ಯಾವುದೂ ಎಲ್ಲೆ ಮೀರಬಾರದು. ಅಭಿಮಾನವೂ ಕೂಡಾ. ಅತಿರೇಕವಾದರೆ.. ಮಿತಿಮೀರಿದರೆ ಅಪಾಯ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹೀಗಿರುವಾಗ ಅಭಿಮಾನಕ್ಕೂ ಒಂದು ಮಿತಿ ಇರಬೇಕಲ್ವಾ..? ಇದು ಕೇವಲ ಅಭಿಮಾನಿಗಳಿಗಷ್ಟ ಅಲ್ಲ, ಸ್ಟಾರ್ ನಟರಿಗೂ ಎಚ್ಚರಿಕೆ ಗಂಟೆ. ಏಕೆಂದರೆ ಅಭಿಮಾನಿಗಳು ತಮ್ಮ ತಮ್ಮ ಅಭಿಮಾನ ಪ್ರದರ್ಶನ ಮಾಡಲು ವಿಡಿಯೋ ಕೂಡಾ ಹಾಕಿ ಸಾಕ್ಷಿಯನ್ನೂ ಕೊಟ್ಟಿರ್ತಾರೆ. ಕಂಪ್ಲೇಂಟ್ ಕೊಟ್ಟರೆ ಜೈಲೂಟ ಗ್ಯಾರಂಟಿ.
ಘಟನೆ ನಡೆದಿದ್ದು ಇದು
ಕಾಟೇರ ಭರ್ಜರಿ ಪ್ರದರ್ಶನ ಕಾಣ್ತಾ ಇದೆ. ದರ್ಶನ್ ಅವರನ್ನು ಕೀಳು ಮಾತಿನಿಂದ ಟೀಕಿಸಿದ ಎಂದು ಆರೋಪಿಸಿ, ದರ್ಶನ್ ಅಭಿಮಾನಿಯೊಬ್ಬ ಆತನಿಗೆ ತಾನೇ ಶಿಕ್ಷೆ ಕೊಟ್ಟಿದ್ಧಾನೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ವಡ್ನಳ್ಳಿ ಗ್ರಾಮದ ಯುವಕ ಲಿಂಗರಾಜು ಹೆಸರಿನ ಯುವಕ ಕೆಲವು ದಿನಗಳ ಹಿಂದೆ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದನಂತೆ. ಆತ ಪುನೀತ್ ಅಭಿಮಾನಿ. ಆತನನ್ನು ದೊಡ್ಡೇಶ್ ಎಂಬ ದರ್ಶನ್ ಅಭಿಮಾನಿ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದ ಮುಂದೆ ನಿಲ್ಲಿಸಿ, ಕೈಯಲ್ಲಿ ಕರ್ಪೂರ ಹಚ್ಚಿಸಿ ಬಸ್ಕಿ ಹೊಡೆಸಿದ್ದಾನೆ. ಇದು ಹೊಸದಲ್ಲ. ಆ ಅಭಿಮಾನಿಯ ಬಾಯಲ್ಲಿ ಜೈ ಡಿ ಬಾಸ್, ಜೈ ದರ್ಶನ್, ಜೈ ಕಾಟೇರ ಎಂದೆಲ್ಲ ಹೇಳಿಸಿದ್ದಾನೆ. ಅಭಿಮಾನ ಅತಿರೇಕಕ್ಕೆ ಹೋಗಿದೆ.
ಇದು ಹೊಸದೂ ಅಲ್ಲ. ಆದರೆ ಇದೇ ಕೊನೆಯಾಗಲಿ..
