ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಲೇ ಇರ್ತಾರೆ. ಅದೇನೂ ಹೊಸದಲ್ಲ. ವಿವಾದಗಳನ್ನು ಹುಡುಕಿ ಹುಡುಕೀ ಮೈಮೇಲೆ ಬಿಟ್ಟುಕೊಳ್ಳುವುದು ರಾಹುಲ್ ಗಾಂಧಿಯವರ ಹವ್ಯಾಸ. ಆದರೆ.. ಅಂತಹ ವಿವಾದಗಳನ್ನು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳೋದು ಪ್ರಧಾನಿ ನರೇಂದ್ರ ಮೋದಿ. ಈ ಬಾರಿಯೂ ಅಷ್ಟೆ. ಹಿಂದೂ ಧರ್ಮದಲ್ಲಿ ಶಕ್ತಿ ಎನ್ನುವ ಪದ ಇದೆ. ಅದರ ವಿರುದ್ಧ ಯುದ್ಧ ಮಾಡ್ತೇನೆ ಎಂಬ ಹೇಳಿಕೆ ಮೋದಿ ಹಾಗೂ ಅವರ ಬೆಂಬಲಿಗರ ಅಸ್ತ್ರವೂ ಆಗಿದೆ.
ಆಗಿದ್ದಿಷ್ಟು…
ಭಾನುವಾರ ಅಂತ್ಯಗೊಂಡ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದ ಇದೆ. ನಾವು ಈ ಶಕ್ತಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಇಷ್ಟಕ್ಕೂ ರಾಹುಲ್ ಗಾಂಧಿ ಮೋದಿಯನ್ನು ಟೀಕೆ ಮಾಡುತ್ತಾ ಪ್ರಧಾನಿಯ ಆತ್ಮ ಇವಿಎಂ ಯಂತ್ರಗಳಲ್ಲಿದೆ. ಇಡಿ, ಸಿಬಿಐ ಹಾಗೂ ಐಟಿ ಇಲ್ಲದೆ ಮೋದಿ ಎಲೆಕ್ಷನ್ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದರು.
ಶಕ್ತಿ ಹಿಂದೂ ಧರ್ಮ ಪದ ಬಳಸದೇ ಇದ್ದಿದ್ದರೆ..
ಮೋದಿಯನ್ನು ಟೀಕೆ ಮಾಡುವಾಗ ಇವಿಎಂ, ಐಟಿ, ಇಡಿ, ಸಿಬಿಐ ಎಲ್ಲವನ್ನೂ ಟೀಕಿಸುವುದು ಹೊಸದೂ ಅಲ್ಲ. ಅಂತ್ಯವಾಗುವ ಲಕ್ಷಣಗಳೂ ಇಲ್ಲ. ಕಾಂಗ್ರೆಸ್ ಗೆದ್ದಾಗ ʻಪ್ರಜಾಪ್ರಭುತ್ವದ ಗೆಲುವುʼ ಎಂದು ಹೇಳುವ.. ಸೋತಾಗ ʻಇವಿಎಂ ಹ್ಯಾಕ್ʼ ಎನ್ನುವ ಮಾತು ಚಾಲ್ತಿಯಲ್ಲಿದೆ. ಆದರೆ.. ಹೀಗೆ ಹೇಳುವಾಗ ಹಿಂದೂ ಧರ್ಮದಲ್ಲಿ ಶಕ್ತಿ ಅನ್ನೋ ಪದ ಇದೆ. ಅದರ ವಿರುದ್ಧ ನನ್ನ ಹೋರಾಟ ಏಂಬ ಮಾತು ಹಾಗೂ ಪದ ಬಳಕೆ ಮಾಡದೇ ಇದ್ದಿದ್ದರೆ, ವಿವಾದ ಆಗುತ್ತಿರಲಿಲ್ಲ. ಮತದಾರರಿಗೆ ಹೇಳಬೇಕಾದ ಮಾತನ್ನು ಹೇಳಲೂ ಅವಕಾಶ ಇತ್ತು. ಆದರೆ.. ಈಗ ರಾಹುಲ್ ಗಾಂಧಿ ಹೋರಾಟ ಹಿಂದೂ ಧರ್ಮದ ವಿರುದ್ಧ ಎಂಬ ಆರೋಪ ಹೊತ್ತು, ನಾವು ಹಿಂದೂ ವಿರೋಧಿ ಅಲ್ಲ ಎಂಬ ಉತ್ತರ ಕೊಡಬೇಕಾದ ಸ್ಥಿತಿಯಲ್ಲಿದೆ ಕಾಂಗ್ರೆಸ್.
