ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ..
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ..
ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ತಲೆದೂಗದ ಸಂಗೀತ ಪ್ರೇಮಿಗಳಲ್ಲ. ಭಕ್ತಿಭಾವ ಪರವಶತೆಗೊಳಗಾಗದ ರಾಮಭಕ್ತರಂತೂ ಇಲ್ಲವೇ ಇಲ್ಲ. ಅಂತಹದ್ದೊಂದು ಅದ್ಭುತ ಭಕ್ತಿಗೀತೆಯನ್ನು ಹಲವರು ಹಾಡಿದ್ಧಾರೆ. ಇಂತಹ ಹಾಡನ್ನು ಇದೀಗ ಶ್ರೀರಾಮ ಮಂದಿರ ಟ್ರಸ್ಟ್ ಕೂಡಾ ಮೆಚ್ಚಿಕೊಂಡಿದೆ.
ನೀನಿಷ್ಟದಂತೆನ್ನ ಇಟ್ಟಿರುವೆ ರಾಮ
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
ಇಂತಹ ಅದ್ಭುತ ಗೀತೆಯನ್ನು ಬರೆದವರು ಗಜಾನನ ಶರ್ಮ. ಸಾಗರ ತಾಲೂಕಿನ ಹುಕ್ಕಲು ಗ್ರಾಮದವರು. ಇವರು ನಟ. ನಾಟಕಕಾರ. ನಿರ್ದೇಶಕ (ಸಿನಿಮಾ ನಿರ್ದೇಶಕರಲ್ಲ). ಇವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಯಾಗಿದ್ದವರು. ಸಾಹಿತ್ಯದ ಮೇಲೆ ಒಲವು ಇರಿಸಿಕೊಂಡಿದ್ದ ಗಜಾನನ ಶರ್ಮ ಹಲವು ಕಥೆ, ಕಾದಂಬರಿಗಳನ್ನೂ ಬರೆದಿದ್ದಾರೆ.
ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ
ವೈದೇಹಿಯಾಗುವೆನು ಒಡನಾಡು ರಾಮ
ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ
ಸಹವಾಸ ಕೊಡು ನಾನು ಸೌಮಿತ್ರಿ ರಾಮ
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಡಾ. ಗಜಾನನ ಶರ್ಮಾ ಅವರ ಈ ಗೀತೆ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ವನ್ನು ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಪ್ರಸಾರ ಮಾಡಲಾಗಿದೆ. ಈ ಬಗ್ಗೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಕನ್ನಡದಲ್ಲಿ ಟ್ವೀಟ್ ಮಾಡಿ, ‘ಪ್ರಭು ಶ್ರೀರಾಮಚಂದ್ರನ ಕುರಿತಾದ ಹೃದಯಕ್ಕೆ ಹತ್ತಿರವಾದ ಈ ಮನೋಜ್ಞ ಗೀತೆಯ ರಚನೆಗಾಗಿ ಡಾ. ಗಜಾನನ ಶರ್ಮರಿಗೆ ಅಭಿನಂದನೆಗಳು! ಜೈ ಶ್ರೀ ರಾಮ್!’ ಎಂದಿದೆ.
ಗಜಾನನ ಶರ್ಮಾ ಮೈಸೂರಿನ ಎನ್‌ಐಇ ಕಾಲೇಜಿನಿಂದ ಎಂ ಟೆಕ್ ಪದವಿ, ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಎಂಎ, ಹಂಪಿಯ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಒಂದು ಲೆಕ್ಕಾಚಾರದ ಪ್ರಕಾರ 2 ಕೋಟಿ ಸಲ ಈ ಹಾಡನ್ನು ಮೀಡಿಯಾದಲ್ಲಿ ಕೇಳಲಾಗಿದೆ. ಯೂಟ್ಯೂಬ್‌ನಲ್ಲಿ 1.3 ಲಕ್ಷ, ಇತರ ಮೀಡಿಯಾಗಳಲ್ಲಿ 70 ಲಕ್ಷ ಸಲ ಕೇಳಲಾಗಿದೆ. ಈ ಹಾಡಿಗೆ ಶರ್ಮಾ ಅವರ ಪುತ್ರ ಸಾಕೇತ್ ಶರ್ಮಾ ಸಂಗೀತ ಸಂಯೋಜಿಸಿದರು. ಕೆ.ವಿ.ಸುಪ್ರಭಾ ಅದನ್ನು ಹಾಡಿದ್ದರು.
ತಮಿಳು ತೆಲುಗು ತುಳು ಭಾಷೆಗಳಿಗೆ ಅನುವಾದವಾಗಿ ಅಲ್ಲಿ ಕೂಡ ಅದನ್ನು ಹಾಡಲಾಗಿದೆ. ಆದಿಚುಂಚನಗಿರಿ, ಹೊಸನಗರ ಶ್ರೀಗಳು ಕೂಡ ಇದಕ್ಕೆ ದನಿಗೂಡಿಸಿದ್ದಾರೆ.
ನನ್ನ ಭಜನೆ ಅಯೋಧ್ಯೆಯ ರಾಮನನ್ನು ತಲುಪಿರುವುದು ಗೊತ್ತೇ ಇರಲಿಲ್ಲ. ಒಬ್ಬರು ಕರೆ ಮಾಡಿ ಹೀಗೆ ನಿಮ್ಮ ಹಾಡು ಅಯೋಧ್ಯೆಯಲ್ಲಿ ಪ್ರಸಾರವಾಗಿದೆ ಎಂದು ತಿಳಿದಾಗ ಎಲ್ಲಿಲ್ಲದ ಸಂತೋಷ, ಗೀತೆ ರಚನೆ ಮಾಡಿದ್ದಕ್ಕೂ ಸಾರ್ಥಕವಾಯಿತು ಎನ್ನುವ ಭಾವ ಮೂಡಿದೆ. ಗೀತೆ ಪ್ರಸಾರ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಡಾ. ಗಜಾನನ ಶರ್ಮಾ ತಿಳಿಸಿದ್ದಾರೆ.



