ಶಿವಣ್ಣ ಇದುವರೆಗೆ ಹಲವರ ಚಿತ್ರಗಳಲ್ಲಿ ಅತಿಥಿಯಾಗಿ ನಟಿಸಿದ್ದಾರೆ. ಕಿಚ್ಚ ಸುದೀಪ್, ಕುಮಾರ್ ಬಂಗಾರಪ್ಪ, ರಾಘವೇಂದ್ರ ರಾಜಕುಮಾರ್, ತೆಲುಗಿನ ಬಾಲಕೃಷ್ಣ, ಪುನೀತ್ ಅವರ ಚಿತ್ರಗಳಲ್ಲಿ ಅತಿಥಿ ನಟರಾಗಿದ್ದಾರೆ. ತಮಿಳಿನ ಜೈಲರ್ ಚಿತ್ರದಲ್ಲಿಯೂ ಅವರದ್ದು ಅತಿಥಿ ಪಾತ್ರವೇ. ಈಗ ಮಗಳ ಚಿತ್ರದಲ್ಲಿ ಶಿವಣ್ಣ ಗೆಸ್ಟ್ ರೋಲ್ ಮಾಡುತ್ತಿದ್ಧಾರೆ.
ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗಾಗಲೇ ಹಲವು ವೆಬ್ ಸಿರೀಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದು, ಆ ಚಿತ್ರವನ್ನು ವಂಶಿ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಫೀಲ್ ಗುಡ್ ಸಿನಿಮಾವಾಗಿದ್ದು, ಈಗಾಗಲೇ ಶೇ.50ರಷ್ಟು ಚಿತ್ರೀಕರಣವನ್ನು ವಂಶಿ ಮುಗಿಸಿದ್ದಾರೆ.
ಮೂಲಗಳ ಮಾಹಿತಿಯ ಪ್ರಕಾರ, ಶಿವರಾಜ್‌ಕುಮಾರ್ ಕಥೆಯೊಳಗಿನ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಯಾವುದೇ ಕಮರ್ಷಿಯಲ್ ಎಂಟ್ರಿ ರೀತಿಯ ಅಂಶಗಳಿಲ್ಲ. ಬದಲಿಗೆ ಸಿನಿಮಾದ ಕಥೆಗೆ ಪ್ರಮುಖ ತಿರುವನ್ನು ಈ ಪಾತ್ರ ನೀಡುತ್ತದಂತೆ. ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ಶಿವರಾಜ್‌ಕುಮಾರ್ ಅವರ ಪಾತ್ರ ಲುಕ್ ಅನ್ನು ಚಿತ್ರತಂಡ ರಿಲೀಸ್ ಮಾಡಲಿದೆ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಣ್ಣ, ‘ನಾನು ನಟಿಸಿದ್ದೇನೆ ಎಂಬ ಬಗ್ಗೆ ನಿರ್ದೇಶಕರು ಮತ್ತು ನಿರ್ಮಾಪಕರೇ ಅಧಿಕೃತವಾಗಿ ತಿಳಿಸಲಿದ್ದಾರೆ’ ಎಂದಿದ್ದಾರೆ.
ಈ ಸಿನಿಮಾದಲ್ಲಿ ನಿರ್ದೇಶಕ ವಂಶಿಯವರೇ ನಾಯಕರಾಗಿಯೂ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ಸಂಭಾಷಣೆಕಾರ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಅಭಿಲಾಷ್ ಕಲಹತ್ತಿ ಛಾಯಾಗ್ರಹಣ ಮಾಡುತ್ತಿದ್ದು, ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಅವರು ಸಂಗೀತ ನೀಡುತ್ತಿದ್ದಾರೆ.
‘ಫೈರ್ ಫ್ಲೈ’ ಒಂದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಒಬ್ಬ ವ್ಯಕ್ತಿಯ ಜೀವನದ ಹಲವು ಸಾಹಸಗಳನ್ನು ನಿರ್ದೇಶಕ ವಂಶಿ ಜನರಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ‘ಮಾಯಾ ಬಜಾರ್’ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ವಂಶಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಶಿವರಾಜ್‌ಕುಮಾರ್ ಮತ್ತು ನಿವೇದಿತಾ ಕಥೆ ಕೇಳಿ ಮೆಚ್ಚಿಕೊಂಡು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.



