ಮಕ್ಕಳು ಮೊದಲ ಹೆಜ್ಜೆ ಇಟ್ಟಾಗ ಕೆಲವರಿಗೆ ಸಹಜವಾಗಿಯೇ ಹಿರಿಯರ ನೆನಪಾಗುತ್ತದೆ. ಅದು ಸಹಜವೂ ಹೌದು. ತಮಗೆ ಇದ್ದ ಅನುಕೂಲ ಮತ್ತು ಅನನುಕೂಲಗಳ ಜೊತೆ, ತಮ್ಮೊಂದಿಗೆ ಅವರಿದ್ದ ದಿನಗಳು ನೆನಪಾಗ್ತವೆ. ಈಗ ರಾಘವೇಂದ್ರ ರಾಜಕುಮಾರ್ ಅವರಿಗೂ ಅಪ್ಪ, ಅಮ್ಮ, ಚಿಕ್ಕಪ್ಪನ ನೆನಪಾಗಿದೆ.
ಯುವ ರಾಜಕುಮಾರ್ ಸಿನಿಮಾ ಎಂಟ್ರಿ ಅದ್ಧೂರಿಯಾಗಿ ಆಗಿದೆ. ಅಭಿಮಾನಿಗಳು ತೆರೆದ ಹೃದಯಗಳಿಂದ ಯುವನನ್ನು ಸ್ವಾಗತಿಸಿದ್ದಾರೆ. ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಗನಿಗೆ ಅಪ್ಪು ಇದ್ದ ಹಾಗೆಯೇ ಇರು. ತಗ್ಗಿ ಬಗ್ಗಿ ನಡೆ ಎಂದು ಬುದ್ದಿ ಹೇಳಿದ್ದ ರಾಘವೇಂದ್ರ ರಾಜಕುಮಾರ್ ಯವ ರಿಲೀಸ್ ಸಂಭ್ರಮದಲ್ಲಿ ಭಾವುಕರಾಗಿದ್ಧಾರೆ. ತಂದೆ, ತಾಯಿ ಮತ್ತು ಚಿಕ್ಕಪ್ಪನನ್ನು ನೆನಪಿಸಿಕೊಂಡಿದ್ಧಾರೆ. ರಾಜಕುಮಾರ್, ಪಾರ್ವತಮ್ಮ ಹಾಗೂ ವರದಪ್ಪ ಅವರನ್ನು ನೆನಪಿಸಿಕೊಂಡಿದ್ಧಾರೆ ರಾಘವೇಂದ್ರ.
ನನ್ನನ್ನು, ಶಿವಣ್ಣನನ್ನು ಹಾಗೂ ನನ್ನ ತಮ್ಮನನ್ನು ಪರಿಚಯ ಮಾಡುವಾಗ ನಮ್ಮ ಜೊತೆ 3 ಶಕ್ತಿ ಇತ್ತು. ತಂದೆ, ತಾಯಿ ಹಾಗೂ ಚಿಕ್ಕಪ್ಪ ಇದ್ದರು. ಆದರೆ ಯುವ ಬಂದಾಗ ಯಾರೂ ಇಲ್ಲ. ನನ್ನ ಮಗ ಒಂದು ರೀತಿಯಲ್ಲಿ ಅನಾಥ ಆದನಲ್ಲ, ನನಗೂ ಹುಷಾರು ತಪ್ಪಿತು ಎಂಬ ಚಿಂತೆ ಕಾಡಿತು. ಇಂಥ ಸಮಯದಲ್ಲಿ ದೇವರು ಎರಡು ವ್ಯಕ್ತಿಗಳನ್ನು ಕಳಿಸಿಕೊಟ್ಟ ಎಂದಿರುವ ರಾಘವೇಂದ್ರ ರಾಜಕುಮಾರ್ ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ತಂದೆಗೂ.. ನಿರ್ದೇಶಕ ಸಂತೋಷ್ ಆನಂದರಾಮ್ ಅವರನ್ನು ತಾಯಿಗೂ ಹೋಲಿಸಿದ್ಧಾರೆ.
