ಹಲವು ಸ್ಟಾರ್ ನಟರು ಒಂದೇ ಚಿತ್ರದಲ್ಲಿ ನಟಿಸೋದು ಅಪರೂಪ. ಕನ್ನಡದಲ್ಲಿ ಮಲ್ಟಿಸ್ಟಾರ್ ಚಿತ್ರಗಳಂತೂ ಇನ್ನೂ ಅಪರೂಪ. ಎಲ್ಲ ನಟರನ್ನೂ ಹಾಕಿಕೊಂಡು ಸಿನಿಮಾ ಮಾಡೋಕೆ ಹೊರಟರೆ.. ಒಬ್ಬ ಹೀರೋಗೆ ಹೊಡೆದರೆ.. ಇನ್ನೊಬ್ಬ ಹೀರೋನ ಫ್ಯಾನ್ಸ್ ಬೇಜಾರು ಮಾಡ್ಕೊತಾರೆ ಅನ್ನೋ ಭಯ ಬೇರೆ. ಹೀಗಾಗಿ ಕಥೆಯನ್ನೇ ಸೈಡಿಗಿಟ್ಟು ಸಿನಿಮಾ ಮಾಡೋ ಕರ್ಮ ನಿರ್ದೇಶಕರದ್ದು. ಆದರೂ.. ಆಗಾಗ್ಗೆ ಮಲ್ಟಿಸ್ಟಾರ್ ಸಿನಿಮಾಗಳು ಬರ್ತಾ ಇರ್ತವೆ. ಅಂತಹದ್ದೊಂದು ಮಲ್ಟಿಸ್ಟಾರ್ ಸಿನಿಮಾ ಆಗುತ್ತಿದೆ ಉತ್ತರಕಾಂಡ.
ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ಧಾರೆ. ಆದರೆ.. ಅವರ ಕ್ಯಾರೆಕ್ಟರನ್ನು ಮಾತ್ರ ಗುಟ್ಟಾಗಿಟ್ಟಿರುವ ಚಿತ್ರತಂಡ, ಶೀಘ್ರದಲ್ಲೇ ಅನೌನ್ಸ್ ಮಾಡಲಿದೆ. ಶಿವಣ್ಣ, ಡಾಲಿ ಧನಂಜಯ ಜೊತೆಯಾಗಿರುವ ಚಿತ್ರದಲ್ಲಿ ದಿಗಂತ್ ಕೂಡಾ ಇದ್ಧಾರೆ. ದಿಗಂತ್ ಯಾವಾಗ ಸ್ಟಾರ್ ಹೀರೋ ಆದರು ಅನ್ನೋ ಪ್ರಶ್ನೆ ಬೇಡ. ಹಲವು ಚಿತ್ರಗಳಲ್ಲಿ ನಟಿಸಿರುವ ದಿಗಂತ್ ಕೂಡಾ ಸ್ಟಾರ್ ಹೀರೋನೇ. ಜೊತೆಗೆ ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ಟರಿದ್ಧಾರೆ.
ಶಿವಣ್ಣನಿಗೆ ಜೋಡಿಯಾಗಿರುವುದು ಜಾಕಿ ಭಾವನಾ. ಟಗರು, ಭಜರಂಗಿ 2 ನಂತರ ಮತ್ತೊಮ್ಮೆ ಭಾವನಾ, ಶಿವಣ್ಣನಿಗೆ ಜೋಡಿಯಾಗುತ್ತಿದ್ಧಾರೆ. ಮೊದಲ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿರೋದ್ರಿಂದ.. ಲಕ್ಕಿ ಚಾರ್ಮ್ ಎಂದು ನಟಿಸುತ್ತಿರಬಹುದು. ಲಕ್ ತರಲಿ.
ಇನ್ನು ತಮಿಳು ಸ್ಟಾರ್ ನಟಿ ಐಶ್ವರ್ಯಾ ರಾಜೇಶ್, ಇಲ್ಲಿ ಡಾಲಿ ಧನಂಜಯ ಅವರಿಗೆ ಜೋಡಿ. ಗಬ್ರು ಸತ್ಯನ ಎದುರು ನಟಿಸಲಿರುವ ಐಶ್ವರ್ಯಾ ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಐಶ್ವರ್ಯಾ ಅವರು ದುರ್ಗಿ ಅನ್ನೋ ಪಾತ್ರ ಮಾಡುತ್ತಿದ್ಧಾರೆ. ಐಶ್ವರ್ಯಾ ರಾಜೇಶ್ ಗ್ಲಾಮರಸ್, ಆಕ್ಷನ್ ಎರಡೂ ರೀತಿಯ ಪಾತ್ರಗಳಲ್ಲಿ ನಟಿಸಿದವರು. ಮತ್ತು ಗೆದ್ದವರು.
