ಕರ್ನಾಟಕ ರಾಜಕೀಯದಲ್ಲಿ ಇದು ಒಂದು ಹೊಸ ಇತಿಹಾಸವೇ ಸರಿ. ದೇಶಾದ್ಯಂತ ಕೋಲಾಹಲ ಎಬ್ಬಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ತಂದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅರೆಸ್ಟ್ ಆಗಿದ್ಧಾರೆ. ರೇವಣ್ಣ ಮಾಜಿ ಪ್ರಧಾನಿಗಳ ಮಗ. ಮಾಜಿ ಸಿಎಂ ಅಣ್ಣ. ಮಾಜಿ ಸಚಿವರೂ ಹೌದು. ಹಾಲಿ ಶಾಸಕ.. ಅವರ ಇಬ್ಬರು ಮಕ್ಕಳಲ್ಲಿ ಒಬ್ಬ ಸಂಸದ. ಮತ್ತೊಬ್ಬ ಮೇಲ್ಮನೆ ಶಾಸಕ.
ಆ ಮೂಲಕ ರಾಜಕಾರಣದ ಧುರೀಣ, ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್‌ನ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌ಡಿ ದೇವೇಗೌಡ ಅವರ ಕುಟುಂಬದ ಸದಸ್ಯರೊಬ್ಬರು ಬಂಧನಕ್ಕೆ ಒಳಗಾಗಿದ್ದಾರೆ. ಗೌಡರ ಕುಟುಂಬಸ್ಥರು ಬಂಧನಕ್ಕೆ ಒಳಗಾಗಿರುವುದು ಇದೇ ಮೊದಲಾದರೆ.. ಎಚ್‌ಡಿ ದೇವೇಗೌಡ ಅವರ ಪದ್ಮನಾಭನಗರದ ಮನೆಯಲ್ಲೇ ತಲೆಮರೆಸಿಕೊಂಡಿದ್ದು ಇನ್ನೊಂದು ವಿಶೇಷ. ಮಾಜಿ ಪ್ರಧಾನಿಗಳೊಬ್ಬರ ಮನೆಯಲ್ಲಿ ಕ್ರಿಮಿನಲ್ ಆರೋಪಿಯೊಬ್ಬರು ತಲೆ ಮರೆಸಿಕೊಂಡಿದ್ದು ದೇಶದ ಇತಿಹಾಸದಲ್ಲಿಯೇ ಇದೇ ಮೊದಲು. ಇನ್ನು ಪ್ರಜ್ವಲ್ ರೇವಣ್ಣ ಅವರ ವಿರುದ್ಧವೂ ಗಂಭೀರ ಪ್ರಕರಣಗಳಿದ್ದು, ಅವರು ಕೂಡಾ ಅರೆಸ್ಟ್ ಆಗುವ ಸಾಧ್ಯತ ಇದೆ. ಜೊತೆಗೆ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಇದೆ.
ಮಾಜಿ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿಯವರನ್ನು ಅರೆಸ್ಟ್ ಮಾಡಿದ್ದ ಪ್ರಕರಣ ಬಿಟ್ಟರೆ, ಮಾಜಿ ಪ್ರಧಾನಿಗಳೊಬ್ಬರ ಮನೆಗೆ ಪೊಲೀಸರು ಸರ್ಚ್ ವಾರೆಂಟ್ ಹಿಡಿದು ಹೋಗಿದ್ದು ಕೂಡಾ ಇದೇ ಮೊದಲು.