ಹೊಂಬಾಳೆ ಫಿಲ್ಮ್ಸ್ ಮತ್ತು ಸಂತೋಷ್ ಆನಂದ್ರಾಮ್ ಅವರು ನನ್ನ ಮಗನಿಗೆ ಒಂದೊಳ್ಳೆಯ ಪರಿಚಯ ಮಾಡಿಕೊಟ್ಟರು. ನಾನು ಜೀವಂತವಾಗಿ ಇರುವ ತನಕ ಅವರನ್ನು ಮರೆಯೋದಿಲ್ಲ. ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರ. ಒಳ್ಳೆಯ ಹೆಜ್ಜೆ ಹಾಕಿಕೊಟ್ಟಿದ್ದಾರೆ. ಇನ್ನು ನಡೆದುಕೊಂಡು ಹೋದರೆ ಅಭಿಮಾನಿಗಳು ಅವನನ್ನು ಕರೆದುಕೊಂಡು ಹೋಗುತ್ತಾರೆ ಎಂದಿರುವ ರಾಘವೇಂದ್ರ ತಮ್ಮ ಪುನೀತ್ ಅವರನ್ನೂ ನೆನಪಿಸಿಕೊಂಡಿದ್ದಾರೆ.
ರಾಘವೇಂದ್ರ ಅವರಿಗೆ ಹಾಗೆ ಅನ್ನಿಸಲಿಕ್ಕೆ ಕಾರಣವೂ ಇದೆ. ರಾಘವೇಂದ್ರ ರಾಜಕುಮಾರ್ ಅವರ ಮೊದಲ ದಿನಗಳಲ್ಲೆಲ್ಲ ಸ್ಕ್ರಿಪ್ಟ್ ಫೈನಲ್ ಮಾಡುತ್ತಿದ್ದವರು ವರದಪ್ಪ. ಆನಂತರ ಪಾರ್ವತಮ್ಮ ನೋಡುತ್ತಿದ್ದರು. ವರದಪ್ಪ ರಾಜ್ ಅವರ ತಮ್ಮ. ಅತ್ತಿಗೆ ಮತ್ತು ಭಾವಮೈದುನರ ಬಾಂಧವ್ಯ ಹೇಗಿತ್ತೆಂದರೆ.. ಇಬ್ಬರಲ್ಲಿ ಒಬ್ಬರು ಒಪ್ಪದೇ ಹೋದರೆ.. ಆ ಸಿನಿಮಾ ಕೈಬಿಟ್ಟಂತೆಯೇ ಲೆಕ್ಕ. ಅಂತಹ ಕೋ-ಆರ್ಡಿನೇಷನ್ ಇದ್ದ ಕಾರಣಕ್ಕೆ ವಜ್ರೇಶ್ವರಿ ಕಂಬೈನ್ಸ್ ಸಿನಿಮಾಗಳು ಸೋತಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸದ್ಯಕ್ಕೆ ಆ ದಾಖಲೆ ಬರೆದಿರುವುದು ಹೊಂಬಾಳೆ ಮಾತ್ರ.
ಸಿನಿಮಾ ನೋಡಿದಾಗ ಇದರಲ್ಲಿ ನಾನು-ನನ್ನ ಮಗ ಅಂತ ಅನಿಸಲಿಲ್ಲ. ನನ್ನ ತಮ್ಮ ಹಾಗೂ ನನ್ನ ಮಗ ಅನಿಸಿತು. ಎಲ್ಲ ಕಡೆ ಅವರೇ ಕಾಣಿಸುತ್ತಿದ್ದರು. ಅವನ ಛಾಯೆ ಬಂದು ಬಂದು ಹೋಗುತ್ತದೆ. ಒಂದು ಸ್ಟಂಪ್ನಲ್ಲಿ ಪವರ್ ಅಂತ ಇರುತ್ತದೆ. ಡಾ. ಪುನೀತ್ ರಾಜ್ಕುಮಾರ್ ರಸ್ತೆ ಅಂತ ಬರುತ್ತದೆ. ಕೊನೆವರೆಗೂ ನನ್ನ ಮಗನಿಗೆ ಆಶೀರ್ವಾದ ಮಾಡುತ್ತಾ ಹೋಗಿದ್ದಾನೆ. ಗುರು ಸಿನಿಮಾ ನೀವು ಮಾಡಬೇಕು ಅಂತ ಹೊಂಬಾಳೆ ಅವರ ಬಳಿ ಅಶ್ವಿನಿ ಮತ್ತು ಅಪ್ಪು ಕೇಳಿಕೊಂಡಿದ್ದರು. ಏನೇ ಬಂದರೂ ಅವರಿಬ್ಬರಿಗೆ ಇದನ್ನು ಅರ್ಪಿಸುತ್ತೇನೆ. ಇದನ್ನು ಅಪ್ಪು ಹಾಕಿದ ಭಿಕ್ಷೆ ಎಂದುಕೊಳ್ಳುತ್ತೇನೆ. ನಾನು ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದಾರೆ ಎಂದಿದ್ದಾರೆ.
