ಶಿವಣ್ಣ ಯಾವತ್ತೂ ತಮ್ಮ ಆತ್ಮೀಯರನ್ನು ಮರೆಯುವುದಿಲ್ಲ. ಅದಕ್ಕೆ ಸಾಕ್ಷಿಯಾಗಿದ್ದು ಆರ್.ಚಂದ್ರು ಅವರ ಫಾದರ್ ಚಿತ್ರದ ಮುಹೂರ್ತ. ಅತ್ತ ಪತ್ನಿ ಗೀತಾ ಅವರ ಪರ ಹಗಲೂ ಇರುಳು ಪ್ರಚಾರ ಮಾಡುತ್ತಿರುವ ಶಿವಣ್ಣ, ಈ ನಡುವೆ ತಮ್ಮ ಗೆಳೆಯ ಚಂದ್ರು ಅವರ ಸಿನಿಮಾ ಮುಹೂರ್ತಕ್ಕೆ ಬಂದು ಕ್ಲಾಪ್ ಮಾಡಿ ಶುಭ ಹಾರೈಸಿ ಹೋಗಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕಂ ನಿರ್ಮಾಪಕರಾಗಿರುವ ಆರ್. ಚಂದ್ರು ಅವರ ಫಾದರ್ ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲಿ ಹೀರೋ ಡಾರ್ಲಿಂಗ್ ಕೃಷ್ಣ. ನಾಯಕಿ ಅಮೃತಾ ಅಯ್ಯಂಗಾರ್. ಪ್ರಮುಖ ಪಾತ್ರದಲ್ಲಿ ಅಂದರೆ ಫಾದರ್ ಪಾತ್ರದಲ್ಲಿ ಪ್ರಕಾಶ್ ರೈ ಅವರಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ ಮುಹೂರ್ತದಲ್ಲಿ ಶಿವಣ್ಣ ಮತ್ತು ಗೀತಾ ಅವರು ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದು ವಿಶೇಷ.
ಚಿತ್ರದ ಮುಹೂರ್ತದಲ್ಲಿ ಚಿತ್ರರಂಗದವರಷ್ಟೇ ರಾಜಕಾರಣಿಗಳೂ ಇದ್ದದ್ದು ಗಮನ ಸೆಳೆಯಿತು. ಶಾಸಕ ಪ್ರದೀಪ್ ಈಶ್ವರ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರೊಂದಿಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಚೇತನ್ ಕುಮಾರ್, ಮಂಜುನಾಥ್, ಮಮತಾ ದೇವರಾಜ್ ಮುಂತಾದವರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದು, ‘ಹನುಮಾನ್’ ಖ್ಯಾತಿಯ ಹರಿ ಸಂಗೀತ ನಿರ್ದೇಶನ ಮಾಡುತ್ತಿದ್ಧಾರೆ. ಇತ್ತೀಚೆಗಷ್ಟೇ ‘ಆರ್.ಸಿ. ಸ್ಟುಡಿಯೋಸ್’ ಸಂಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಸಂಸ್ಥೆಯಿಂದ ವರ್ಷಕ್ಕೆ 5 ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ್ದ ಆರ್. ಚಂದ್ರು ಅವರ ಮೊದಲ ಹೆಜ್ಜೆಯೇ ಫಾದರ್. ಲೋಕಸಭಾ ಚುನಾವಣೆಯ ಸಮಯ ಆಗಿದ್ದರೂ ಕೂಡ ಅವರು ಇಲ್ಲಿಗೆ ಬಂದು ನಮ್ಮ ಸಿನಿಮಾಗೆ ಚಾಲನೆ ನೀಡಿದ್ದಾರೆ ಎಂದ ಚಂದ್ರು ಶಿವಣ್ಣ ದಂಪತಿಯನ್ನು ಹೊಗಳಿದರು.
