ಭಾರತ ಕ್ರಿಕೆಟ್ ತಂಡಕ್ಕೆ ಐಸಿಸಿ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿಯುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಐಸಿಸಿ ಟೂರ್ನಿ ಗೆಲ್ಲಲು ಸಾಧ್ಯವಾಗಲಿಲ್ಲ. ಕ್ಯಾಪ್ಟನ್ ಚೇಂಜ್ ಮಾಡಿ ರೋಹಿತ್ ಶರ್ಮಾ ನೇತೃತ್ವದಲ್ಲೂ ಆಗುತ್ತಿಲ್ಲ. ಕೋಚ್ ರವಿಶಾಸ್ತ್ರಿಯನ್ನು ಬದಲಿಸಿ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಮಾಡಿದರು. ಮಧ್ಯೆ ವಿವಿಎಸ್ ಲಕ್ಷ್ಮಣ್ ಕೂಡಾ ಕೋಚ್ ಆಗುತ್ತಿದ್ದಾರೆ. ಆದರೆ ಹಣೆಬರಹ ಬದಲಾಗಿಲ್ಲ. ಇದೀಗ 20-20 ವಿಶ್ವಕಪ್ ಟೂರ್ನಿಯಲ್ಲಿನ ನೀರಸ ಪ್ರದರ್ಶನದ ನಂತರ ಬಿಸಿಸಿಐ ಬೇರೆಯದೇ ಯೋಚನೆಯಲ್ಲಿದೆ.

ಒಂದು ಮೂಲದ ಪ್ರಕಾರ ಕೋಚ್ ರಾಹುಲ್ ದ್ರಾವಿಡ್ ಅವರನ್ನೇ ಬದಲಿಸುವ ಯೋಚನೆ ಮಾಡುತ್ತಿದೆಯಂತೆ. 20-20 ವಿಶ್ವಕಪ್‍ನಲ್ಲಿ ಭಾರತ ತಂಡ ಸೋತಿದ್ದಕ್ಕಿಂತ, ಟೀಂ ಇಂಡಿಯಾದ ಅಪ್ರೋಚ್ ಗಾಬರಿ ಹುಟ್ಟಿಸಿತ್ತು. ಟೂರ್ನಿ ಆರಂಭಕ್ಕೂ ಮುನ್ನ ಇತರೆ ಟೂರ್ನಿಗಳಲ್ಲಿ ಆಕ್ರಮಣಕಾರಿ ಆಟದ ಮೊರೆ ಹೋಗಿದ್ದ ಟೀಂ ಇಂಡಿಯಾ, ವಿಶ್ವಕಪ್ ಟೂರ್ನಿಯಲ್ಲಿ ಅಟ್ಯಾಕಿಂಗ್ ಧೋರಣೆ ಕೈಬಿಟ್ಟು ಡಿಫೆನ್ಸಿವ್ ಆಟಕ್ಕಿಳಿದಿತ್ತು. ಪವರ್ ಪ್ಲೇಯಲ್ಲಂತೂ ಟೀಂ ಇಂಡಿಯಾ 60 ರನ್ ಗಳಿಸೋಕೂ ತಿಣುಕಾಡಿತ್ತು. ಬೇರೆ ತಂಡದವರು 89ರ ಆಡುಪಾಸಿನಲ್ಲಿ ರನ್ ಹೊಡೆಯುತ್ತಿದ್ದರೆ ಟೀಂ ಇಂಡಿಯಾ ಟುಕುಟುಕು ಬ್ಯಾಟಿಂಗ್ ಮೊರೆ ಹೋಗಿತ್ತು. ಆದರೆ ತಂಡದಲ್ಲಿರೋ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್, ಹಾರ್ದಿಕ್, ಸೂರ್ಯ ಸೇರಿದಂತೆ ಯಾರೂ ಕೂಡಾ ರಕ್ಷಣೆಯ ಚಿಪ್ಪಿನೊಳಗೆ ಅಡಗಿಕೊಳ್ಳುವ ಆಟಗಾರರಲ್ಲ. ಸಂದರ್ಭಕ್ಕೆ ತಕ್ಕಂತೆ ಸದಾ ಅಟ್ಯಾಕಿಂಗ್ ಆಡುವವರು. ಹಾಗಾದರೆ ಸಮಸ್ಯೆ ಕೋಚ್ ರಾಹುಲ್ ದ್ರಾವಿಡ್ ಅವರಲ್ಲಿದೆ ಎಂದುಕೊಂಡಿದೆಯಂತೆ ಬಿಸಿಸಿಐ.

