ಸಪ್ತಮಿ ಗೌಡ. ಕಾಂತಾರದ ಈ ಚೆಲುವೆ ಅಭಿನಯದಲ್ಲಷ್ಟೇ ಅಲ್ಲ, ಸ್ವಿಮ್ಮಿಂಗ್ ಚಾಂಪಿಯನ್ ಕೂಡಾ ಹೌದು. ಆಟೋಟಗಳಲ್ಲಿ ಸದಾ ಆಕ್ಟಿವ್ ಆಗಿರುವ ಸಪ್ತಮಿ ಗೌಡ, ಈಗ ಕುದುರೆ ಸವಾರಿ ಕಲಿಯುತ್ತಿದ್ಧಾರೆ. ಕುದುರೆ ಸವಾರಿ ಸಪ್ತಮಿ ಗೌಡ ಅವರಿಗೆ ಹೊಸದೇನಲ್ಲ. ಆದರೆ ಅಭ್ಯಾಸ ತಪ್ಪಿ ಹೋಗಿತ್ತು. ಇದೀಗ ಒಂದು ತೆಲುಗು ಚಿತ್ರಕ್ಕಾಗಿ ತಯಾರಿ ನಡೆಸುತ್ತಿರುವ ಸಪ್ತಮಿ ಗೌಡ, ತಯಾರಿಯನ್ನು ಶುರು ಮಾಡಿದ್ದಾರೆ.
ಸಪ್ತಮಿ ಗೌಡ ತೆಲುಗಿನಲ್ಲಿ ಈಗ ಒಂದು ಸಿನಿಮಾ ಒಪ್ಪಿಕೊಂಡಿದ್ಧಾರೆ. ನಿತಿನ್ ಅಭಿನಯದ ಸಿನಿಮಾ ಹೆಸರು ತಮ್ಮುಡು. ಆ ಸಿನಿಮಾದಲ್ಲಿ ಕುದುರೆ ಸವಾರಿ ಮಾಡುವ ಸೀನ್ʻಗಳಿವೆ. ಸಿನಿಮಾಗಳಲ್ಲಿ ಅಭಿನಯಿಸೋಕೆ ಕುದುರೆ ಸವಾರಿಯನ್ನೇ ಕಲಿಯಬೇಕು ಅಂತಿಲ್ಲ. ಆದರೆ ಸಪ್ತಮಿ ಹಾಗಲ್ಲ. ಜೆಪಿ ನಗರದಲ್ಲಿರೋ ಹಾರ್ಸ್ ರೈಡಿಂಗ್ ಅಕಾಡೆಮಿಗೆ ಹೋಗಿ ೪೦ ದಿನಗಳ ಕೋರ್ಸ್ ಕಲಿತಿದ್ದಾರೆ. ಕ್ರೀಡಾಪುಟಗಳಿಗೆ ಅದು ಅಸಾಧ್ಯವೂ ಅಲ್ಲ. ಈಗ ಸಪ್ತಮಿ ಬೆಟ್ಟಗಳನ್ನು ಹತ್ತಿಕೊಂಡು ಕುದುರೆ ಸವಾರಿ ಮಾಡುತ್ತಾರೆ. ಅಷ್ಟು ಪಳಗಿದ್ಧಾರೆ. ಸಪ್ತಮಿ ಗೌಡ ಅವರ ಕುದುರೆಯ ಹೆಸರು ಸೋಲಾರ್.
ಇನ್ನು ಸಪ್ತಮಿ ಗೌಡ ಯುವ ರಾಜ್ ಕುಮಾರ್ ಅಭಿನಯದ ಯುವ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ಧಾರೆ. ಯುವ ಚಿತ್ರದ ಮೇಲೆ ಇಡೀ ಕನ್ನಡ ಚಿತ್ರರಂಗ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಅದರ ಜೊತೆಯಲ್ಲೇ ಅಭಿಷೇಕ್ ಅಂಬರೀಷ್ ಅಭಿನಯದ ಕಾಳಿ ಚಿತ್ರಕ್ಕೂ ಸಪ್ತಮಿಯೇ ನಾಯಕಿ. ಇತ್ತೀಚೆಗೆ ಹಿಂದಿಯಲ್ಲಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸೈಂಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸಪ್ತಮಿ ಗೌಡ. ಒಟ್ಟಿನಲ್ಲಿ ಸಪ್ತಮಿ ಗೌಡ ಕುದುರೆಯ ಓಟ ಜೋರಾಗಿಯೇ ಇದೆ.



