ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಂ.1 ನಾಯಕ ಯಾರು? ಅನುಮಾನವೇ ಇಲ್ಲದಂತೆ ಕೊಡಬಹುದಾದ ಉತ್ತರ ಬಿ.ಎಸ್.ಯಡಿಯೂರಪ್ಪ. ಮೊದಲ ಬಾರಿ ಬಿಜೆಪಿ ಗೆದ್ದಾಗ, ತಮ್ಮೊಂದಿಗೆ ಗೆದ್ದಿದ್ದ ಇನ್ನೊಬ್ಬ ಶಾಸಕ (ಯಡಿಯೂರಪ್ಪ ಮೊದಲ ಬಾರಿ ಗೆದ್ದಾಗ ಬಿಜೆಪಿ ಶಾಸಕರ ಸಂಖ್ಯೆ ಕೇವಲ 2) ವಸಂತ್ ಬಂಗೇರಾ ಕಾಂಗ್ರೆಸ್ಸಿಗೆ ಜಿಗಿದಾಗ ಒಬ್ಬರೇ ಪಕ್ಷವನ್ನು ಕಟ್ಟಿ ಬೆಳೆಸಿದ್ದು ಕಡಿಮೆ ಸಾಧನೆಯೇನಲ್ಲ.



ಮೊದಲೆಲ್ಲ ಗುಡುಗುತ್ತಿದ್ದ ಯಡಿಯೂರಪ್ಪ ಈಗ ಸೈಲೆಂಟ್ ಆಗಿಯೇ ಮೆಸೇಜ್ ರವಾನಿಸುತ್ತಿದ್ದಾರೆ. ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಗೆ ಯಡಿಯೂರಪ್ಪ ಹೋಗಲಿಲ್ಲ. ಕೆಲವು ಸಭೆ, ಸಮಾರಂಭಗಳಲ್ಲಿ ಅವರ ಮಾತು ಕೇವಲ ಭಾಷಣಕ್ಕೆ ಸೀಮಿತವಾಗುತ್ತಿದೆ. ಸಂಘಟನೆಯತ್ತ ಮನಸ್ಸು ಮಾಡುತ್ತಿಲ್ಲ. ಸಂಘಟನೆಯ ಬಗ್ಗೆ ಎಬಿಸಿಡಿ ಗೊತ್ತಿಲ್ಲದವರಿಗೆ ಏನು ಮಾಡಬೇಕು.. ಹೇಗೆ ಮಾಡಬೇಕು ಎಂಬುದೂ ಗೊತ್ತಿರುವುದಿಲ್ಲ. ಪಕ್ಷದ ಕೆಲ ನಾಯಕರಿಗೆ ಸ್ಥಳೀಯ ಮಟ್ಟದ ಕಾರ್ಯಕರ್ತರ ಪರಿಚಯವೂ ಇರುವುದಿಲ್ಲ. ಯಡಿಯೂರಪ್ಪ ಗೈರು ಹಾಜರಾದರೆ ಜನರೂ ಕಾಣುತ್ತಿಲ್ಲ. ಇದೆಲ್ಲವೂ ಪಕ್ಷದ ನಾಯಕರಿಗೆ ಗೊತ್ತು.
ಇದಕ್ಕೆ ಪಕ್ಷದ ನಾಯಕರು ಎಚ್ಚೆತ್ತುಕೊಂಡಿದ್ದು ನ್ಯೂಸ್ ಚಾನೆಲ್ಲುಗಳಲ್ಲಿ ಬ್ರೇಕಿಂಗ್ ನ್ಯೂಸ್ ಹೊರಬಿದ್ದ ಮೇಲೆ ಎಂಬುದು ವಾಸ್ತವ. ನಾವು ಯಡಿಯೂರಪ್ಪರನ್ನು ಮರೆಯುವುದಾದರೂ ಉಂಟೇ. ಅವರು ಎಂದೆಂದಿಗೂ ನಮ್ಮ ನಾಯಕರು ಎಂದು ರವಿಕುಮಾರ್ ಹೇಳಿಕೆ ನೀಡಿದ್ದು ಆಗಲೇ. ಯಡಿಯೂರಪ್ಪ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದೂ, ಮುದ್ರಿಸಿದ್ದೂ ಆಗಲೇ.
