ಒಂದು ಚಾಳಿ ಇದೆ. ಅದು ಎಲ್ಲ ರಾಜಕಾರಣಿಗಳಲ್ಲೂ ಇದೆ. ಸಾಮಾನ್ಯ ಜನರಲ್ಲೂ ಇದೆ. ಪರನಾರಿಯನ್ನು ಕಣ್ಣೆತ್ತಿ ನೋಡದವನಿಗೆ ಶ್ರೀರಾಮಚಂದ್ರನ ಅಪರಾವತಾರ ಎನ್ನುವುದು, ನಾನ್ ಸುಳ್ಳು ಹೇಳಲ್ಲಪ್ಪ ಎನ್ನುವವನಿಗೆ ಸತ್ಯ ಹರಿಶ್ಚಂದ್ರನ ತುಂಡು ಎನ್ನುವುದು.. ಹೆಚ್ಚು ಜೂಜಾಡುವವನಿಗೆ ಧರ್ಮರಾಯನ್ ತರಾ ಆಗ್ಬೇಡ ಎಂದು ಎಚ್ಚರಿಸುವುದೂ.. ಹೀಗೆ.. ಆದರೆ.. ಹಲ್ಕಾ ಕೆಲಸ ಮಾಡಿದವರಿಗೆ ಸಂಬಂಧವೇ ಇಲ್ಲದ ದೇವರನ್ನು ಎಳೆದು ತರುವುದು ಇತ್ತೀಚೆಗೆ ಕೆಲವರ ಚಾಳಿಯಾಗಿಬಿಟ್ಟಿದೆ.
ಈಗ ಆ ಕೆಲಸ ಮಾಡಿರುವುದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ. ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣವನ್ನು ನೋಡಿದರೆ ಶ್ರೀ ಕೃಷ್ಣ ರೆಕಾರ್ಡ್ ಮುರಿಯಬೇಕು ಅನ್ನೋದು ಇತ್ತೊ ಏನೋ..? ಆದರೆ, ಗಿನ್ನೆಸ್ ರೆಕಾರ್ಡ್ ಅಂತೂ ಆಗುತ್ತೆ ಎನಿಸುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ ತಿಮ್ಮಾಪುರ.
ವಿಜಯಪುರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ಕುರಿತು ಮಾತನಾಡಿದ ಅವರು, ಇದು ದೇಶದಲ್ಲಿಯೆ ಗಿನ್ನಿಸ್ ದಾಖಲೆಯಾಗುತ್ತೆ ಏನೋ. ಇಂಥದ್ದನ್ನ ಹಿಂದೆಂದೂ ಕಂಡಿಲ್ಲ. ಇದು ಗಿನ್ನಿಸ್ ದಾಖಲೆಯಾಗುತ್ತೆ ಎನ್ನುವ ಭಾವನೆ ನಮ್ಮದಾಗಿದೆ. ಸಂಸದ ಪ್ರಜ್ವಲ್ ರೇವಣ್ಣಗೆ ಶ್ರೀ ಕೃಷ್ಣ ರೆಕಾರ್ಡ್ ಮುರಿಯಬೇಕು ಅನ್ನೋದು ಮನಸ್ಸಿನಲ್ಲಿ ಇತ್ತೊ ಏನೋ? ಶ್ರೀ ಕೃಷ್ಣನ ಮೇಲಿನ ಭಕ್ತಿ ಭಾವಕ್ಕೆ ಹೆಣ್ಣು ಮಕ್ಕಳು ಪರವಶವಾಗುತ್ತಿದ್ದರು. ಈ ರೀತಿಯ ಘಟನೆ ಆಗಿರಲಿಲ್ಲ. ಈಗ ಎಲ್ಲ ರೆಕಾರ್ಡ್ ಮುರಿಯಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಅಸಹ್ಯ ಹುಟ್ಟಿಸುತ್ತಿರುವ ಕೆಲಸ. ಅವರ ಮನೆಯವರೇ ಒಪ್ಪುತ್ತಿಲ್ಲ. ಯಾರೊಬ್ಬರೂ ಪ್ರಜ್ವಲ್ ಮಾಡಿದ್ದು ಸರಿ, ಆತ ಅಮಾಯಕ ಎಂದು ಹೇಳುತ್ತಿಲ್ಲ. ಆದರೆ.. ಪ್ರಜ್ವಲ್ ಅವರಿಗೂ ಶ್ರೀಕೃಷ್ಣಗೂ ಹೋಲಿಕೆ ಯಾಕೆ..? ಶ್ರೀಕೃಷ್ಣ ಯಾರನ್ನೂ ಅತ್ಯಾಚಾರ ಮಾಡಿಲ್ಲ. ಕಿರುಕುಳ ಕೊಟ್ಟಿಲ್ಲ. ಬದಲಿಗೆ.. ದ್ರೌಪದಿಯ ಮಾನ ಕಾಪಾಡಿದವನು.
