ಶಿವಣ್ಣ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಎಲೆಕ್ಷನ್ ಟೈಮಿನಲ್ಲಿ ಪತ್ನಿ ಗೀತಾ ಅವರಿಗಾಗಿ ಓಡಾಡಿ.. ಬರೀ ರಾಜಕೀಯದ್ದೇ ಮಾತನಾಡ್ತಿದ್ದ ಶಿವಣ್ಣ, ಎಲೆಕ್ಷನ್ನು ಮತ್ತಿತರ ಕೆಲಸಗಳನ್ನೆಲ್ಲ ಮುಗಿಸಿ ಚಿತ್ರರಂಗಕ್ಕೆ ವಾಪಸ್ ಆಗಿದ್ಧಾರೆ. ಶಿವಣ್ಣ ಇಷ್ಟು ದಿನ ಓಡಾಡಿದ ಪ್ರತಿಫಲ ಏನು ಅನ್ನೋದು ಗೊತ್ತಾಗೋದು ಜೂನ್ 4ಕ್ಕೆ. ಅವತ್ತು ಇಡೀ ದೇಶದ ಚುನಾವಣಾ ಫಲಿತಾಂಶ ಬರಲಿದೆ.
ಶಿವಣ್ಣ ಈಗ ಉತ್ತರಕಾಂಡ ಚಿತ್ರದ ಶೂಟಿಂಗ್ ಜಾಗಕ್ಕೆ ಎಂಟ್ರಿ ಕೊಟ್ಟಿದ್ಧಾರೆ. ಡಾಲಿ ಧನಂಜಯ ಮತ್ತು ಶಿವಣ್ಣ ಒಟ್ಟಿಗೇ ನಟಿಸುತ್ತಿರುವ ಮತ್ತೊಂದು ಚಿತ್ರ ಉತ್ತರಕಾಂಡ. ರೋಹಿತ್ ಪದಕಿ ಅವರು ಉತ್ತರಕಾಂಡ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇಡೀ ಕಥೆ ಉತ್ತರ ಕರ್ನಾಟಕದಲ್ಲಿಯೇ ನಡೆಯಲಿದೆ.
ಶಿವಣ್ಣ ಅವರ ಎದುರು ಭಾವನಾ ಹೀರೋಯಿನ್ ಜೋಡಿಯಾಗಿದ್ದರೆ, ಡಾಲಿ ಧನಂಜಯ ಅವರಿಗೆ ಐಶ್ವರ್ಯಾ ರಾಜೇಶ್ ನಾಯಕಿ. ಶಿವಣ್ಣ-ಭಾವನಾ ಜೋಡಿಯ ಈ ಹಿಂದಿನ ಟಗರು, ಭಜರಂಗಿ-2 ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ದಿಗಂತ್ ಇನ್ನೊಂದು ಪಾತ್ರದಲ್ಲಿ ನಟಿಸುತ್ತಿದ್ದು, ಚೈತ್ರಾ ಬಿ ಆಚಾರ್ ಅವರಿಗೆ ನಾಯಕಿ.
ನಿರ್ದೇಶಕ ಯೋಗರಾಜ್ ಭಟ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಂಗಾಯಣ ರಘು, ಉಮಾಶ್ರೀ, ಗೋಪಾಲ್ ಕೃಷ್ಣ ದೇಶಪಾಂಡೆ ಕೂಡಾ ನಟಿಸುತ್ತಿದ್ಧಾರೆ.
ಅಂದಹಾಗೆ ಶೂಟಿಂಗ್ ಸೆಟ್ʻಗೆ ಎಂಟ್ರಿ ಕೊಟ್ಟ ಶಿವಣ್ಣಗೆ ತಮಟೆ ವಾದ್ಯಗಳ ಮೂಲಕ ಸ್ವಾಗತ ಕೋರಿ ಉತ್ತರಕಾಂಡ ಲೋಕ ಪ್ರವೇಶ ಮಾಡಿಕೊಳ್ಳಲಾಗಿದೆ. ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ನಿರ್ಮಾಣದ ಚಿತ್ರವಿದು.
ಅಂದಹಾಗೆ ಶಿವಣ್ಣ ಅಭಿನಯದ ಇನ್ನೊಂದು ಸಿನಿಮಾ ಭೈರತಿ ರಣಗಲ್ ಈ ವರ್ಷವೇ ತೆರೆ ಕಾಣಲಿದೆ. ಒನ್ಸ್ ಅಗೇನ್ ಶಿವಣ್ಣ ತಮ್ಮ ಎಂದಿನ ಸಂಪ್ರದಾಯ ಕಂಟಿನ್ಯೂ ಮಾಡ್ತಿದ್ಧಾರೆ.
ಈ ವರ್ಷ ಪ್ರೇಕ್ಷಕರನ್ನು ಥಿಯೇಟರಿಗೆ ಎಳೆದು ತಂದ ಚಿತ್ರಗಳಲ್ಲಿ ಕರಟಕ ದಮನಕ ಕೂಡಾ ಒಂದು. ಆಗಸ್ಟ್ ೧೫ಕ್ಕೆ ಭೈರತಿ ರಣಗಲ್ ಮೂಲಕ ಶಿವಣ್ಣ ಮತ್ತೆ ಬರುತ್ತಿದ್ದಾರೆ. ಭೈರತಿ ರಣಗಲ್ ಚಿತ್ರಕ್ಕೆ ಅವರೇ ಪ್ರೊಡ್ಯೂಸರ್. ನರ್ತನ್ ಡೈರೆಕ್ಟರ್.