ವಿಡಿಯೋ ಕೇಸಿನಲ್ಲಿ ಅಲ್ಲ.. ಸಂತ್ರಸ್ತೆಯೊಬ್ಬರ ಕಿಡ್ನಾಪ್ ಕೇಸಿನಲ್ಲಿ ಬಂಧನ : ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾದ ಸಂತ್ರಸ್ತೆಯೊಬ್ಬರನ್ನು ರೇವಣ್ಣ ಕಿಡ್ನಾಪ್ ಮಾಡಿಸಿದ್ಧಾರೆ ಎಂದು ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ನ್ಯಾಯಾಲಯದ ಮೆಟ್ಟಿಲೇರಿದ್ದ ರೇವಣ್ಣ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಜಾಮೀನು ನಿರಾಕರಿಸಿದ ಬೆನ್ನಲ್ಲೇ ಎಸ್‌ಐಟಿ ತಂಡವು, ಎಚ್‌ಡಿ ದೇವೇಗೌಡ ಅವರ ಪದ್ಮನಾಭನಗರ ನಿವಾಸಕ್ಕೆ ಹೋಗಿ, ೨೫ ನಿಮಿಷ ಕಾದು ನಿಂತಿತು. ಕೊನೆಗೆ ರೇವಣ್ಣನವರೇ ಬಾಗಿಲು ತೆರೆದರು. ಅರೆಸ್ಟ್ ಆದರು.
ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ರೇವಣ್ಣ ಅವರನ್ನು ಏಕಾಏಕಿ ಅರೆಸ್ಟ್ ಮಾಡುವುದಕ್ಕೆ ಬರುವುದಿಲ್ಲ. ಸೂಕ್ತ ಸಾಕ್ಷಿಗಳ ಅವಶ್ಯಕತೆ ಇರುತ್ತದೆ. ಆದರೆ.. ರೇವಣ್ಣ ಪ್ರಜ್ವಲ್ ಅವರ ವಿಡಿಯೋಗಳಲ್ಲಿ ಇದ್ದರು ಎನ್ನಲಾದ ಸಂತ್ರಸ್ತೆಯೊಬ್ಬರನ್ನು ಕಿಡ್ನಾಪ್ ಮಾಡಿಸಿದ್ದ ಆರೋಪ ಹೊತ್ತಿದ್ದಾರೆ. ಕೆಆರ್ ನಗರ ಠಾಣೆಯಲ್ಲಿ ಮೇ 2ರಂದು ಎಫ್‌ಐಆರ್ ದಾಖಲಾಗಿತ್ತು. ಅಪಹರಣಕ್ಕೆ ಒಳಗಾಗಿದ್ದ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ಧಾರೆ. ಆಕೆ (ಸಂತ್ರಸ್ತೆ) ಸಿಕ್ಕಿದ್ದು ರೇವಣ್ಣ ಅವರ ಪಿಎ ಅವರ ಮನೆಯಲ್ಲಿ. ಹುಣಸೂರಿನಲ್ಲಿ. ಎಚ್‌ಡಿ ರೇವಣ್ಣ ಅವರ ಪಿಎ ರಾಜಶೇಖರ್ ಎನ್ನುವವರ ತೋಟದ ಮನೆಯಲ್ಲಿ ಮಹಿಳೆ ಇದ್ದರು.
ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಎನ್ನುವವರು ಏಪ್ರಿಲ್ 29ರಂದು ಸಂತ್ರಸ್ತ ಮಹಿಳೆಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದರು. ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದರು. ಶನಿವಾರ ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದರು.
ಭವಾನಿ ರೇವಣ್ಣಗೆ ಏಕೆ ಬಂಧನ ಭೀತಿ..?
ಅಪಹರಣ ಪ್ರಕರಣ ಸಂಬಂಧ ಮಹಿಳೆಯ ಪುತ್ರ ಕೆ.ಆರ್.ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಭವಾನಿ ರೇವಣ್ಣ ಹೆಸರು ಹೇಳಿದ್ಧಾರೆ. ಸತೀಶ್ ಬಾಬು ಅವರು ಸಂತ್ರಸ್ತ ಮಹಿಳೆಯನ್ನು ಭವಾನಿ ಅಕ್ಕ ನಿಮ್ಮನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಹೇಳಿ ಕರೆದುಕೊಂಡು ಹೋದರು ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ.. ಭವಾನಿ ಅವರನ್ನು ನೇರವಾಗಿ ಅರೆಸ್ಟ್ ಮಾಡುವುದಕ್ಕೆ ಬರುವುದಿಲ್ಲ. ಸೂಕ್ತ ಸಾಕ್ಷ್ಯಗಳು ಸಿಕ್ಕ ನಂತರವೇ ಅರೆಸ್ಟ್ ಮಾಡಬಹುದು.