ಇದಕ್ಕೆಲ್ಲ ಕಾರಣವಾಗುವುದು ಒಂದು ಕಥೆ. ಶ್ರೀಕೃಷ್ಣನಿಗೆ 16 ಸಾವಿರ ಹೆಂಡಿರು ಎಂಬ ಕಥೆ. ಕೆಲವರು ಅದನ್ನು ಲಕ್ಷಗಳಿಗೂ ಏರಿಸುತ್ತಾರೆ ಬಿಡಿ.. ಒಂದೊಂದು ಪುರಾಣದಲ್ಲಿ ಒಂದೊಂದು ನಂಬಿಕೆಯ ಕಥೆ ಇದೆ. ಮಹಾಭಾರತದಲ್ಲಿ ಜರಾಸಂಧ ಗೊತ್ತಲ್ಲ. ಅದೇ ಭೀಮಸೇನನಿಂದ ಸಂಹಾರವಾದವನು. ಜರಾಸಂಧನ ಕಾಲುಗಳನ್ನು ಸಿಗಿದು, ವಿರುದ್ಧ ದಿಕ್ಕಿಗೆ ಎಸೆದು ಕೊಂದವನು ಬಲಭೀಮ. ಅದಕ್ಕೆ ನೆರವಾದವನು ಶ್ರೀಕೃಷ್ಣ.
ಆ ಜರಾಸಂಧ ತನ್ನ ಸೆರೆಮನೆಯಲ್ಲಿ ಸಾವಿರಾರು ಮಹಿಳೆಯರನ್ನು ಬಂಧಿಸಿಟ್ಟಿದ್ದ. ಹಾಗೆ ಬಂಧನದಲ್ಲಿದ್ದವರನ್ನೆಲ್ಲ ಮುಕ್ತ ಮಾಡಿದ ಮೇಲೆ.. ಆ ಮಹಿಳೆಯರಿಗೆ ಒಂದು ನೆಲೆಯನ್ನೂ ಕಾಣಿಸಬೇಕಿತ್ತು. ಪರಪುರುಷನ ಸೆರೆಯಲ್ಲಿದ್ದು ಬಂದ ಮಹಿಳೆಯರನ್ನು ಸಮಾಜ ನಿಕೃಷ್ಟವಾಗಿ ನೋಡುವ ಅಪಾಯವನ್ನರಿತ ಶ್ರೀಕೃಷ್ಣ, ರುಕ್ಮಿಣಿ, ಸತ್ಯಭಾಮೆ.. ಆ ಮಹಿಳೆಯರೆಲ್ಲರಿಗೂ ಶ್ರೀಕೃಷ್ಣನೇ ಗಂಡ ಎಂದು ಘೋಷಿಸಿಬಿಟ್ಟರು. ಆ ಮೂಲಕ ಶ್ರೀಕೃಷ್ಣನ ಪತ್ನಿ ಎಂದರೆ.. ಹೀಯಾಳಿಸುವವರು ಎಚ್ಚರಿಕೆಯಿಂದಿರುತ್ತಾರೆ ಎಂಬ ಉದ್ದೇಶವಷ್ಟೇ.
ಹಾಗೆ.. ಸಾವಿರಾರು ಮಹಿಳೆಯರ ಮಾನ, ಪ್ರಾಣ ಉಳಿಸಿದ ಶ್ರೀಕೃಷ್ಣನಿಗೂ.. ಈ ಪ್ರಜ್ವಲ್ ರೇವಣ್ಣ ಅವರಿಗೂ ಎಲ್ಲಿಂದ ಲಿಂಕ್ ಮಾಡುತ್ತೀರಿ.. ತಿಮ್ಮಾಪುರ ಅವರೇ.. ನಾನ್ಸೆನ್ಸ್.



