ಎಕ್ಕ ಟ್ರೇಲರ್ ರಿಲೀಸ್ ಆಗಿದೆ. ಯುವ ರಾಜ್ ಕುಮಾರ್, ಶೃತಿ, ಸಂಜನಾ ಆನಂದ್ ದೃಶ್ಯಗಳನ್ನು ನೋಡುತ್ತಿದ್ದರೆ.. ಥಟ್ಟಂತ ನೆನಪಾಗುತ್ತಿರುವುದು ಜಾಕಿ. ಜಾಕಿಯಲ್ಲಿ ದುಷ್ಟರ ಕೈಸೇರಿದ ತಂಗಿಯನ್ನು ಬಿಡಿಸಿಕೊಳ್ಳಲು ನಗರಕ್ಕೆ ಬರುವ ಜಾಕಿಗೆ ಅಲ್ಲಿ ಭಾವನಾ ಮೇಲೆ ಲವ್ ಆಗುತ್ತದೆ. ಅಲ್ಲದೆ ಜಾಕಿಯಲ್ಲಿ ಪುನೀತ್ ಮತ್ತು ತಾಯಿ ಜಯಮ್ಮನ ಪಾತ್ರದಲ್ಲಿ ಸುಮಿತ್ರಾ ನಟಿಸಿದ್ದರು. ಇಲ್ಲಿ ಯುವ ಮತ್ತು ಶೃತಿ. ಬೈಗುಳಗಳೂ ಸೇಮ್ ಟು ಸೇಮ್.
ಇದು ಟ್ರೇಲರಿನ ಒಂದು ಭಾಗವಾದರೆ.. ಆಕಸ್ಮಿಕವಾಗಿ ರೌಡಿಯಾಗುವ ಕೆಲವು ಸೀನ್ʻಗಳು ಚಿತ್ರದಲ್ಲಿವೆ. ಆ ದೃಶ್ಯಗಳು ವಂಶಿ ಚಿತ್ರದ ದೃಶ್ಯಗಳನ್ನು ನೆನಪಿಸುತ್ತಿವೆ. ಅದರಲ್ಲಿಯೂ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ರೌಡಿಯಾಗುವ ವಂಶಿ, ರೌಡಿಯಾಗುವ ಆಸೆ ಹೊತ್ತವರಿಗೆ ಬುದ್ದಿ ಹೇಳುತ್ತಾನೆ. ಅಂಥದ್ದೇ ಸೀನ್, ಎಕ್ಕ ಟ್ರೇಲರಿನಲ್ಲಿದೆ.
ಇಷ್ಟೆಲ್ಲ ಹೋಲಿಕೆ ಇದ್ದರೂ.. ಜುಲೈ 18ಕ್ಕೆ ಥಿಯೇಟರಿಗೆ ಬರುತ್ತಿರುವ ಚಿತ್ರದ ಟ್ರೇಲರ್ ರಗಡ್ ಆಗಿದೆ. ಹಳ್ಳಿಯಲ್ಲಿ ಆರಾಮ್ ಆಗಿ ಇದ್ದ ಹುಡುಗನೊಬ್ಬ, ಬೆಂಗಳೂರಿಗೆ ಬದುಕಲು ಬರುತ್ತಾನೆ. ಆಕಸ್ಮಿಕವಾಗಿ ರೌಡಿ ದುನಿಯಾ ಸೇರುತ್ತಾನೆ, ಮಧ್ಯದಲ್ಲೊಂದು ಲವ್ ಸ್ಟೋರಿ, ರೌಡಿಸಂ, ಪೊಲೀಸ್ ರೌಂಡಪ್.. ಎಲ್ಲವೂ ಇದೆ. ನೋ ಸಸ್ಪೆನ್ಸ್. ಟ್ರೇಲರಿನಲ್ಲಿ ಕಥೆಯನ್ನು ಹೇಳಿ.. ಸಿನಿಮಾ ನೋಡೋಕೆ ಬನ್ನಿ ಎಂದು ಕರೆಯುತ್ತಿದೆ ಎಕ್ಕ ಟೀಂ.
ಚಿತ್ರದ ಟ್ರೇಲರ್ ನೋಡಿದರೆ.. ಚುಟುಕಾದ ದೃಶ್ಯಗಳು, ಟರ್ನಿಂಗ್ ಪಾಯಿಂಟ್ಸ್ ಮೂಲಕ ನೇರವಾಗಿ ಕಥೆ ಹೇಳ್ತಿದ್ದಾರೆ ಡೈರೆಕ್ಟರ್ ರೋಹಿತ್ ಪದಕಿ. ಟ್ರೇಲರ್ ನೋಡಿದವರಿಗೆ ಸಡನ್ ಆಗಿ ಇಷ್ಟವಾಗುವುದು ಸತ್ಯ ಹೆಗಡೆ ಕ್ಯಾಮೆರಾ ಕೆಲಸ.
ಖಡಕ್ ಡೈಲಾಗ್ಗಳು ‘ಎಕ್ಕ’ ಟ್ರೇಲರ್ ಹೈಲೈಟ್. ‘ಬ್ಯಾಂಗಲ್ ಬಂಗಾರಿ’ ಹಾಡಿನ ಮೂಲಕ ಟ್ರೆಂಡ್ ಸೃಷ್ಟಿಯಾಗಿದೆ. ಚರಣ್ ರಾಜ್ ಸಂಗೀತ ಹವಾ ಎಬ್ಬಿಸಿದೆ. ಅತುಲ್ ಕುಲಕರ್ಣಿ, ಆದಿತ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುವ ರಾಜ್ ಕುಮಾರ್ ಎದುರು ಸಂಜನಾ ಆನಂದ್ ನಾಯಕಿಯಾಗಿದ್ದರೆ, ಶೃತಿ ತಾಯಿಯಾಗಿದ್ದಾರೆ.ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಅವರು ಒಟ್ಟಿಗೆ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಯುವ ರಾಜ್‌ಕುಮಾರ್ ಅವರ ‘ಎಕ್ಕ’ ಸಿನಿಮಾ ಟ್ರೇಲರ್ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾದಲ್ಲಿ ಏನೋ ದೊಡ್ಡ ಕಂಟೆಂಟ್ ಇದೆ ಅನ್ನೋದನ್ನ ಟ್ರೇಲರ್ ಮೂಲಕವೇ ಹಿಂಟ್ ಕೊಟ್ಟು ತೋರಿಸಿದ್ದಾರೆ ನಿರ್ದೇಶಕ. ಚಿತ್ರದ ಒಂದು ಸೀನ್‌ನಲ್ಲಿ ಪೊರಕೆ ಗನ್ ಹಿಡಿದು ಬರುವ ದೃಶ್ಯದಲ್ಲಿ ಥಟ್ಟಂತೆ ಜಾಕಿಯ ಅಪ್ಪುವನ್ನು ನೆನಪಿಸಿ ಬಿಡ್ತಾರೆ ಯುವರಾಜ್ ಕುಮಾರ್.



