇ ಇದೆ. ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಸಚಿವರ ಆಯ್ಕೆ, ಸಂಪುಟದ ಕೆಲವು ನಿರ್ಧಾರಗಳು.. ಸೇರಿದಂತೆ ಬಹುತೇಕ ನಿರ್ಣಯಗಳು ಸಿದ್ದರಾಮಯ್ಯ ಇಚ್ಚೆಗೆ ವಿರುದ್ಧವಾಗಿಯೇ ಆಗುತ್ತಿವೆ. ಅದಕ್ಕೆ ಈಗ ಹೊಸ ಸೇರ್ಪಡೆ ಪುನಃ. ಸಾಮಾಜಿಕ ಆರ್ಥಿಕ ಸಮೀಕ್ಷೆಯ ಜಾತಿ ಗಣತಿ. ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ 10 ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನು ಕೈಬಿಟ್ಟು ಹೊಸದಾಗಿ ಜಾತಿಗಣತಿ ಮಾಡಲು ರಾಜ್ಯಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ನಿರ್ಧಾರ ಸಿದ್ದರಾಮಯ್ಯ ಅವರದ್ದಲ್ಲ. ಹೈಕಮಾಂಡಿನದ್ದು.
ಮರು ಸಮೀಕ್ಷೆ ಯಾಕೆ?
- ಜಾತಿ ಗಣತಿ ವರದಿ ಬಂದು 10 ವರ್ಷಗಳೇ ಕಳೆದಿವೆ
- ವರದಿಯಲ್ಲಿ ಕೆಲ ನೂನ್ಯತೆಗಳು ಇವೆ ಎಂಬ ಆರೋಪ
- ಅಂಕಿ ಅಂಶಗಳ ಬಗ್ಗೆ ಹಲವು ಸಮುದಾಯಗಳ ಆಕ್ಷೇಪ
- ವರದಿಗೆ ಒಕ್ಕಲಿಗ, ಲಿಂಗಾಯತ ಸಚಿವರಿಂದ ವಿರೋಧ
- ಕಾಂಗ್ರೆಸ್ ಶಾಸಕರು, ಹಿರಿಯ ನಾಯಕರಿಂದಲೂ ಆಕ್ಷೇಪ
- ಸಂಪುಟ ಸಭೆಯಲ್ಲಿ ಮರು ಸಮೀಕ್ಷೆಗೆ ಸಚಿವರಿಂದ ಆಗ್ರಹ
- ಜಂಟಿ ಹೋರಾಟಕ್ಕೆ ಮುಂದಾಗಿದ್ದ ಪ್ರಬಲ ಸಮುದಾಯಗಳು
- ಪ್ರಬಲ ಸಮುದಾಯಗಳ ವಿರೋಧಕ್ಕೆ ಮಣಿದು ಮರು ಸರ್ವೇ
- ಹೊಸ ಸರ್ವೇ ನಡೆಸುವುದರಿಂದ ಸಮುದಾಯಗಳಲ್ಲಿ ಜಾಗೃತಿ
ಇವು ಕಾರಣಗಳು. ಸಿಂಪಲ್ ಆಗಿ ಹೇಳ್ಬೇಕಂದ್ರೆ.. ಹೈಕಮಾಂಡ್ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯಗೆ ಒಂದು ರೀತಿಯಲ್ಲಿ ಹಿನ್ನಡೆ. ಮರು ಸಮೀಕ್ಷೆ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಒಕ್ಕಲಿಗರ ಸಂಘಗಳು ಸ್ವಾಗತಿಸಿವೆ.
ಹೈಕಮಾಂಡ್ ಹೇಳುವುದಕ್ಕೆ ಕಾರಣಗಳೂ ಇವೆ. ಏಕೆಂದರೆ ವರದಿಯನ್ನು ವಿರೋಧಿಸಿದ್ದವರು ಹೇಳಿದ್ದ ಮೊದಲ ಆರೋಪವೇ ಜಾತಿ ಗಣತಿ ಸರಿಯಾಗಿ ಆಗಿಲ್ಲ. ಗಣತಿಯೇ ಆಗಿಲ್ಲ ಎಂಬುದು. ಇದನ್ನು ಯಾರಾದರೂ ಪ್ರಶ್ನೆ ಮಾಡಿ ಕೋರ್ಟಿಗೆ ಹೋದರೆ, ಅಲ್ಲಿ ಹಿನ್ನಡೆಯಾಗುವುದು ಖಚಿತ. ಅಷ್ಟೇ ಅಲ್ಲದೆ, ಸಮೀಕ್ಷೆ ಅಥವಾ ಗಣತಿ ಮಾಡದೆ ವರದಿ ತಯಾರಿಸಿದರೆ.. ಪ್ರಬಲ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಆತಂಕ. ಹೀಗಾಗಿ.. ಏನಾದರೊಂದು ನೆಪ ಹೇಳಿ ಮತ್ತೊಮ್ಮೆ ಜಾತಿ ಗಣತಿ ಮಾಡಿ ಎಂದು ಸೂಚಿಸಿದೆ ಹೈಕಮಾಂಡ್.
ಒಟ್ಟಾರೆ.. 10 ವರ್ಷಗಳ ಹಳೆಯ ಜಾತಿ ಗಣತಿಯನ್ನೇ ಜಾರಿಗೆ ಮಾಡಲು ಮುಂದಾಗಿದ್ದ ಸಿಎಂ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಇನ್ನು ಕೇಂದ್ರ ಸರ್ಕಾರ ಕೂಡ ಜನಗಣತಿ ಜೊತೆ ಜಾತಿ ಗಣತಿ ಮಾಡುವುದಾಗಿ ಹೇಳಿದೆ. ಈಗಿದ್ದರೂ ಮತ್ತೆ ಮರು ಸರ್ವೇಗೆ ಕೈ ಹಾಕಿದ್ಯಾಕೆ.. ಈ ಹಿಂದೆ ವರದಿಗೆ ಖರ್ಚು ಮಾಡಿದ 160 ಕೋಟಿ ರೂಪಾಯಿ ಹಣ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದಂತೆ ಆಗಲ್ವೆ..
ಪ್ರಶ್ನೆಯನ್ನೇನೋ ಜನ ಕೇಳ್ತಾರೆ. ನಿನಗೇನ್ ಗೊತ್ತು ಸುಮ್ಕಿರಯ್ಯಾ ಎಂದರೆ.. ಪ್ರಶ್ನೆ ಕೇಳುವುದಕ್ಕೆ ಪತ್ರಕರ್ತರು ಎರಡು ಮೂರು ಬಾರಿ ಯೋಚನೆ ಮಾಡ್ತಿದ್ದಾರೆ.