ಯಡಿಯೂರಪ್ಪ ಅವರೇ ಕಟ್ಟಿದ ಪಕ್ಷದ ವೇದಿಕೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಯಡಿಯೂರಪ್ಪ ಅವರಿಗೆ ಆಹ್ವಾನ ಇದ್ದರೆ ಉಂಟು, ಇಲ್ಲದಿದ್ದರೆ ಇಲ್ಲ ಎಂಬ ಲೆವೆಲ್ಲಿಗೆ ತಲುಪಿತ್ತು. ಬೊಮ್ಮಾಯಿಯವರೇನೋ ಯಡಿಯೂರಪ್ಪ ಅವರೇ ನಮ್ಮ ಲೀಡರ್ ಎನ್ನುತ್ತಾರಾದರೂ.. ಬಹಿರಂಗದಲ್ಲಿ ಮಾತ್ರ. ಇತ್ತೀಚೆಗೆ ಗುಜರಾತಿನಿಂದ ಹಿಂದಿರುಗುವಾಗ ಮುಖ್ಯಮಂತ್ರಿಗಳಿಗಿದ್ದ ವಿಶೇಷ ವಿಮಾನದಲ್ಲಿ ಜಾಗ ಖಾಲಿಯಿದ್ದರೂ ಯಡಿಯೂರಪ್ಪ ಅವರನ್ನು ಕರೆಯಲಿಲ್ಲ ಎನ್ನುತ್ತಿವೆ ಗುಜರಾತ್ ಮೂಲಗಳು. ಹೀಗಾಗಿ ಇಬ್ಬರೂ ಪ್ರತ್ಯೇಕ ವಿಮಾನದಲ್ಲಿ ಬಂದರು.
ಪಕ್ಷದ ವೇದಿಕೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಿರಿಯಾ ನಾಯಕರಾದರೂ ಆಹ್ವಾನವೇ ಇರುವುದಿಲ್ಲ. ಪ್ರಮುಖ ಸಭೆ, ಸಮಾರಂಭಗಳಿಗೂ ಕರೆಯುತ್ತಿಲ್ಲ. ಅಗತ್ಯ ಸಲಹೆ ಸೂಚನೆ ಪಡೆಯುವುದಕ್ಕೂ ಬರುತ್ತಿಲ್ಲ. ಎಡವಟ್ಟು ಮಾಡಿಕೊಂಡಾರು ಎಂಬ ಆತಂಕದಿಂದ ಕೊಡುವ ಸಲಹೆಯನ್ನೂ ಕಡೆಗಣಿಸುತ್ತಿದ್ದಾರೆ. ಮೇಕೆದಾಟು, ಹಿಜಾಬ್, 40% ಕಮಿಷನ್ ಆರೋಪ.. ಮೊದಲಾದ ವಿಚಾರಗಳಲ್ಲಿ ಯಡಿಯೂರಪ್ಪ ವೈಯಕ್ತಿಕವಾಗಿ ಕಾಳಜಿ ವಹಿಸಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಸಂದೇಶ ನೀಡಿದ್ದರೂ ಪರಿಗಣಿಸಲಿಲ್ಲವಂತೆ. ಇದರ ಜೊತೆಗೆ ಯತ್ನಾಳ್ ಸೇರಿದಂತೆ ಪಕ್ಷದ ಕೆಲವು ನಾಯಕರು ತಮ್ಮ ವಿರುದ್ಧ ಮಾತನಾಡಿದರೂ ಪಕ್ಷದ ಲೀಡರ್ಸ್ ಮೌನವಾಗಿರುವುದು ಇನ್ನೊಂದು ಅಸಮಾಧಾನಕ್ಕೆ ಕಾರಣ.

ಎಲ್ಲಕ್ಕಿಂತ ಮುಖ್ಯವಾಗಿ ಪುತ್ರ ವಿಜಯೇಂದ್ರ ಸ್ಥಾನವೇನು, ಕೆಲಸವೇನು, ಜವಾಬ್ದಾರಿಯೇನು ಎಂಬುವುದರ ಬಗ್ಗೆ ಇನ್ನೂ ಪಕ್ಷ ಖಚಿತವಾಗಿ ತಿಳಿಸಿಲ್ಲ. ತಾವು ರಾಜೀನಾಮೆ ನೀಡಿದ್ದರೂ, ವಿಜಯೇಂದ್ರ ತಮ್ಮ ಸಂಘಟನಾ ಚಾತುರ್ಯವನ್ನು ಸಾಬೀತು ಮಾಡಿದ್ದೂ ಆಗಿದೆ. ಹೀಗಿದ್ದರೂ ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ಸಿಗದೇ ಇರುವುದು ಕೂಡಾ ಯಡಿಯೂರಪ್ಪ ಬೇಸರಕ್ಕೆ ಕಾರಣ ಎನ್ನಲಾಗಿದೆ.



