ಮಠ ಗುರು ಪ್ರಸಾದ್. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳ ನಂತರ ಅವರ ಸಿನಿಮಾಗಳಿಗಿಂತ ಹೆಚ್ಚು ಅವರ ಬಾಯಿ ಮಾತನಾಡಿದ್ದೇ ಜಾಸ್ತಿ. ಅತ್ತ ಒಳ್ಳೆ ಸಿನಿಮಾಗಳೂ ಬರಲಿಲ್ಲ. ಇತ್ತ ಒಳ್ಳೆಯ ಹೆಸರೂ ಬರಲಿಲ್ಲ. ಇದೀಗ ಮತ್ತೊಮ್ಮೆ ಕಾಂಟ್ರವರ್ಸಿ ಹುಡುಕಿ ಹುಡುಕೀ ಸಿನಿಮಾ ಮಾಡಿದ್ದಾರೆ. ಕಥೆ ಗೊತ್ತಿಲ್ಲ. ಹೆಸರು ರಂಗನಾಯಕ. ಇದು ಗುರುಪ್ರಸಾದ್ ಮತ್ತು ಜಗ್ಗೇಶ್ ಸಿನಿಮಾ. ಹಾಗಂತ ಇದು ರಂಗನಾಯಕಿ ಚಿತ್ರದ ಮೇಲ್ ವರ್ಷನ್ ಅಲ್ಲ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಟ್ರೇಲರ್ ಹೊರಬಿದ್ದಿದೆ. ವಿಶೇಷವೆಂದರೆ ಟ್ರೇಲರಿನಲ್ಲಿ ಆಲ್ʻಮೋಸ್ಟ್ ಕನ್ನಡ ಚಿತ್ರರಂಗದ ಸ್ಟಾರ್ ನಟರ ಲಿಸ್ಟೇ ಇದೆ.
ಶಿವಣ್ಣ, ಸುದೀಪ್, ಯಶ್, ದರ್ಶನ್ ಸೇರಿದಂತೆ ಕಲ್ಪನಾ, ವಿಷ್ಣುವರ್ಧನ್, ಅಂಬರೀಶ್, ಡಾ.ರಾಜ್‌ಕುಮಾರ್ ಹೆಸರು ಕೂಡ ಇದೆ. ಆದರೆ, ತುಂಬಾ ವಿಶೇಷವಾಗಿ ಗಮನ ಸೆಳೆಯೋದು ಶಿವಣ್ಣ, ಸುದೀಪ್, ಯಶ್, ದರ್ಶನ್ ಬಗ್ಗೆ ಇರುವ ಡೈಲಾಗ್. ಆರಂಭದಲ್ಲಿಯೇ ಉಪೇಂದ್ರ ಹಾಗೂ ಓಂ ಹೆಸರು ಬಂದು ಹೋಗುತ್ತೆ. ಅದ್ಯಾಕೆ ಬಂತು ಅಂತ ಯೋಚನೆ ಮಾಡುತ್ತಿರುವಾಗಲೇ ಸಾಹಸ ಸಿಂಹ ವಿಷ್ಣುವರ್ಧನ್, ಡಾ. ರಾಜ್‌ಕುಮಾರ್ ಹಾಗೂ ಅಂಬರೀಶ್ ಬಂದು ಬಿಡುತ್ತಾರೆ. ಇವರೆಲ್ಲ ಯಾಕೆ? ಅಂತ ಯೋಚನೆ ಮಾಡುತ್ತಿರುವಾಗಲೇ ಮೇಕಿಂಗ್, ರೀಲ್.. ಬುದ್ದಿವಂತರಿಗೆ ಮಾತ್ರ ಅಂತೆಲ್ಲ ಒಂದಿಷ್ಟು ಡೈಲಾಗ್ ಇದೆ. ಇದು ಮುಗೀತು ಅನ್ನುವಾಗಲೇ ಗಿರೀಶ್ ಕಾಸರವಳ್ಳಿ ಸಿನಿಮಾ ಪ್ರಸ್ತಾಪವಾಗಿ, ಅಲ್ಲಿ ಐಟಂ ಸಾಂಗಿನ ಬಗ್ಗೆ ಕಾಮಿಡಿ ಮಾಡ್ತಾರೆ.
