ನವಿಲುಗರಿಯನ್ನ (navilu gari) ಪುಸ್ತಕದಲ್ಲಿಟ್ಟುಕೊಂಡರೆ ಮರಿ ಹಾಕುತ್ತೆ ಅನ್ನೋದು ಬಾಲ್ಯದ ನಂಬಿಕೆ. ಚೆನ್ನಾಗಿ ಓದು ತಲೆಗೆ ಹತ್ತುತ್ತೆ ಎನ್ನುವವರೂ ಇದ್ದರು. ಇದ್ದಾರೆ. ಹೊಲಗಳಲ್ಲಿ ಹೋದರೆ ನವಿಲುಗಳು ಬೀಳಿಸಿರುವ ನವಿಲುಗರಿಗಳು ರಾಶಿಯಾಗಿ ಸಿಗುತ್ತವೆ. ಆದರೆ.. ಹಾಗಂತ ನವಿಲುಗರಿಯನ್ನು ಮನೆಯಲ್ಲಿಟ್ಟುಕೊಂಡರೆ ಅದು ಅಪರಾಧ. ನವಿಲು ಗರಿಗಳ ವಿಶೇಷ ವಿನ್ಯಾಸಗಳಿರುವ ಆಟಿಕೆ, ಆಭರಣ ಇಟ್ಟುಕೊಳ್ಳೋದು ಕ್ರೈಂ. ಅಷ್ಟೇ ಏಕೆ, ದರ್ಗಾಗಳಲ್ಲಿ ಹರಸುವ ನವಿಲುಗರಿಗಳನ್ನೂ ಬಳಸೋದು ಅಪರಾಧ.
ಆನೆಯ ಕೂದಲಿನ ಉಂಗುರ (elephant tail) ಹಾಕಿಕೊಳ್ಳೋದೂ ಕ್ರೈಂ. ಹುಲಿ ಉಗುರಿನ ಲಾಟೆಕ್ ಮಾಡಿಕೊಳ್ಳೋದು, ಹುಲಿಗಳ ಹಲ್ಲು, ಆನೆ ದಂತ, ಜಿಂಕೆ ಹಾಗೂ ಕಡವೆಗಳ ಕೊಂಬು, ಹುಲಿ, ಜಿಂಕೆಗಳ ಚರ್ಮ, ಆನೆ ಕೂದಲುಗಳಿಂದ ಉಂಗುರ ತಯಾರಿಸಿಕೊಳ್ಳೋದು.. ಹೀಗೆ ಪ್ರಾಣಿಗಳ ದೇಹದ ಭಾಗಗಳನ್ನ ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಳ್ತಾರೆ. ಜಿಂಕೆ ಹಾಗೂ ಕಡವೆಗಳ ಕೊಂಬುಗಳನ್ನ ಹಿಂದಿನ ಕಾಲದಲ್ಲಿ ಮನೆಯ ಗೋಡೆಗಳಲ್ಲಿ ನೇತು ಹಾಕ್ತಿದ್ರು. ತಾವೇ ಕೊಂದು ಹಾಕಿದ ಹುಲಿ ಚರ್ಮವನ್ನ, ಜಿಂಕೆಗಳ ಚರ್ಮವನ್ನ ಮನೆಯಲ್ಲಿ ಪ್ರದರ್ಶನಕ್ಕೆ ಇಡ್ತಿದ್ರು. ಈಗಲೂ ಇಂತಹ ವಸ್ತುಗಳನ್ನು ಹಲವರ ಮನೆಯಲ್ಲಿ ನೋಡಬಹುದು. ಹುಡುಕಿದರೆ ಸೆಲಬ್ರಿಟಿ, ರಾಜಕಾರಣಿಗಳು, ಶ್ರೀಮಂತರ ಮನೆಗಳಲ್ಲಿ ಇಂತಹ ಕೆಲವಾದರೂ ಅಲಂಕಾರಿಕ ವಸ್ತುಗಳಾಗಿ ಇರುತ್ತವೆ. ಆದರೆ ಇದು ಕ್ರೈಂ.
