ಒಂದೇ ಒಂದು ಕ್ರಿಮಿನಲ್ ಕೇಸ್, ಸೆಲಬ್ರಿಟಿಗಳ ಹಣೆಬರಹವನ್ನೇ ಬದಲಾಯಿಸಿ ಬಿಡಬಲ್ಲದು. ಸದ್ಯಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣ, ದರ್ಶನ್ ಅವರನ್ನು ಶಾಶ್ವತವಾಗಿ ಜೈಲಿನಲ್ಲಿಯೇ ಇರುವಂತೆ ಮಾಡುತ್ತದಾ.. ಎಂಬ ಅನುಮಾನ ಶುರುವಾಗಿದೆ. ಏಕೆಂದರೆ, ದರ್ಶನ್ ಮತ್ತು ಪವಿತ್ರಾ ಗೌಡ ಅವರ ಮೇಲೆ ಒಟ್ಟಾರೆ 3991 ಪುಟಗಳ ಚಾರ್ಜ್ʻಶೀಟ್ ಸಲ್ಲಿಕೆಯಾಗಿದೆ. ಮಾಡಿರುವುದು ಸಾಮಾನ್ಯ ಕೊಲೆಯಲ್ಲ, ಈ ಪ್ರಕರಣದಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಪ್ಲಾನ್ ಮಾಡಿ ಕರೆತಂದು, ಗುಂಪುಗಟ್ಟಿಕೊಂಡು ಹಲ್ಲೆ ಮಾಡಿ, ಕೊಲೆ ಮಾಡಿದ ಆರೋಪ ಇದೆ. ಕ್ರಿಮಿನಲ್ ಕೇಸ್ ಚಿಕ್ಕದೂ ಅಲ್ಲ. ಸೆಕ್ಷನ್ನುಗಳೂ ಅಷ್ಟೇ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಅವರ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) 10 ಸೆಕ್ಷನ್‌ಗಳನ್ನು ಹಾಕಲಾಗಿದೆ. ಕೊಲೆ, ಅಪಹರಣ ಹಾಗೂ ಸಾಕ್ಷ್ಯ ನಾಶ ಸೇರಿ ಪ್ರತಿಯೊಬ್ಬರ ವಿರುದ್ಧವೂ ಕೇಸುಗಳಿವೆ. ಆದರೆ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರ ಮೇಲೂ ಒಂದೇ ರೀತಿಯ ಅಪರಾಧಗಳನ್ನು ಪಟ್ಟಿ ಮಾಡಲಾಗಿದ್ದು, ಇಬ್ಬರ ವಿರುದ್ಧವೂ ಒಂದೇ ರೀತಿಯ ಸೆಕ್ಷನ್ ಹಾಕಲಾಗಿದೆ. ಆ ಎಲ್ಲ ಸೆಕ್ಷನ್ನುಗಳೂ ಸಾಬೀತಾಗಿ, ಆ ಸೆಕ್ಷನ್ ಪ್ರಕಾರವೇ ಶಿಕ್ಷೆಯೂ ಆಗಿಬಿಟ್ಟರೆ, ದರ್ಶನ್ ಮರಣ ದಂಡನೆ ಎದುರಿಸಬೇಕಾಗಬಹುದು ಅಥವಾ ಜೀವಮಾನ ಪರ್ಯಂತ ಜೈಲಿನಲ್ಲೇ ಇರಬೇಕಾಗಿ ಬಂದರೂ ಆಶ್ಚರ್ಯವಿಲ್ಲ.
ಮರಣದಂಡನೆ.. ಜೀವಾವಧಿ.. ೧೦ ವರ್ಷ ಜೈಲು.. ಅಬ್ಬಬ್ಬಾ ಐಪಿಸಿ ಸೆಕ್ಷನ್..
ಐಪಿಸಿ ಸೆಕ್ಷನ್ 302 : ಕೊಲೆ ಮಾಡಿರುವ ಆರೋಪ. ಇದು ಸಾಬೀತಾದರೆ ಅಪರಾಧಿಗಳಿಗೆ ಮರಣದಂಡನೆ ವಿಧಿಸಬಹುದು ಅಥವಾ ಜೀವಾವಧಿ ಶಿಕ್ಷೆ ನೀಡಬಹುದು. ಎರಡು ಶಿಕ್ಷೆಗಳಲ್ಲಿ ಒಂದು ಶಿಕ್ಷೆ ವಿಧಿಸುವ ಅವಕಾಶ ನ್ಯಾಯಮೂರ್ತಿಗಳಿಗೆ ಇರುತ್ತದೆ.
