ತಮಿಳಿನಲ್ಲಿ ಜೈಲರ್ ಹಿಟ್ ಆಯ್ತು. ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗ್ತಾ ಇದೆ. ಹೀಗಿರುವಾಗಲೇ ರಾಮ್ ಚರಣ್ ತೇಜ ಜೊತೆ ಶಿವಣ್ಣ ನಟಿಸುವುದು ಪಕ್ಕಾ ಆಗಿದೆ. ಇದು ಶಿವಣ್ಣ ಅಭಿನಯಿಸಲಿರುವ 2ನೇ ತೆಲುಗು ಸಿನಿಮಾ ಹಾಗೂ ರಾಮ್ ಚರಣ್ ಅವರಿಗೆ ಇದು 16ನೇ ಸಿನಿಮಾ. ಈ ಹಿಂದೆ ಅಂದ್ರೆ 2017ರಲ್ಲಿ ಶಿವಣ್ಣ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದರು. ಅದು ಬಾಲಕೃಷ್ಣ ಅಭಿನಯದ 100ನೇ ಸಿನಿಮಾ.
ರಾಮ್ ಚರಣ್ ತೇಜ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತಾದರೂ ಈಗ ಖಚಿತವಾಗಿದೆ. ಚಿತ್ರಕ್ಕೆ ಉಪ್ಪೆನಾ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದಂತೆ ಶಿವಣ್ಣ ಅವರ ಕ್ಯಾರೆಕ್ಟರ್ ಎಂಥಹುದು ಅನ್ನೋ ಬಗ್ಗೆ ಎಲ್ಲಿಯೂ ಹೇಳಿಲ್ಲ. ಶೀಘ್ರದಲ್ಲಿಯೇ ಆ ವಿವರಗಳೂ ತಿಳಿಯಲಿವೆ.
ಅಂದಹಾಗೆ ರಾಮ್ ಚರಣ್ ಅವರೇ ಹೀರೋ ಆಗಿರುವ ಚಿತ್ರ ಆರ್.ಆರ್.ಆರ್. ಚಿತ್ರವೇ ಕೊನೆ. ಅದಾದ ಮೇಲೆ ಆಚಾರ್ಯ ಚಿತ್ರದಲ್ಲಿ ಕಾಣಿಸಿಕೊಂಡರಾದರೂ ಆ ಸಿನಿಮಾಗೆ ಹೀರೋ ಅವರ ತಂದೆ ಚಿರಂಜೀವಿ. ರಾಮ್ ಚರಣ್ ಆ ಚಿತ್ರಕ್ಕೆ ಪ್ರೊಡ್ಯೂಸರ್. ಸದ್ಯಕ್ಕೆ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಅದು ಮುಗಿದ ಮೇಲೆ ಉಪ್ಪೆನ ನಿರ್ದೇಶಕರ ಜೊತೆ ಹೊಸ ಸಿನಿಮಾ ಶುರುವಾಗಲಿದೆ. ಆ ಚಿತ್ರದಲ್ಲಿ ಶಿವಣ್ಣ ಕೂಡಾ ನಟಿಸಲಿದ್ದಾರೆ.