ಈಗಿನ್ನೂ ಮಗನ ಜರ್ನಿ ಶುರುವಾಗಿದೆ. ಒಂದೇ ಸಿನಿಮಾದಲ್ಲಿ ಎಲ್ಲವನ್ನೂ ಸಾಬೀತು ಮಾಡೋಕೆ ಆಗಲ್ಲ. ಒಂದೊಂದಾಗಿಯೇ ಬರುತ್ತದೆ. ಒಳ್ಳೆಯ ಗೆಲುವು ನೀಡಿದ್ದಾರೆ. ಅಭಿಮಾನಿಗಳು ಅವನನ್ನು ಬರೀ ಬೆಳೆಸಿ ಅಂತ ನಾನು ಹೇಳಲ್ಲ. ಕಲಿಸಿ, ಕಲಿಸಿ, ಕಲಿಸಿ. ಆಮೇಲೆ ಬೆಳೆಸಿ ಎಂದು ಅಭಿಮಾನಿಗಳಿಗೂ ಮನವಿ ಮಾಡಿದ್ಧಾರೆ.
ದೊಡ್ಮನೆ ಹುಡುಗನ ಮೊದಲ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇತ್ತು. ನಿರೀಕ್ಷೆಯನ್ನು ಯುವ ಹುಸಿ ಮಾಡಿಲ್ಲ. ತಮ್ಮೊಳಗೊಬ್ಬ ನಟನಿದ್ಧಾನೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಒಳ್ಳೆಯ ಡ್ಯಾನ್ಸ್, ಫೈಟ್ʻಗಳಲ್ಲಿ ಮಿಂಚಿದ್ದಾರೆ. ನಿರ್ದೇಶಕ ಸಂತೋಷ್ ಆನಂದರಾಮ್ ಕೂಡಾ ʻರಾಜಕುಮಾರʼನಂತೆಯೇ ಮತ್ತೊಮ್ಮೆ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ಧಾರೆ.
ಮೊದಲ ದಿನ ಬೆಂಗಳೂರು, ಬಳ್ಳಾರಿ, ಮೈಸೂರು, ಬಳ್ಳಾರಿ, ಹೊಸಪೇಟೆಗಳಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿಯೇ ಇತ್ತು. ಅಪ್ಪ ರಾಘವೇಂದ್ರ ರಾಜಕುಮಾರ್, ತಾಯಿ ಮಂಗಳಾ, ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜಕುಮಾರ್, ತಂಗಿ ವಂದಿತಾ, ಅಣ್ಣ ವಿನಯ್ ರಾಜಕುಮಾರ್ ಮೊದಲಾದವರು ಥಿಯೇಟರಿಗೆ ಬಂದು ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದು ವಿಶೇಷವಾಗಿತ್ತು.
ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಯ್ತು ಅನ್ನೋ ರಿಪೋರ್ಟ್ ಇನ್ನೂ ಸಿಕ್ಕಿಲ್ಲ. ಹೊಂಬಾಳೆಯವರೂ ಹೇಳುತ್ತಿಲ್ಲ. ಆದರೆ ಮೊದಲ ದಿನ ಎಲ್ಲ ಕಡೆ ಹೌಸ್ʻಫುಲ್ ಶೋ ಆಗಿದೆ. ಚಿತ್ರದ ಬಗ್ಗೆ ಒಳ್ಳೆಯ ರಿಪೋರ್ಟ್ ಇರೋದ್ರಿಂದ ಯುವ ಡೆಬ್ಯೂ ಹಿಟ್ ಆಗುವ ನಿರೀಕ್ಷೆಯಂತೂ ಇದೆ.