ಐಪಿಸಿ ಸೆಕ್ಷನ್ 201 : ಸಾಕ್ಷ್ಯ ನಾಶ ಮಾಡಿರುವುದು ಹಾಗೂ ಸುಳ್ಳು ಮಾಹಿತಿ ನೀಡಿರುವ ಆರೋಪ. ಇದು ಸಾಬೀತಾದರೆ ಜೈಲು ಶಿಕ್ಷೆಯಾಗಲಿದೆ. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದ್ದಕ್ಕಂತೂ ಭರಪೂರ ಸಾಕ್ಷಿಗಳಿವೆ.
ಐಪಿಸಿ ಸೆಕ್ಷನ್ 120(ಬಿ) : ಕ್ರಿಮಿನಲ್ ಪಿತೂರಿ ಅಥವಾ ಅಪರಾಧಕ್ಕೆ ಕುಮ್ಮಕ್ಕು ನೀಡಿರುವ ಆರೋಪ. ಇದು ಸಾಬೀತಾದರೆ 6 ಜೈಲು ಶಿಕ್ಷೆಯಾಗಲಿದೆ. ರೇಣುಕಾಸ್ವಾಮಿಯನ್ನು ಸಂಚು ಮಾಡಿ, ಪಿತೂರಿ ಮಾಡಿಯೇ ಕರೆತಂದಿದ್ದಾರೆ.
ಐಪಿಸಿ ಸೆಕ್ಷನ್ 364 : ಅಪಹರಣ ಅಥವಾ ಅದಕ್ಕೆ ಬೆಂಬಲ ನೀಡಿರುವುದು ಸಾಬೀತಾದರೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದು ಅಥವಾ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅಪಹರಣ ಮಾಡಿಸಿದ್ದೇ ದರ್ಶನ್ ಎಂಬ ವಿಷಯವನ್ನು ಎಲ್ಲ ೧೬ ಜನ ಆರೋಪಿಗಳೂ ಒಪ್ಪಿಕೊಂಡಿದ್ದಾರೆ.
ಐಪಿಸಿ ಸೆಕ್ಷನ್ 355 : ಒಬ್ಬ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಹಲ್ಲೆ ನಡೆಸುವುದು. ಈ ಅಪರಾಧದಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇದೆ. ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿರುವುದು, ಎದೆಗೆ ಒದ್ದಿರುವುದು ಹಾಗೂ ಸಸ್ಯಾಹಾರಿಯಾಗಿದ್ದವನಿಗೆ ಮಾಂಸ ತಿನ್ನಿಸಿರುವುದು.. ಈ ಸೆಕ್ಷನ್ ವ್ಯಾಪ್ತಿಯಲ್ಲಿವೆ.
ಐಪಿಸಿ ಸೆಕ್ಷನ್ 143 : ಕಾನೂನು ಬಾಹಿರವಾಗಿ ಗುಂಪು ಸೇರಿ, ಕಾನೂನು ಬಾಹಿರ ಚಟುವಟಿಕೆ ನಡೆಸುವುದು. ಇದು ಅಪರಾಧದ ತೀವ್ರತೆ ಮೇಲೆ ನಿರ್ಧಾರವಾಗಲಿದೆ. ಗುಂಪುಗೂಡಿ ಕೊಲೆ ಮಾಡಿರುವುದು.
ಐಪಿಸಿ ಸೆಕ್ಷನ್ 147 : ಗುಂಪು ಗಲಭೆ. ಈ ಸೆಕ್ಷನ್ ಮೇಲೆ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಗುಂಪುಗೂಡಿ ಕೊಲೆ ಮಾಡಿರುವ ಆರೋಪ ಇದೆ.