ಶಕ್ತಿಯರ ಜೊತೆ ಮೋದಿ : ರಾಹುಲ್ ಗಾಂಧಿಯ ಈ ಹೇಳಿಕೆಯನ್ನೇ ಟೀಕಿಸಿರುವ ಮೋದಿ ತಮಿಳುನಾಡಿನ ಸೇಲಂನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ ಯಾರು ಶಕ್ತಿಯನ್ನು ನಾಶ ಮಾಡಲು ಹೋಗುತ್ತಾರೋ ಅವರೇ ನಾಶವಾಗಿ ಬಿಡುತ್ತಾರೆ ಎಂದು ಉತ್ತರ ಕೊಟ್ಟಿದ್ಧಾರೆ.
ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ‘ಮಾತೃ ಶಕ್ತಿ, ನಾರಿ ಶಕ್ತಿ’ ಯಾಗಿದೆ ಆದರೆ, ಕಾಂಗ್ರೆಸ್ ಮತ್ತು ಡಿಎಂಕೆ ಇರುವ ಇಂಡಿಯಾ ಮೈತ್ರಿಯು ಇದನ್ನು ನಾಶಪಡಿಸುತ್ತದೆ ಎಂದು ಹೇಳುತ್ತದೆ. ‘ಶಕ್ತಿಯು ದೈವಿಕತೆಯನ್ನು ಸೂಚಿಸುತ್ತದೆ ಮತ್ತು ತಮಿಳುನಾಡಿನಲ್ಲಿ ಮಾರಿಯಮ್ಮನ್, ಮಧುರೈ ಮೀನಾಕ್ಷಿಯಮ್ಮನ್ ಮತ್ತು ಕಂಚಿ ಕಾಮಾಕ್ಷಿಯಮ್ಮನಂತಹ ವಿವಿಧ ದೇವತೆಗಳ ರೂಪದಲ್ಲಿ ಶಕ್ತಿ ಸ್ವರೂಪಿ ಮಾತೆಯು ಪ್ರಕಟವಾಗುತ್ತಾಳೆ. ರಾಷ್ಟ್ರಕವಿ ಸುಬ್ರಮಣ್ಯ ಭಾರತಿ ಅವರೂ ಭಾರತ ಮಾತೆಯನ್ನು ‘ಶಕ್ತಿ’ ಎಂದು ಪೂಜಿಸಿದ್ದರು. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಾತೃಶಕ್ತಿ, ನಾರಿ ಶಕ್ತಿ. ಆದರೆ ಶಕ್ತಿಯನ್ನು ನಾಶಪಡಿಸುವ ಮಾತು ಆಡುವವರನ್ನು ತಮಿಳುನಾಡು ಶಿಕ್ಷಿಸಲಿದೆ. ನಾನು ಶಕ್ತಿ ಉಪಾಸಕ ಎಂದಿದ್ದಾರೆ. ಅಷ್ಟೇ ಅಲ್ಲ, ಶಕ್ತಿ ದೇವತೆಗಳ ವೇಷ ಧರಿಸಿದ ಹೆಣ್ಣು ಮಕ್ಕಳ ಜೊತೆ ವೇದಿಕೆಯಲ್ಲಿ ನಿಂತು ಶಕ್ತಿ ಸಮರವನ್ನೇ ರಾಹುಲ್ ಗಾಂಧಿ ವಿರುದ್ಧ ತಿರುಗಿಸಿದ್ಧಾರೆ.