ಇದೆಲ್ಲದರ ಜೊತೆ ಒಂದು ಐಟಮ್ ದೇಸಿ ಸಾಂಗು, ಲವ್ ಟ್ರ್ಯಾಕು, ಹನಿ ಟ್ರಾಪಿನ ಕಥೆಯೂ ಬರುತ್ತೆ. ಜಗ್ಗೇಶ್ ಮೈಮೇಲೆ ಕಲ್ಪನಾ ಆವಾಹನೆಯಾಗುವ ದೃಶ್ಯವೂ ಇದೆ. 1911.. ಕನ್ನಡ ಚಲಚಿತ್ರ ಚರಿತ್ರೆಯ ಕರಾಳ ವರ್ಷ ಅಂತ ಒಂದು ಗ್ರಾಫಿಕ್ಸ್ ಪ್ಲೇಟ್ ಪ್ಲೇ ಆಗುತ್ತೆ. ಭಟ್ರು ವಾಯ್ಸ್ ಬಂದು ಏನೋ ಕನ್ನಡದ ವಿಷ್ಯ ಹೇಳ್ತಿದ್ದಾರೆ, ಕೇಳಿ ಅಂತಾ ಹೇಳಿ ಅದೃಶ್ಯ ಆಗುತ್ತೆ. ಕನ್ನಡಕ್ಕೆ ತೊಂದರೆ ಆಗ್ತಿದೆ ಬನ್ನಿ ಅನ್ನೋ ಡೈಲಾಗ್. ಅದು ಗುರು ಪ್ರಸಾದ್ ಅವರದ್ಧೇ. ಅಲ್ಲಿಗೆ ಟ್ರೇಲರ್ ಕೊನೆಯಾಗುತ್ತೆ.
ಇಷ್ಟಕ್ಕೂ ಈ ಟ್ರೇಲರಿನಲ್ಲಿ ಗುರು ಪ್ರಸಾದ್ ಏನು ಹೇಳೋಕೆ ಹೊರಟಿದ್ದಾರೆ. 1911ರ ಕಥೆ ಏನು? ಸ್ಟಾರ್ ನಟರ ಹೆಸರೆಲ್ಲ ಪ್ರಸ್ತಾಪವಾಗೋದು ಯಾಕೆ? ಇಂತಹ ಹತ್ತು ಹಲವಾರು ಪ್ರಶ್ನೆಗಳ ನಡುವೆಯೇ ರಂಗನಾಯಕ ಕುತೂಹಲ ಕೆರಳಿಸಿದ್ದಾನೆ. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳ ನಂತರ ಮತ್ತೆ ಒಂದಾಗಿರುವ ಗುರು ಮತ್ತು ಜಗ್ಗೇಶ್ ಹ್ಯಾಟ್ರಿಕ್ ಬೇಟೆಯಾಡೋಕೆ ಹೊಂಚು ಹಾಕಿ ಕುಳಿತಿದೆ.
ಇಷ್ಟಕ್ಕೂ ಟ್ರೇಲರ್ ನೋಡಿದರೆ ಕಥೆ ಏನು ಅಂತಾ ಗೊತ್ತಾಗಲ್ಲ. ಕ್ಲೂ ಕೂಡಾ ಸಿಕ್ಕಲ್ಲ. ಸಿನಿಮಾಗಳಲ್ಲಿ ಯಾರ್ ಯಾರದ್ದೋ ಹೆಸರಿದೆ ಎಂದರೆ ಕುತೂಹಲ ಹುಟ್ಟಬಹುದು ಅಷ್ಟೆ.. ರೀಲ್ಸ್, ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಬಹುದು, ಅಷ್ಟೆ. ಪ್ರೇಕ್ಷಕರನ್ನು ಥಿಯೇಟರಿಗೆ ಕರೆ ತರುವುದಕ್ಕೆ ಆಗಲ್ಲ. ಇದು ಗುರು ಪ್ರಸಾದ್ ಅವರಿಗೆ ಗೊತ್ತಿಲ್ಲದ ವಿಷಯ ಅಲ್ಲ. ಆದರೆ.. ಕಸುಬಿಗಿಂತ ಅವರದ್ದು ಚೇಷ್ಟೆಯೇ ಜಾಸ್ತಿ.