ಹೀಗಾಗಿ ಟೀಂ ಇಂಡಿಯಾ 20-20 ಮಾದರಿಗಾಗಿಯೇ ಹೊಸ ಕೋಚ್ ನೇಮಿಸಲಿದ್ದು, ಆ ಕೋಚ್ 20-20 ಮಾದರಿಗೆ ಮಾತ್ರ ಕೋಚ್ ಆಗಿರುತ್ತಾಋಎ ಎನ್ನಲಾಗಿದೆ. ಟೆಸ್ಟ್ ಮತ್ತು ಒನ್ ಡೇಗೆ ದ್ರಾವಿಡ್ ಅವರನ್ನೇ ಕೋಚ್ ಹುದ್ದೆಯಲ್ಲಿ ಮುಂದುವರೆಸಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಇದೇ ಮಾದರಿ ಅನುಸರಿಸಿದರೆ ಜನವರಿಯಲ್ಲಿ ಶುರುವಾಗಲಿರುವ ಶ್ರೀಲಂಕಾ ವಿರುದ್ಧದ ಸರಣಿಗೆ ಹೊಸ ಕೋಚ್ ಇರಲಿದ್ದಾರೆ.
ಇದು ಇಂಗ್ಲೆಂಡ್ ಮಾಡೆಲ್. ಇಂಗ್ಲೆಂಡಿನಲ್ಲೀಗ ಬ್ರೆಂಡನ್ ಮೆಕಲ್ಲಂ ಕೋಚ್ ಆಗಿದ್ದು, ಮೆಕಲ್ಲಂ ಟೆಸ್ಟ್ ತಂಡದಲ್ಲಿ ಮಾತ್ರ ಕೋಚ್ ಆಗಿರುತ್ತಾರೆ. ಒನ್ ಡೇ ಹಾಗೂ 20-20ಯಲ್ಲಿ ಮ್ಯಾಥ್ಯೂ ಮೊಟ್ ಕೋಚ್. ಅಂದರೆ ರೆಡ್ ಬಾಲ್ ಕ್ರಿಕೆಟ್ ಮತ್ತು ವೈಟ್ ಬಾಲ್ ಕ್ರಿಕೆಟ್‍ಗೆ ಪ್ರತ್ಯೇಕ ಕೋಚ್ ವ್ಯವಸ್ಥೆ ಮಾಡಿಕೊಂಡಿದೆ ಇಂಗ್ಲೆಂಡ್. ತಂಡದಲ್ಲಿ ಆತ್ಮವಿಶ್ವಾಸವೇ ಕುಸಿಯುತ್ತಿದ್ದು ಅದನ್ನು ತಪ್ಪಿಸಲು ಹೊಸ ಮಾಡೆಲ್ ಅನ್ವಯಿಸಿಕೊಳ್ಳೋ ಯೋಚನೆಯಲ್ಲಿದೆ ಟೀಂ ಇಂಡಿಯಾ.

ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್‍ನ ದಿಗ್ಗಜ. ಅದರಲ್ಲಿ ಅನುಮಾನವೇನೂ ಇಲ್ಲ. ಅಲ್ಲದೆ ಜೂನಿಯರ್ ತಂಡದ ಕೋಚ್ ಆಗಿ, ಹೊಸಬರನ್ನು ಗುರುತಿಸಿ ಬೆಳಸುವಲ್ಲಿ ದ್ರಾವಿಡ್ ಅವರ ಪಾತ್ರ ದೊಡ್ಡದು. ಆದರೆ ಸೀನಿಯರ್ ಟೀಂನ ಕೋಚ್ ಆಗುವುದಕ್ಕೂ, ಜೂನಿಯರ್ ತಂಡದ ಕೋಚ್ ಆಗುವುದಕ್ಕೂ ಬಹಳ ವ್ಯತ್ಯಾಸಗಳಿವೆ. ಅದರಲ್ಲಿ ದ್ರಾವಿಡ್ ಎಡವಿದ್ದಾರಾ..? ಎಡವುತ್ತಿದ್ದಾರಾ..? ಆಧುನಿಕ ಕ್ರಿಕೆಟ್‍ನ ವೇಗಕ್ಕೆ ಹೊಂದಿಕೊಳ್ಳೋಕೆ ಆಗುತ್ತಿಲ್ಲವಾ? ವೇಗದ ಕ್ರಿಕೆಟ್‍ನಲ್ಲಿ ದ್ರಾವಿಡ್ ಅವರ ನಿಧಾನಕ್ಕೆ ನಿಂತುಕೊಂಡು ಆಡುವ ಟೆಕ್ನಿಕ್ ಓಲ್ಡ್ ಆಗಿ ಹೋಯಿತಾ? ಕ್ರಿಕೆಟ್ ಬುಕ್ ಶಾಟ್ಸ್‍ಗೆ ದ್ರಾವಿಡ್ ಹೆಸರುವಾಸಿ. ಆದರೆ ಯಾವ ಅಳತೆಗೂ ಸಿಕ್ಕದ, ಮಾನದಂಡವೂ ಇಲ್ಲದ ಹೊಡಬಡಿ ಕ್ರಿಕೆಟ್ ಸಂಸ್ಕøತಿಗೆ ದ್ರಾವಿಡ್ ಒಗ್ಗಲಿಲ್ಲವಾ..? ಹೀಗೆ ಹಲವು ಪ್ರಶ್ನೆಗಳಂತೂ ಇವೆ. ಉತ್ತರ ಜನವರಿಯಲ್ಲಿ.