ನನ್ನ ಹಾಗೂ ಚಂದ್ರುನ ಯಾರೂ ಬೇರೆ ಮಾಡೋಕಾಗಲ್ಲ. ಚಂದ್ರು ನನ್ನ ಬಾಂಧವ್ಯ ಯಾವಾಗಲೂ ಇರುತ್ತದೆ. ಸೋಶಿಯಲ್ ಮೀಡಿಯಾ ಆಟದ ಸಾಮಾನಿನ ರೀತಿ ಆಗಿದೆ. ಅದನ್ನು ಜನರು ಒಳ್ಳೆಯದಕ್ಕೆ ಬಳಸಿಕೊಳ್ಳುವಂತಾಗಲಿ. ಯಾವ ಮೀಡಿಯಾನೂ ಏನು ಮಾಡೋಕಾಗಲ್ಲ ಎಂದ ಶಿವಣ್ಣ ಚಂದ್ರು ಸಿನಿಮಾಗಳಲ್ಲಿ ತಂದೆ ಮಗನ ಸೆಂಟಿಮೆಂಟ್ ಚೆನ್ನಾಗಿ ಪ್ಲೇ ಆಗುತ್ತೆ. ಅವರ ಸಿನಿಮಾಗಳು ಎಮೋಷನ್ ಆಗಿ ಕನೆಕ್ಟ್ ಆಗುತ್ತವೆ ಎಂದರು.
ಇದೊಂದು ತಂದೆ-ಮಗನ ನಡುವಿನ ಬಾಂಧವ್ಯದ ಕಹಾನಿ. ಸಿನಿಮಾದ ಕಥೆ ಬಹಳ ಚೆನ್ನಾಗಿದೆ. ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳು ಫಾದರ್ ಸಿನಿಮಾದಲ್ಲಿ ಇರಲಿವೆ ಎಂದ ನಿರ್ದೇಶಕ ರಾಜಮೋಹನ್ ಇದೊಂದು ಫ್ಯಾಮಿಲಿ ಸೆಂಟಿಮೆಂಟ್ ಕಥೆ ಎಂದು ಹೇಳಿದರು.
ಶಿವಣ್ಣ ಮತ್ತು ಚಂದ್ರು ಅವರದ್ದು ಚಾರ್ ಮಿನಾರ್ ಶುರುವಾದ ಕಾಲದಿಂದಲೂ ಬಾಂಧವ್ಯ ಇದೆ. ಚಾರ್ʻಮಿನಾರ್ ಚಿತ್ರದಲ್ಲಿ ಪ್ರೇಮ್ ಹೀರೋ. ಆದರೆ.. ಚಂದ್ರು ಅವರು ತಮ್ಮ ಚಿತ್ರಗಳಲ್ಲಿ ತಂದೆ ಮಗನ ಸೆಂಟಿಮೆಂಟ್ ಕಥೆ ಹೇಳುವುದು ಶಿವಣ್ಣ ಅವರಿಗೆ ಇಷ್ಟವಾಗುತ್ತಿತ್ತು. ಚಂದ್ರು ಅವರು ತಮ್ಮ ತಾಜ್ʻಮಹಲ್, ಚಾರ್ʻಮಿನಾರ್, ಮೈಲಾರಿ ಸೇರಿದಂತೆ ಹಲವು ಚಿತ್ರಗಳಲ್ಲಿ ತಂದೆ ಮಗನ ಬಾಂಧವ್ಯದ ಕಥೆ ಹೇಳಿದ್ದಾರೆ. ಇತ್ತೀಚೆಗೆ ಕಬ್ಜ ಚಿತ್ರದ ಬಗ್ಗೆ ಶಿವಣ್ಣ ಮಾತನಾಡಿದ್ದರು. ಚಂದ್ರು ಅವರು ಆ ಚಿತ್ರವನ್ನು ಓವರ್ ಹೈಪ್ ಮಾಡಿದ್ದರು ಎಂದಿದ್ದರು. ಆ ಟೀಕೆಗೆ ಉತ್ತರವಾಗಿ ಹೇಳಿರುವ ಶಿವಣ್ಣ ನಾವು ಹೇಳದೆ ಇನ್ಯಾರು ಚಂದ್ರುಗೆ ಹೇಳೋಕಾಗುತ್ತೆ ಎಂದಿದ್ದಾರೆ.