ಹಿರಿಯ ನಟಿ ಉಮಾಶ್ರೀ ಅವರ ಪಾತ್ರದ ಹೆಸರು ಪಂಡರಿಭಾಯಿ. ಪಂಡರಿಭಾಯಿ ಅನ್ನೋ ಹೆಸರ್ ಯಾಕೆ.. ಅದನ್ನು ಸಿನಿಮಾದಲ್ಲಿಯೇ ನೋಡ್ಬೇಕು. ನಿರ್ದೇಶಕ ಯೋಗರಾಜ್ ಭಟ್ ಅವರೂ ನಟಿಸುತ್ತಿದ್ದು, ಉತ್ತರಕಾಂಡದಲ್ಲಿ ʻಪಾಟೀಲʼನಾಗಿದ್ಧಾರೆ. ಭಟ್ಟರಿಗೆ ಉತ್ತರ ಕನ್ನಡ ಭಾಷೆ ಕಷ್ಟವಾಗಲಿಕ್ಕಿಲ್ಲ. ಅಪ್ಪಟ ಧಾರವಾಡದ ಯೌವ್ವನದ ಹುಡುಗ.
ಗೋಪಾಲ ಕೃಷ್ಣ ದೇಶಪಾಂಡೆ ಧರ್ಮ ಅನ್ನೋ ಹೆಸರಿನ ಪಾತ್ರ ಮಾಡುತ್ತಿದ್ಧಾರೆ. ರಂಗಾಯಣ ರಘು ಅವರದ್ದು ಬಂಡೆ ಕಾಕಾನ ಪಾತ್ರ. ವಿಜಯ್ ಬಾಬು ಟೊರಿನೋ ಪಾತ್ರ ಮಾಡ್ತಿದ್ದಾರೆ.
ಅಲ್ಲದೆ ಮಲ್ಲಿಗೆ ದಿಗಂತ್ ಎದುರು ಚೈತ್ರಾ ಆಚಾರ್ ಜೋಡಿಯಾಗಿದ್ದಾರೆ. ಪಾತ್ರದ ಹೆಸರು ಲಚ್ಚಿ. ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣ, ಧನಂಜಯ ಪಾತ್ರಗಳಿಗೆ ಎಷ್ಟು ಮಹತ್ವ ನೀಡಿದ್ದಾರೋ, ಮಹಿಳಾ ಪಾತ್ರಗಳಿಗೂ ಅಷ್ಟೇ ಮಹತ್ವ ನೀಡಿದ್ದಾರೆ ನಿರ್ದೇಶಕರು. ಲಚ್ಚಿ ಪಾತ್ರ ವೈಯಕ್ತಿಕವಾಗಿ ಬಹಳ ಹಿಡಿಸಿತು. ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ ಎನ್ನುತ್ತಾರೆ ಚೈತ್ರಾ.
ಉತ್ತರಕಾಂಡ ಸಿನಿಮಾವು ಸಂಪೂರ್ಣ ಉತ್ತರ ಕರ್ನಾಟಕ ಭಾಷೆಯ ಸೊಗಡು ಹೊಂದಿದೆ. ಸ್ವಲ್ಪ ಹೆಚ್ಚೂ ಕಮ್ಮಿಯಾದರೂ ಎಡವಟ್ಟಾಗುವ ಸಾಧ್ಯತೆ ಇರುವ ಕಾರಣ ಚಿತ್ರತಂಡದವರಿಗೆ ಭಾಷೆಯ ಕಲಿಕೆಯ ವರ್ಕ್‌ಶಾಪ್ ನಡೆಸಲಾಗುತ್ತಿದೆ. ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕೆ ಕಾರ್ತಿಕ್ ಗೌಡ ಮತ್ತು ಯೋಗಿರಾಜ್ ನಿರ್ಮಾಪಕರಾಗಿದ್ದಾರೆ.



