ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಕುರ್ಚಿ ಕಲಹವನ್ನು ತಾಳ್ಮೆಯಿಂದ ನೋಡುತ್ತಿದೆ ಹೈಕಮಾಂಡ್. ಹೈಕಮಾಂಡ್ ನಲ್ಲಿ ಕುಳಿತಿರುವ ಸೋನಿಯಾ, ರಾಹುಲ್, ಪ್ರಿಯಾಂಕ.. ಮೊದಲಾದವರಿಗೆ ಬಿಟ್ಟಿದ್ದರೆ, ಇಷ್ಟು ಹೊತ್ತಿಗೆ ಯಾವುದೋ ಒಂದು ಕ್ಲಿಯರ್ ಆಗಿಬಿಡುತ್ತಿತ್ತು. ಆದರೆ ಅವರೆಲ್ಲರೂ ಅಂತಿಮ ತೀರ್ಮಾನ ತೆಗೆದುಕೊಳ್ಳೋದನ್ನು ತಡೆ ಹಿಡಿದಿರುವುದು ಮಲ್ಲಿಕಾರ್ಜುನ ಖರ್ಗೆ. ಖರ್ಗೆ ಹೇಳಿರುವ ಬುದ್ದಿವಾದ, ಹಿತವಚನಗಳ ಪರಿಣಾಮ, ಹೈಕಮಾಂಡ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಇಷ್ಟಕ್ಕೂ ಖರ್ಗೆ ಹೇಳಿರುವ ಬುದ್ದಿಮಾತುಗಳು ಏನು..?
ಮಲ್ಲಿಕಾರ್ಜುನ ಖರ್ಗೆ ವಾದ : “ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದು ಒಳ್ಳೆಯದೇ. ನ್ಯಾಯವೂ ಇದೆ. ಆದರೆ ಆ ಪಟ್ಟವನ್ನು ಸಿದ್ದರಾಮಯ್ಯ ಅವರಿಂದ ಬಲವಂತವಾಗಿ ಕಿತ್ತುಕೊಂಡರೆ ಪಕ್ಷಕ್ಕೆ ಭವಿಷ್ಯದಲ್ಲಿ ಅಪಾಯʼʼ ಎಂದು ಹೇಳಿದ್ದಾರೆ ಖರ್ಗೆ. ಅದಕ್ಕೆ ಕಾರಣಗಳನ್ನೂ ಕೊಟ್ಟಿದ್ದಾರೆ.
ಅಹಿಂದ ವರ್ಗಗಳ ಮತ ಹೆಚ್ಚಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದೆ. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ಮನವೊಲಿಸಿ, ಅಧಿಕಾರ ಪಡೆದರೆ ನಡೆಯುವುದೇ ಬೇರೆ. ಬಲವಂತವಾಗಿ ಆದೇಶ ನೀಡಿ ಅಧಿಕಾರ ಪಡೆದರೆ ನಡೆಯುವುದೇ ಬೇರೆ ಎಂದಿರುವ ಖರ್ಗೆ ಕರ್ನಾಟಕದ ಮತಬ್ಯಾಂಕ್ ಸ್ವರೂಪ ವಿವರಿಸಿದ್ದಾರೆ.
ರಾಜ್ಯದ 224 ಕ್ಷೇತ್ರಗಳಲ್ಲೂ ಅಹಿಂದ ವರ್ಗದ ಮತಗಳು ಪ್ರಭಾವಶಾಲಿ. ರಾಜ್ಯದ ಪ್ರತಿಕ್ಷೇತ್ರದಲ್ಲೂ ಪರಿಶಿಷ್ಟರಿದ್ದಾರೆ, ಮುಸ್ಲಿಮರಿದ್ದಾರೆ. ಕುರುಬರು ಇವರಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೂ ಬಹುತೇಕ ಕ್ಷೇತ್ರಗಳಲ್ಲಿ ಪ್ರಭಾವಶಾಲಿಗಳು. ನಿರ್ಣಾಯಕ ಹಂತದಲ್ಲಿರುವವರು. ಇಂಥ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಮುಂದಿನ ದಿನಗಳಲ್ಲಿ ಪಕ್ಷದ ಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತದೆ. ಅಲ್ಲದೆ , 2029ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷಕ್ಕಿರುವ ಪ್ರಬಲ ಸೇನಾನೆಲೆ ಎಂದರೆ ಕರ್ನಾಟಕ.
ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಇಳಿಸಲು ಮುಂದಾದರೆ ಈ ಸೇನಾನೆಲೆ ಕುಸಿಯುತ್ತದೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ವಿವರಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆಯನ್ನು ಸಮರ್ಥಿಸಿಕೊಂಡಿರುವ ಖರ್ಗೆ ಒಕ್ಕಲಿಗರ ಮತಬ್ಯಾಂಕ್ ವಿವರಣೆಯನ್ನೂ ಕೊಟ್ಟಿದ್ಧಾರೆ. ಒಕ್ಕಲಿಗ ಮತಬ್ಯಾಂಕಿನ ಶೇಕಡಾ 50ರಷ್ಟು ಮತಗಳು ಕುಮಾರಸ್ವಾಮಿ, ದೇವೇಗೌಡರ ನೇತೃತ್ವದ ಜಾತ್ಯತೀತ ದಳದ ಜತೆ ನಿಂತಿವೆ ಅದರಲ್ಲಿ ಅಂತಹ ಯಾವುದೇ ಬದಲಾವಣೆ ಆಗಿಲ್ಲ. ವಾಸ್ತವವದಲ್ಲಿ ಒಕ್ಕಲಿಗರ ಶೇ. 25ರಷ್ಟು ಮತಗಳು ಬಿಜೆಪಿ ಜೊತೆ ಹೋಗಿವೆ. ಅಹಿಂದ ಮತಬ್ಯಾಂಕಿನಿಂದ ಬೀಳುವ ಹೊಡೆತವನ್ನು ಒಕ್ಕಲಿಗ ಮತಬ್ಯಾಂಕ್ ನೆರವಿನಿಂದ ತೂಗಿಸಲು ಸಾಧ್ಯವಿಲ್ಲ ಎಂದು ಕೂಡಾ ವಿವರಿಸಿದ್ದಾರೆ.
ಯಾವಾಗ ಎರಡೂ ಕೋನಗಳಿಂದ ಬಂದ ಅಭಿಪ್ರಾಯ ಸಿದ್ದರಾಮಯ್ಯ ಅವರ ಪರವಾಗಿ ಬಂತೋ, ಸಿದ್ದರಾಮಯ್ಯ ಅವರು ಒಪ್ಪಿದರೆ ಮಾತ್ರ ಬೇರೊಬ್ಬರು ಮುಖ್ಯಮಂತ್ರಿ ಆಗಬಹುದು, ಇಲ್ಲದಿದ್ದರೆ ಇಲ್ಲ ಎಂಬ ನಿಲುವಿಗೆ ಬಂದಿದ್ದಾರೆ ರಾಹುಲ್ ಗಾಂಧಿ. ಈ ವೇಳೆ ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯನವರು, “ಸರಕಾರಕ್ಕೆ ಶಕ್ತಿ ತುಂಬುವ ದೃಷ್ಟಿಯಿಂದ ಪುನಾರಚನೆ ಪ್ರಕ್ರಿಯೆ ಬೇಗ ಮುಗಿಯುವುದು ಒಳ್ಳೆಯದು” ಎಂದಿದ್ದಾರೆ. ಯಾವಾಗ ಸಿದ್ದರಾಮಯ್ಯನವರು ಈ ಪ್ರಸ್ತಾಪ ಮಂಡಿಸಿದರೋ, ಆಗ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ವೈ ನಾಟ್ ಸಿದ್ರಾಮಯ್ಯಾಜೀ? ಸಂಪುಟ ಪುನಾರಚನೆಯ ಸ್ವರೂಪ ಹೇಗಿರಬೇಕು? ಮಂತ್ರಿಮಂಡಲದಿಂದ ಹೊರಹೋಗಬೇಕಾದವರು ಯಾರು? ಸೇರ್ಪಡೆ ಅಗಬೇಕಾದವರು ಯಾರು? ಎಂಬ ಬಗ್ಗೆ ವಿವರವಾಗಿ ಚರ್ಚಿಸಿ ಜನವರಿ 9ರಂದು ದಿಲ್ಲಿಗೆ ಬನ್ನಿ. ಫೈನಲ್ ಮಾಡೋಣ” ಎಂದಿದ್ದಾರೆ. ಮೂಲಗಳ ಪ್ರಕಾರ, ದಿಲ್ಲಿಯಿಂದ ವಾಪಸ್ಸಾದ ನಂತರ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ಸ್ವರೂಪದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.



