ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ಎಲ್ಲ ಪಕ್ಷಗಳೂ ಉಚಿತ ನಿಶ್ಚಿತ ಖಚಿತಗಳ ಗ್ಯಾರಂಟಿ ಮೊರೆ ಹೋಗಿವೆ. ಅವುಗಳಲ್ಲಿ ಒಂದು ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ಹಣ ನೀಡುವುದು. ಕರ್ನಾಟಕದಲ್ಲಿನ ಗೃಹ ಲಕ್ಷ್ಮಿ ಮಾದರಿಯಲ್ಲಿ ದೇಶಾದ್ಯಂತ ಮಹಾಲಕ್ಷ್ಮಿ ಮಾದರಿ ಗ್ಯಾರಂಟಿ ಯೋಜನೆ ಘೋಷಿಸಿದೆ ಕಾಂಗ್ರೆಸ್. ಈ ಯೋಜನೆಯ ಬಗ್ಗೆ ಮಾತನಾಡುತ್ತಾ ರಾಹುಲ್ ಗಾಂಧಿ ʻ ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ. ನಾನು ತಾಳ್ಮೆ ಕಳೆದುಕೊಂಡರೆ.. ಭಾರತದ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳೂ 1 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಲಾಗುವುದಾಗಿ ಘೋಷಿಸುತ್ತೇನೆʼ ಎನ್ನುತ್ತಾರೆ.
ಈ ವಿಡಿಯೋ ಎಷ್ಟರಮಟ್ಟಿಗೆ ವೈರಲ್ ಆಯಿತೆಂದರೆ.. ಕೆಲವು ಬ್ಲೂಟಿಕ್ ಬಳಸುವ ರಾಜಕೀಯ ನಾಯಕರೂ ಈ ವಿಡಿಯೋ ಹಂಚಿಕೊಂಡರು. ಜೊತೆಗೆ ತಮ್ಮದೇ ಆದ ರೀತಿಯಲ್ಲಿ ವಿವರಣೆಯನ್ನೂ ನೀಡಿದರು. ಅವರಲ್ಲಿ ಕಾಂಗ್ರೆಸ್ ಪರ ಇದ್ದವರೂ ಇದ್ದರು. ವಿರುದ್ಧ ಇದ್ದವರೂ ಇದ್ದರು.
ರಾಹುಲ್ ಗಾಂಧಿ ಹೇಳಿಕೆ ಸಮರ್ಥನೆ ಮಾಡಿದ್ದವರ ಪ್ರಕಾರ : ಭಾರತೀಯ ಮಹಿಳೆಯರು ಈ ಯೋಜನೆಯಿಂದ ಸಬಲರಾಗುತ್ತಾರೆ. ಹಾಗೆ ಸರ್ಕಾರ ಕೊಟ್ಟ 2 ಲಕ್ಷ ರೂ. ಹಣದಿಂದ ಸ್ವಾವಲಂಬಿಗಳಾಗುತ್ತಾರೆ. ಅದೇ ಮಹಿಳೆಯರು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ. ಮಾರುಕಟ್ಟೆ ಆಕ್ಟಿವ್ ಆಗಿರುತ್ತದೆ. ಆದ್ದರಿಂದ ದೇಶದ ಆರ್ಥಿಕತೆಯೂ ಪ್ರಗತಿಯಾಗಲಿದೆ.
ರಾಹುಲ್ ಗಾಂಧಿ ಹೇಳಿಕೆ ವಿರೋಧಿಸಿದವರ ಪ್ರಕಾರ : ಭಾರತದ ಅರ್ಥ ವ್ಯವಸ್ಥೆ ಅಧೋಗತಿಗೆ ಇಳಿಯಲಿದೆ. ತಿಂಗಳಿಗೆ 2 ಸಾವಿರ ಕೊಟ್ಟ ಕಾರಣಕ್ಕೇ ರಾಜ್ಯದಲ್ಲಿ ರಸ್ತೆ, ಸೇತುವೆಗಳಂತಹ ಕೆಲಸ ಆಗ್ತಾ ಇಲ್ಲ. ಅಂಥಾದ್ದರಲ್ಲಿ ವರ್ಷಕ್ಕೆ 1 ಲಕ್ಷ ಫ್ರೀ ಹಂಚ್ತೀವಿ ಅಂದ್ರೆ, ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿಯಲಿದೆ.
ಪರ ವಿರೋಧ ಹೇಳಿಕೆಗಳ ಮಧ್ಯೆ ಹೇಳಿಕೆ ನಿಜವಾ ಎಂದು ಪರೀಕ್ಷೆ ಮಾಡಹೊರಟಾಗ.. ರಾಹುಲ್ ಗಾಂಧಿ ಅಂತಹ ಹೇಳಿಕೆಯನ್ನೇ ನೀಡಿಲ್ಲ ಎಂದು ಗೊತ್ತಾಗಿದೆ. ಒಡಿಶಾದ ಬೋಲಂಗಿರ್‌ನಲ್ಲಿ ರಾಹುಲ್ ಗಾಂಧಿ ಮಾತನಾಡಿರುವ ವಿಡಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಭಾರತದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ತಿಂಗಳಿಗೆ 8,500 ರೂಪಾಯಿ ಪಡೆಯುತ್ತಾರೆ, ಒಟ್ಟು ಒಂದು ವರ್ಷದಲ್ಲಿ ಒಂದು ಲಕ್ಷ ರೂ. ಗಳಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ.
ಆದರೆ.. ಎಲ್ಲಿಯೂ ಕೂಡಾ ರಾಹುಲ್ ಗಾಂಧಿ ತಿಂಗಳಿಗೆ 1 ಲಕ್ಷ ಹಾಗೂ ವರ್ಷಕ್ಕೆ 2 ಲಕ್ಷ ಎಂಬಂತ ಹೇಳಿಕೆ ನೀಡಿಲ್ಲ. ಜೂನ್ 4 ರಂದು ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಭಾರತದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ತಿಂಗಳಿಗೆ 8,500 ರೂಪಾಯಿ ಪಡೆಯುತ್ತಾರೆ, ಒಟ್ಟು ಒಂದು ವರ್ಷದಲ್ಲಿ ಒಂದು ಲಕ್ಷ ರೂ. ಗಳಿಸುತ್ತಾರೆ ಎಂದಿದ್ಧಾರೆ ರಾಹುಲ್ ಗಾಂಧಿ.
ಆ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ‘ಭಾರತದ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳೂ ಒಂದು ಲಕ್ಷ ರೂಪಾಯಿಗಳನ್ನು ವರ್ಗಾಯಿಸಲಾಗುವುದು’ ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ತಪ್ಪು ಅರ್ಥ ಬರುವ ರೀತಿಯಲ್ಲಿ ಹಂಚಿಕೊಳ್ಳಲಾಗಿದೆ.



