ಕತ್ರಿನಾ ಕೈಫ್. ಮೂಲತಃ ಭಾರತೀಯರಲ್ಲ. ಒಂದು ಲೆಕ್ಕದಲ್ಲಿ ಆಕೆ ಯಾವ ದೇಶಕ್ಕೆ ಸೇರಿದವರು ಎಂಬುದು ಆಕೆಗೇ ಗೊತ್ತಿಲ್ಲ. ಏಕೆಂದರೆ ಕತ್ರಿನಾ ಕೈಫ್ ಅವರ ತಂದೆ ಮುಸ್ಲಿಂ. ತಾಯಿ ಕ್ರಿಶ್ಚಿಯನ್. ಇನ್ನು ತಂದೆ ತಾಯಿ ಡಿವೋರ್ಸ್ ಆದ ನಂತರ ಕತ್ರಿನಾ ಕೈಫ್ ದೇಶ ದೇಶಗಳನ್ನು ಸುತ್ತುತ್ತಲೇ ಬಾಲ್ಯವನ್ನೆಲ್ಲ ಕಳೆದುಬಿಟ್ಟರು. ಹೀಗಾಗಿ ಯಾವುದೇ ದೇಶ, ಧರ್ಮ ಅಥವಾ ಸಂಸ್ಕೃತಿಯ ಜೊತೆಯಲ್ಲಿ ಕತ್ರಿನಾ ಕೈಫ್ ಬಾಂಧವ್ಯ ಬೆಳೆಯಲೇ ಇಲ್ಲ.
ಹಾಂಗ್ ಕಾಂಗ್, ಚೀನಾ, ಜಪಾನ್, ಫ್ರಾನ್ಸ್, ಸ್ವಿಟ್ಜರ್‌ಲೆಂಡ್, ಪೋಲೆಂಡ್, ಬೆಲ್ಜಿಯಂ, ಹವೇಲಿ ಹಾಗೂ ಬ್ರಿಟನ್‌ಗಳಲ್ಲಿ ಬೆಳೆದರು. ಹಾಗೆ ನೋಡಿದರೆ ಕತ್ರಿನಾ ಕೈಫ್ ಬಾಲ್ಯದಲ್ಲಿ ಭಾರತಕ್ಕೆ ಬಂದು ಹೋಗುತ್ತಿದ್ದ ಗೆಸ್ಟ್ ಅಷ್ಟೇ. ಹೀಗಿದ್ದರೂ ಕತ್ರಿನಾ ಕೈಫ್ ಅವರ ಮೇಲೆ ಮೇಲೆ ಹಿಂದೂ ಧರ್ಮದ ಪ್ರಭಾವ ಸ್ವಲ್ಪ ಜಾಸ್ತಿಯೇ ಇದೆ. ಕತ್ರಿನಾ ಕೈಫ್ ಅವರು ದೇಶದ ಹಲವು ಪವಿತ್ರ ಕ್ಷೇತ್ರಗಳಿಗೆ ಪೂಜೆ ಮಾಡಿಸುತ್ತಾರೆ. ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ನಂತರವಂತೂ ಕತ್ರಿನಾ ಕೈಫ್ ಸಂಪೂರ್ಣ ಹಿಂದೂ ಆಗಿ ಬದಲಾಗಿದ್ದಾರೆ. ಇದು ಗೊತ್ತಿಲ್ಲದವರಿಗೆ ಕತ್ರಿನಾ ಕೈಫ್ ಅವರ ಪುಣ್ಯ ಸ್ನಾನ ಅಚ್ಚರಿ ಹುಟ್ಟಿಸುತ್ತಿದೆ, ಅಷ್ಟೆ.
ಹೌದು, ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಕೋಟ್ಯಂತರ ಜನ ಬಂದು ಹೋಗಿದ್ದಾರೆ. ಇನ್ನೂ ಬರುತ್ತಲೇ ಇದ್ದಾರೆ. ಸೆಲಬ್ರಿಟಿಗಳೂ ಇದಕ್ಕೆ ಹೊರತಾಗಿಲ್ಲ. ಶಿವರಾತ್ರಿಯ ದಿನ ಮಹಾಕುಂಭಮೇಳ ಸಂಪನ್ನವಾಗಲಿದೆ. ಸದ್ಯ ಕುಂಭಮೇಳದ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದ್ದು, ನಟಿ ಕತ್ರಿನಾ ಕೈಫ್ ಅವರು ಮಹಾಕುಂಭಮೇಳಕ್ಕೆ ಬಂದಿರುವುದು ಹಾಗೂ ಪುಣ್ಯಸ್ನಾನ ಮಾಡಿರುವುದು ಅಚ್ಚರಿ ಸೃಷ್ಟಿಸಿದೆ.