ಐಪಿಸಿ ಸೆಕ್ಷನ್ 148 : ಮಾರಣಾಂತಿಕ ಆಯುಧ ಬಳಕೆ ಮಾಡಿರುವುದು. ಇದರಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ಕೊಲೆಗೆ ದೊಣ್ಣೆ, ಲಾಠಿ ಮತ್ತು ಮೆಗ್ಗರ್ ಯಂತ್ರಗಳನ್ನು ಬಳಸಿ ಚಿತ್ರಹಿಂಸೆ ನೀಡಿರುವುದು
ಐಪಿಸಿ ಸೆಕ್ಷನ್ 149 : ಗುಂಪು ಹಲ್ಲೆಯಲ್ಲಿ ಭಾಗಿಯಾಗಿರುವುದು. ಇದೂ ಕೂಡಾ ತೀವ್ರತೆಯ ಮೇಲೆ ಶಿಕ್ಷೆಯ ತೀವ್ರತೆಯೂ ಬದಲಾಗಲಿದೆ. ಇಲ್ಲಿ ಪೊಲೀಸರು ಆರೋಪಿಗಳಿಗೆ ಘಟನೆಯ ತೀವ್ರತೆ ಮತ್ತು ಉದ್ದೇಶದ ಅರಿವು ಇತ್ತು ಎಂದು ಪೊಲೀಸರು ಸಾಬೀತು ಪಡಿಸಬೇಕು.
ಐಪಿಸಿ ಸೆಕ್ಷನ್ 34 : ಒಂದೇ ಉದ್ದೇಶ ಇಟ್ಟುಕೊಂಡು ಗುಂಪು ಹಲ್ಲೆಯಲ್ಲಿ ಭಾಗಿಯಾಗಿರುವುದು. ಈ ಪ್ರಕರಣದಲ್ಲಿ ಎಲ್ಲರ ಉದ್ದೇಶವೂ ರೇಣುಕಾಸ್ವಾಮಿಯ ಕೊಲೆಯೇ ಆಗಿತ್ತು ಎನ್ನುತ್ತಿದೆ ಪೊಲೀಸ್ ಚಾರ್ಜ್‌ಶೀಟ್.
ಸೆಕ್ಷನ್ ನಂ.೩೦೨ ಪ್ರಕಾರ ದರ್ಶನ್ ಮತ್ತು ಪವಿತ್ರಾ ಗೌಡ ಅವರಿಗೆ ಜೀವಾವಧಿ ಅಥವಾ ಮರಣದಂಡನೆ ವಿಧಿಸಬಹುದಾದ ಅವಕಾಶ ಇದೆ. ಆದರೆ ಚಾರ್ಜ್ʻಶೀಟ್ ಹೇಳಿರುವಂತೆ ಪೊಲೀಸರು ಇದನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಬೇಕಷ್ಟೆ. ಎರಡನೆಯ ಅತಿ ದೊಡ್ಡ ಅಪರಾಧ ಎಂದರೆ, ಸಾಕ್ಷ್ಯ ನಾಶ ಮಾಡಿರುವುದು. ಇದು ಸಾಬೀತಾದರೆ ೬ ವರ್ಷ ಕನಿಷ್ಠ ಜೈಲು ಶಿಕ್ಷೆ. ಇನ್ನುಳಿದಂತೆ ೧೫ ಆರೋಪಿಗಳಿಗೆ ಪ್ರತ್ಯೇಕ ಕೇಸ್ ಹಾಕಲಾಗಿದೆ.
ಅಂದರೆ ದರ್ಶನ್ ಅವರು ಮಾಡಿದ ಹಲ್ಲೆಯಿಂದಲೇ ರೇಣುಕಾಸ್ವಾಮಿ ಮೃತಪಟ್ಟಿದ್ದರೆ, ಆಗ ದರ್ಶನ್ ಅವರನ್ನು ಬಚಾವ್ ಮಾಡಿಸುವುದು ಸಿವಿ ನಾಗೇಶ್ ಅಂತಹ ವಕೀಲರು ವಾದಿಸಿದರೂ ಕಷ್ಟ. ಆದರೆ ಚಾರ್ಜ್‌ಶೀಟ್ ಪ್ರಕಾರ, ರೇಣುಕಾಸ್ವಾಮಿ ಮೃತಪಟ್ಟಾಗ ದರ್ಶನ್ ಆಗಲೇ ಶೆಡ್ಡಿನಿಂದ ಹೊರಬಂದಿದ್ದರು ಎಂಬ ಮಾಹಿತಿ ಇದೆ. ಆದರೆ, ಇದು ರೇಣುಕಾಸ್ವಾಮಿ ಸಾವಿಗೆ ದರ್ಶನ್ ಹೊಡೆತಗಳು ಕಾರಣ ಅಲ್ಲ ಎನ್ನಲು ಸಾಧ್ಯವಿಲ್ಲ.



