ಬುದ್ದಿವಂತ (Buddivantha) ಚಿತ್ರವನ್ನು ಕನ್ನಡ ಪ್ರೇಕ್ಷಕರು ಮರೆಯುವಂತೆಯೇ ಇಲ್ಲ. ಪಂಚಾಮೃತ ಎಂಬ ಚಾಲಾಕಿಯ ಪಾತ್ರದಲ್ಲಿ ಉಪ್ಪಿ (Upendra) ಮನರಂಜಿಸಿದ್ದರು. ಬುದ್ದಿವಂತ ಚಿತ್ರದ ಡೈಲಾಗುಗಳು ಈಗಲೂ ಜನಪ್ರಿಯ. 2008ರ ಸೂಪರ್ ಹಿಟ್ ಸಿನಿಮಾ ಬುದ್ದಿವಂತ. ಪೂಜಾಗಾಂಧಿ (Pooja Gandhi), ಸುಮನ್ ರಂಗನಾಥನ್ (Suman Rangantah), ಬೃಂದಾ ಪರೇಖ್, ಸಲೋನಿ ಅಸ್ವಾನಿ, ಲಕ್ಷ್ಮೀ, ಹೇಮಾ ಚೌಧರಿ ಮುಂತಾದವರು ನಟಿಸಿದ್ದ ಸಿನಿಮಾ ಬುದ್ದಿವಂತ. ಅದಾದ ಮೇಲೆ ಇತ್ತೀಚೆಗೆ ಬುದ್ದಿವಂತ 2 ಚಿತ್ರವನ್ನು ಘೋಷಿಸಿದ್ದರು.
ಚಮಕ್, ಅಯೋಗ್ಯ, ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಡಾ ಟಿ ಆರ್ ಚಂದ್ರಶೇಖರ್, ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿನಿರ್ಮಾಣವಾಗಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ ಬುದ್ದಿವಂತ 2 ಜುಲೈ 2ಕ್ಕೆ ರಿಲೀಸ್ ಆಗಲಿದೆ. ಉಪೇಂದ್ರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡುವುದಾಗಿ ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಘೋಷಿಸಿದ್ದಾರೆ.
ಬುದ್ದಿವಂತ 2 ಡೈರೆಕ್ಟರ್ ಜಯರಾಂ ಮಾಧವನ್. ಸೋನಲ್ ಮಂಥೆರೋ (Sonal Manthero), ಮೇಘನಾ ರಾಜ್ (Meghana Raj) ನಾಯಕಿಯರು. ಶ್ರೀನಗರ ಕಿಟ್ಟಿ (Srinagara Kitti) ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಬುದ್ದಿವಂತ ಚಿತ್ರದಲ್ಲಿ ಉಪೇಂದ್ರ ಪಂಚಾಮೃತ ಎನ್ನುವ ಚಾಲಾಕಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಬೇರೆ ಬೇರೆ ಹೆಸರುಗಳಲ್ಲಿ ಯುವತಿಯರನ್ನು ಮೋಸ ಮಾಡುವ ಕೆಲಸ ಮಾಡಿದ್ದರು. ‘ಬುದ್ದಿವಂತ- 2’ ಕಥೆಗೂ ಈ ಹಿಂದಿನ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಬರೀ ಟೈಟಲ್ ಮಾತ್ರ ತೆಗೆದುಕೊಳ್ಳಲಾಗಿದೆ. ಆದರೆ ಇಲ್ಲಿ ಹೊಸ ಕಥೆಯೇ ಇರಲಿದೆ. ತನ್ನ ಬುದ್ದಿವಂತಿಕೆಯಿಂದ ಈ ಬಾರಿ ನಾಯಕ ಸಮಸ್ಯೆಗಳಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ಸಿನಿಮಾ ಕಥೆ.