ನಟಿ ಕತ್ರಿನಾ ಕೈಫ್ ತಮ್ಮ ಅತ್ತೆ ವೀಣಾ ಕೌಶಲ್ ಜೊತೆಯಲ್ಲಿ ಕುಂಭಮೇಳಕ್ಕೆ ಆಗಮಿಸಿದ್ದರು. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಕತ್ರಿನಾ, ಧಾರ್ಮಿಕ ಗುರುಗಳಾದ ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ ಅವರಿಂದ ಆಶೀರ್ವಾದ ಪಡೆದುಕೊಂಡರು “ಈ ಬಾರಿ ನಾನು ಇಲ್ಲಿಗೆ ಬರಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ನನಗೆ ನಿಜಕ್ಕೂ ಸಂತೋಷವಾಗಿದೆ. ನಾನು ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದುಕೊಂಡೆ. ನನಗೆ ಇಲ್ಲಿನ ಶಕ್ತಿ, ಸೌಂದರ್ಯ ಮತ್ತು ಮಹತ್ವ ಇಷ್ಟವಾಯಿತುʼʼ ಎಂದು ಹೇಳಿಕೊಂಡಿದ್ದಾರೆ ಕತ್ರಿನಾ ಕೈಫ್. ಅಂದಹಾಗೆ ಕತ್ರಿನಾ ಕೈಫ್ ಅವರು ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿದ್ದಾರೆ.
ಇನ್ನು ಕತ್ರಿನಾ ಕೈಫ್ ಅವರಷ್ಟೇ ಅಲ್ಲ, ಕೆಲವು ಮುಸ್ಲಿಂ ದೇಶಗಳಿಂದಲೂ ನೂರಾರು ಭಕ್ತರು ಬಂದು ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಕತ್ರಿನಾ ಕೈಫ್ ಅವರ ಮಹಾಕುಂಭಮೇಳದ ಪವಿತ್ರ ಸ್ನಾನ ಅಚ್ಚರಿ ಮೂಡಿಸುತ್ತಿರುವುದಕ್ಕೆ ಕಾರಣಗಳೂ ಇವೆ. ಸೆಲಬ್ರಿಟಿಗಳಲ್ಲಿ ಹೀಗೆ ಬಂದ ಮೊದಲ ಮಹಿಳೆಯಾದ ಕಾರಣದಿಂದಲ ಕತ್ರಿನಾ ಕೈಫ್ ಸುದ್ದಿಯಾಗಿದ್ದಾರಷ್ಟೇ. ಇನ್ನು ಕ್ರೈಸ್ತ, ಬೌದ್ಧ, ಜೈನ, ಸಿಖ್.. ಸೇರಿದಂತೆ ವಿವಿಧ ಧರ್ಮಗಳ ಧಾರ್ಮಿಕ ನಾಯಕರೂ ಪುಣ್ಯಸ್ನಾನ ಮಾಡಿದ್ದಾರೆ. ಇನ್ನು, ನಟ ಅಕ್ಷಯ್ ಕುಮಾರ್ ಕೂಡಾ ಬಹಳ ಸಿಂಪಲ್ ಆಗಿ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ದೊಡ್ಡ ಸ್ಟಾರ್ ಆಗಿದ್ದರೂ, ಯಾವುದೇ ಹಮ್ಮುಬಿಮ್ಮು ಇಲ್ಲದೇ ಕುಂಭಮೇಳಕ್ಕೆ ಆಗಮಿಸಿ, ಎಲ್ಲರೊಂದಿಗೆ ತ್ರಿವೇಣಿ ಸಂಗಮದಲ್ಲಿ ಮುಳುಗೆದಿದ್ದಾರೆ. ನಟ ಅಕ್ಷಯ್ ಕುಮಾರ್ ಅವರ ಈ ಸಿಂಪ್ಲಿಸಿಟಿಯನ್ನ ಕಂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