ಋಷಿ ಮುನಿಗಳು ಜಿಂಕೆ ಚರ್ಮದ ಮೇಲೆ, ಹುಲಿ ಚರ್ಮದ ಮೇಲೆ ಕೂತು ಧ್ಯಾನ ಮಾಡೋ ಫೋಟೋಗಳನ್ನೂ ನೀವು ಕಂಡಿರಬಹುದು. ಜಿಂಕೆಯ ಚರ್ಮದ ಚಾಪೆಯನ್ನ ಕೃಷ್ಣಾಜಿನ ಎನ್ನುತ್ತಾರೆ. ವಿನಯ್ ಗುರೂಜಿ ಹುಲಿ ಹಾಸಿಗೆಯ ಮೇಲೆ ಕುಳಿತಿದ್ದ ಫೋಟೋ ಕೂಡಾ ವೈರಲ್ ಆಗಿತ್ತು. ಆದರೆ ಭಕ್ತರೊಬ್ಬರು ಕಾಣಕೆಯಾಗಿ ಕೊಟ್ಟಿದ್ದ ಅದನ್ನು ಅವರು ಆಗಲೇ ಅರಣ್ಯ ಇಲಾಖೆಗೆ ವಾಪಸ್ ಕೊಟ್ಟುಬಿಟ್ಟಿದ್ಧಾರೆ. ಇನ್ನು ಅವರಿಗೆ ಕಾಣಿಕೆ ಕೊಟ್ಟಿದ್ದ ಭಕ್ತರೂ ಕೂಡಾ ಅದನ್ನು ಇಟ್ಟುಕೊಳ್ಳೋದಕ್ಕೆ ಲೈಸೆನ್ಸ್ ಇಟ್ಟುಕೊಂಡಿದ್ದರು. ಅಂದರೆ ಅದು ಅವರ ಮನೆಯಲ್ಲಿ ಬ್ರಿಟಿಷರ ಕಾಲದಿಂದಲೂ ಇತ್ತು. ಅದು ಬೇರೆ ಕಥೆ.
ಹಿಂದಿನ ಕಾಲದಲ್ಲಿ ಇವೆಲ್ಲವೂ ಅಪರಾಧ ಆಗಿರಲಿಲ್ಲ. ಕೆಲವರು ಹುಲಿಗಳನ್ನ ಶಿಕಾರಿ ಮಾಡಿ ಅವುಗಳ ಚರ್ಮವನ್ನ ಮನೆಯಲ್ಲಿ ಪ್ರದರ್ಶನಕ್ಕೆ ಇಡುವ ಮೂಲಕ ತಮ್ಮ ಶೌರ್ಯವನ್ನ ಹೇಳಿಕೊಳ್ಳೋರು. ಆದರೆ, ಕಾಲ ಬದಲಾದಂತೆ ಕಾನೂನು ಬದಲಾಗಿದೆ. ಅದರಲ್ಲೂ ವನ್ಯ ಜೀವಿಗಳ ಸಂಖ್ಯೆ ಕಡಿಮೆ ಆಗುತ್ತಿದ್ದಂತೆಯೇ ಕಾನೂನುಗಳೂ ಕೂಡಾ ಬಿಗಿಯಾಗಿವೆ. 1972ರಿಂದ ದೇಶದಲ್ಲಿ ವನ್ಯಜೀವಿ ರಕ್ಷಣಾ ಅಧಿನಿಯಮ (Wildlife Protection Act 1972) ಜಾರಿಯಲ್ಲಿದೆ. ಈ ಕಾನೂನು ಕಾಡಿನ ಪ್ರಾಣಿಗಳ ರಕ್ಷಣೆಗೆ ಬದ್ಧವಾಗಿದೆ. ಕಾಡು ಪ್ರಾಣಿಗಳ ಬೇಟೆ, ಮಾಂಸ ಭಕ್ಷಣೆ ಹಾಗೂ ಅವುಗಳ ದೇಹದ ಬಿಡಿ ಭಾಗಗಳ ಮಾರಾಟವನ್ನ ತಡೆಯೋದಕ್ಕಾಗಿ ಈ ಕಾನೂನು ರೂಪಿಸಲಾಗಿದೆ.
ಈ ಕಾನೂನಿನ ಪ್ರಕಾರ, ಯಾವುದೇ ವನ್ಯ ಜೀವಿಗಳನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ. ಕಾಡು ಪ್ರಾಣಿಗಳ ಚರ್ಮವನ್ನ ಹದ ಮಾಡಿ ಅಲಂಕಾರಿಕ ವಸ್ತುಗಳನ್ನಾಗಿ ಬಳಸುವಂತಿಲ್ಲ. ವನ್ಯ ಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಅಪರಾಧ. ಹಾವಿನ ವಿಷವನ್ನೂ ಸಂಗ್ರಹ ಮಾಡುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ, ಮಾರಾಟ ಮಾಡುವಂತಿಲ್ಲ. ಯಾವುದೇ ವನ್ಯ ಜೀವಿಯ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ ಯಾವುದೇ ಭಾಗವನ್ನು ಸಂಗ್ರಹಿಸೋದು, ಸಾಗಾಟ ಮಾಡೋದು, ಮಾರಾಟ ಮಾಡೋದು ಹಾಗೂ ಬಳಕೆ ಮಾಡೋದು ಅಪರಾಧ. 2022ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಹಲವು ಲೋಪದೋಷಗಳನ್ನ ಸರಿಪಡಿಸಲಾಗಿದೆ.



