ಪುಷ್ಪ 2 ರಿಲೀಸ್ ಆಗುವುದು ಆಗಸ್ಟ್ 15ಕ್ಕೆ. ಆ ಚಿತ್ರದ ಎದುರು ಬೈರತಿ ರಣಗಲ್ ಕೂಡಾ ಬರುತ್ತಿದೆ. ಪುಷ್ಪ 2 ಚಿತ್ರದ ಪ್ರಚಾರ ಆಗಲೇ ಶುರುವಾಗಿದೆ. ಆದರೆ.. ಭೈರತಿ ರಣಗಲ್ ಸುದ್ದಿಯೇ ಇಲ್ಲ.
ಪುಷ್ಪ 2 ರಿಲೀಸ್ ಆಗುವುದು ಇನ್ನೂ ಮೂರೂವರೆ ತಿಂಗಳ ನಂತರ. ಆದರೆ.. ಅಬ್ಬರವಂತೂ ಶುರು. ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಒಂದು ಝಲಕ್ ಕೊಟ್ಟಿದ್ದ ಪುಷ್ಪ ಟೀಂ, ಈಗ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಿದೆ. ಆದರೆ ಭೈರತಿ ರಣಗಲ್ ಚಿತ್ರದ ಚಿತ್ರೀಕರಣ ಎಲ್ಲಿಗೆ ಬಂತು. ಗೊತ್ತಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೂಡಾ ನಡೆಯುತ್ತಿದೆಯಾ..? ಮಾಹಿತಿಯೇ ಇಲ್ಲ. ಹಾಡುಗಳ ವಿಷಯವಂತೂ ಯಾರಿಗೂ ಗೊತ್ತಿಲ್ಲ. ಶಿವಣ್ಣ ಅತ್ತ ಶಿವಮೊಗ್ಗ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಬ್ಯುಸಿ. ಮೇ 7ರ ನಂತರ ಫ್ರೀ ಮಾಡಿಕೊಳ್ಳಬಹುದೇನೋ..
ಪುಷ್ಪ 2 ಚಿತ್ರದ ಹಾಡು ನೋಡಿದರೆ.. ಬೇರೆಯವರು.. ವಿಶೇಷವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯವರು ಈ ಪ್ರಚಾರದ ವೈಖರಿ ನೋಡಿ ಕಲಿಯಬೇಕಾದ್ದು ಸಾಕಷ್ಟಿದೆ.
ಕನ್ನಡದಲ್ಲಿ ಹೆಚ್ಚಿನವರು ಚಿತ್ರ ಬಿಡುಗಡೆಯಾಗುವ ವಾರಕ್ಕೆ ಮೊದಲು ಪ್ರೆಸ್ ಮೀಟ್ ಮಾಡಿ ಕಣ್ಮರೆಯಾಗುತ್ತಾರೆ. ಸಿನಿಮಾ ನಿರ್ಮಾಣ ಮಾಡಿದವರು, ಪ್ರಚಾರ ಶುರುವಾಗುವ ಹೊತ್ತಿಗೆ ಕೈ ಖಾಲಿ ಮಾಡಿಕೊಂಡಿರುತ್ತಾರೆ. ಕನ್ನಡದಲ್ಲಿ ಕೆಲವೇ ಕೆಲವರನ್ನು ಬಿಟ್ಟರೆ.. ಮಿಕ್ಕವರು ಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಆದರೆ.. ಬೇರೆ ಚಿತ್ರರಂಗದವರು ಹಾಗಲ್ಲ. ಪುಷ್ಪ 2 ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.
ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನೀಡಿದ್ದು, ಹಾಡಿನಲ್ಲಿ ಕಥಾನಾಯಕ ಪುಷ್ಪರಾಜ್ನ ಗುಣಗಾನ ಮಾಡಲಾಗಿದೆ. ಹಾಡಿನಲ್ಲಿ ಅದ್ದೂರಿತನ ಎದ್ದು ಕಾಣಿಸುತ್ತಿದೆ. ಸಿನಿಮಾದ ಮೇಲೆ ಹೈಪ್ ತಂತಾನಾಗಿಯೇ ಏರುತ್ತಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳ, ಬೆಂಗಾಲಿ ಭಾಷೆಗಳಲ್ಲಿ ‘ಪುಷ್ಪ 2’ ಬಿಡುಗಡೆ ಆಗಲಿದೆ. ಈಗ ಈ ಎಲ್ಲ ಭಾಷೆಗಳಲ್ಲೂ ‘ಪುಷ್ಪ ಪುಷ್ಪ..’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಂದ್ರಬೋಸ್ ಅವರು ತೆಲುಗಿನಲ್ಲಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಕನ್ನಡ ವರ್ಷನ್ಗೆ ವರದರಾಜ್ ಚಿಕ್ಕಬಳ್ಳಾಪುರ ಅವರ ಸಾಹಿತ್ಯವಿದೆ. ತೆಲುಗಿನಲ್ಲಿ ‘ಪುಷ್ಪ ಪುಷ್ಪ..’ ಹಾಡನ್ನು ನಕಾಶ್ ಅಜೀಜ್ ಹಾಗೂ ದೀಪಕ್ ಬ್ಯೂ ಅವರು ಹಾಡಿದ್ದಾರೆ. ಕನ್ನಡ ವರ್ಷನ್ಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ.
ನವೀನ್ ಯೆರ್ನೇನಿ, ವೈ.ರವಿಶಂಕರ್ ನಿರ್ಮಾಣದ ಸಿನಿಮಾ ಇದು. ಮೈತ್ರಿ ಮೂವಿ ಮೇಕರ್ಸ್ ಕೂಡಾ ನಿರ್ಮಾಣಕ್ಕೆ ಕೈಜೋಡಿಸಿದೆ. ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ, ಭರ್ಜರಿ ಬಿಸಿನೆಸ್ ಮಾಡಿತ್ತು. ಈಗ ಪುಷ್ಪ 2 ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ರಶ್ಮಿಕಾ ಮಂದಣ್ಣ ನಾಯಕಿ. ಡಾಲಿ ಧನಂಜಯ, ಫಹಾದ್ ಫಾಸಿಲ್, ಸುನಿಲ್, ಅನಸೂಯ ಭರಾದ್ವಾಜ್, ರಾವ್ ರಮೇಶ್.. ಮೊದಲಾದವರು ನಟಿಸಿದ್ಧಾರೆ.
ವಿಷಯ ಇದಲ್ಲ. ಕನ್ನಡದ ದೊಡ್ಡ ಸ್ಟಾರ್ ನಟರೊಬ್ಬರ ಸಿನಿಮಾ ಯಾವಾಗ ರಿಲೀಸ್ ಎನ್ನುವುದು ಆ ಚಿತ್ರತಂಡದವರಿಗೇ ಗೊತ್ತಿಲ್ಲ. ಪ್ರಚಾರ ಮಾಡುವ ಸಮಯದಲ್ಲಿ ಇನ್ನೇನೋ ಮಾಡುವ ಸಿನಿಮಾ ತಂಡದವರು.. ನಮಗೆ ಥಿಯೇಟರ್ ಸಿಕ್ತಿಲ್ಲ. ಬೇಕಾದ ಟೈಂನಲ್ಲಿ ಶೋ ಕೊಡ್ತಿಲ್ಲ. ಸಿನಿಮಾ ಚೆನ್ನಾಗಿದೆ. ಜನರೇ ಬರ್ತಿಲ್ಲ ಎಂದು ಗೋಳಾಡುತ್ತಾರೆಯೇ ಹೊರತು.. ಪ್ರಚಾರವನ್ನು ವಿಭಿನ್ನವಾಗಿ ಮಾಡಿ ಸಿನಿ ರಸಿಕರನ್ನು ಸೆಳೆಯುವ ಕೆಲಸವನ್ನೇ ಮಾಡುವುದಿಲ್ಲ.



