ಚಿತ್ರದುರ್ಗದಲ್ಲಿ ಎಸ್.ಸಿ. ಹಾಗೂ ಎಸ್.ಟಿ. ವರ್ಗದ ಮತಗಳನ್ನು ಸೆಳೆಯುವ ಸಲುವಾಗಿ ಕಾಂಗ್ರೆಸ್ ಐಕ್ಯತಾ ಸಮಾವೇಶ ಹಮ್ಮಿಕೊಂಡಿತ್ತು. ದಲಿತರ ಮತಗಳನ್ನು ಸೆಳೆಯುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಸಮಾವೇಶ, ಅದಕ್ಕೆ ಸೇರಿದ್ದ ಜನ ಎರಡೂ ಕಾಂಗ್ರೆಸ್ಸಿಗರ ಪಾಲಿಗೆ ಚೇತೋಹಾರಿಯಾಗಿತ್ತು. ಆದರೆ ಸಿದ್ದರಾಮಯ್ಯ ಅವರಿಗೆ ಚಿತ್ರದುರ್ಗ ಶಾಕ್ ಕೊಟ್ಟಿದೆ.

ಚಿತ್ರದುರ್ಗ ಸಮಾವೇಶಕ್ಕೆ 2 ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ಆದರೆ 11 ಗಂಟೆಗೆ ಶುರುವಾಗಿದ್ದ ಸಭೆ ಶುರುವಾಗಿದ್ದು ಮಧ್ಯಾಹ್ನ 1.45ಕ್ಕೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಲಿತರು ತಮ್ಮನ್ನು ಒಡೆದು ಆಳುತ್ತಿರುವ ಬಗ್ಗೆ ಜಾಗೃತಿ ವಹಿಸಬೇಕು. ಎಸ್‍ಸಿ, ಎಸ್‍ಟಿ ಸಮುದಾಯದವರ ಒಗ್ಗಟ್ಟು ಮುರಿಯಲೆಂದೇ ಮೋದಿ ಪ್ಲಾನ್ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮಾತನಾಡುವ ಹೊತ್ತಿಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಮಾನಕ್ಕೆ ಸಮಯವಾಗಿತ್ತು. ದೆಹಲಿಗೆ ಹೋಗಬೇಕಿತ್ತು. ಖರ್ಗೆ ಯಾವಾಗ ಹೊರಟರೋ ಬೀಳ್ಕೊಡಲು ವೇದಿಕೆಯಲ್ಲಿದ್ದ ಕೆಲವು ಗಣ್ಯರೂ ಕೆಳಗಿಳಿದರು. ವೇದಿಕೆ ಖಾಲಿ ಖಾಲಿಯಾಯಿತು. ಅಷ್ಟಾಗಿದ್ದೇ ತಡ, ಮುಂಭಾಗದಲ್ಲಿದ್ದವರು ಕೂಡಾ ಸಾಲು ಸಾಲಾಗಿ ಎದ್ದು ಹೊರಟರು. ಇದನ್ನು ತಕ್ಷಣ ಅರ್ಥ ಮಾಡಿಕೊಂಡ ಸಿದ್ದರಾಮಯ್ಯ ಭಾಷಣವನ್ನು ತರಾತುರಿಯಲ್ಲಿಯೇ ಮೊಟಕುಗೊಳಿಸಿದರು.