ತಮ್ಮ ತಮ್ಮ ನಟನನ್ನು ಮೆಚ್ಚಿಕೊಳ್ಳುವ ಅಭಿಮಾನಿಗಳು, ಇನ್ನೊಬ್ಬ ನಟ, ಅಭಿಮಾನಿಗಳನ್ನು ಗೌರವಿಸುವ ಸಂಸ್ಕೃತಿ ಕ್ರಮೇಣ ಕಡಿಮೆಯಾಗುತ್ತಿದೆ. ಅಷ್ಟೇ ಅಲ್ಲ, ಅದು ಸ್ವತಃ ತಾವೇ ಶಿಕ್ಷೆ ಕೊಡಿಸುವ ಹಂತಕ್ಕೂ ಬಂದಿದೆ. ಈ ಹಿಂದೆ ಇಂತಹುದೇ ಕೆಲಸವನ್ನು ಪುನೀತ್ ಅಭಿಮಾನಿಗಳು ಮಾಡಿದ್ದರು. ಪುನೀತ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿದ್ದ ಎಂದು ದರ್ಶನ್ ಅಭಿಮಾನಿಯೊಬ್ಬನನ್ನು ಪುನೀತ್ ಸಮಾಧಿ ಬಳಿ ಕರೆಸಿ ಸ್ವತಃ ಶಿಕ್ಷೆ ಕೊಟ್ಟಿದ್ದರು. ಕಿಚ್ಚ ಸುದೀಪ್ ಅಭಿಮಾನಿಗಳು ಸುದೀಪ್ ಅವರನ್ನು ಟೀಕಿಸಿದ್ದ ಅಹೋರಾತ್ರನ ಮನೆಗೆ ನುಗ್ಗಿ ರೌಡಿಸಂ ಮಾಡಿದ್ದರು. ಅದು ಇವತ್ತಿಗೂ ಕೇಸ್ ನಡೆಯುತ್ತಿದೆ. ಜಗ್ಗೇಶ್ ಅವರಿಗೂ ದರ್ಶನ್ ಅಭಿಮಾನಿಗಳ ಬಿಸಿ ತಟ್ಟಿತ್ತು. ಜಗ್ಗೇಶ್ ಅವರನ್ನು ನಡುಬೀದಿಯಲ್ಲಿ ನಿಲ್ಲಿಸಿ ಮಾನ ಹರಾಜು ಹಾಕಿದ್ದರು ದರ್ಶನ್ ಫ್ಯಾನ್ಸ್.
ಇಂತಹ ಘಟನೆಗಳು, ರೌಡಿಸಂ ಯಾವ ನಟರಿಗೂ ಹೆಮ್ಮೆ ತರುವಂಥಹದ್ದಲ್ಲ. ಬೆದರಿಕೆ ಹಾಕುವ, ಹೆದರಿಸುವ, ಹಲ್ಲೆ ಮಾಡುವ, ತಾವೇ ಶಿಕ್ಷೆ ಕೊಡುವ ಅಧಿಕಾರವನ್ನು ಯಾರು ಯಾರಿಗೂ ಕೊಟ್ಟಿಲ್ಲ. ದಟ್ ಈಸ್ ಕ್ರೈಂ.
ಈ ಬಾರಿ ಕೈಲಿ ಕರ್ಪೂರ ಹಚ್ಚಿಸಿ, ಬಸ್ಕಿ ಹೊಡೆಸಿರುವ ಅಭಿಮಾನಿಗಳು ಮುಂದೊಂದು ದಿನ ಇನ್ನೊಂದು ಹಂತಕ್ಕೂ ಹೋಗಬಹುದು. ಮೊದಲಿಗೆ ಈ ರೀತಿಯ ಸ್ವಯಂ ಶಿಕ್ಷೆ ವಿಧಿಸುವುದೇ ಕಾನೂನು ಪ್ರಕಾರ ಅಪರಾಧ. ಇದು ಹೀಗೇ ಮುಂದುವರಿದರೆ ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಅದು ಇನ್ನೊಂದು ಹಂತಕ್ಕೆ ತಲುಪುತ್ತದೆ. ಕೊನೆಗೆ ಅಭಿಮಾನಿಗಳು ಪೊಲೀಸ್ ಠಾಣೆ ಮೆಟ್ಟಿಲೇರುವುದು, ಜೈಲು ಸೇರುವುದು ನಡೆಯುತ್ತದೆಯೇ ಹೊರತು, ಮತ್ತೇನೂ ಆಗುವುದಿಲ್ಲ. ಸ್ಟಾರ್ ನಟರಾದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಅಭಿಮಾನ ಅತಿರೇಕಕ್ಕೆ ಹೋಗುತ್ತಿದೆ. ಇವುಗಳನ್ನು ಸ್ವತಃ ಕಂಟ್ರೋಲ್ ಮಾಡುವುದು ಸ್ಟಾರ್ ನಟರೂ ಸೇರಿದಂತೆ ಎಲ್ಲರದ್ದೂ ಹೌದು. ಇಲ್ಲದೆ ಹೋದರೆ ಚಿತ್ರರಂಗದ ವಾತಾವರಣ ಕೆಡುತ್ತದೆ.
ಫೈನಲಿ ಏನಾಗುತ್ತದೆ..?
ಅಭಿಮಾನಿಗಳಿಗೆ ಒಂದು ವಿಷಯ ಗೊತ್ತಿರಬೇಕು. ದರ್ಶನ್, ಸುದೀಪ್, ಶಿವಣ್ಣ, ಯಶ್ ಸೇರಿದಂತೆ ಯಾರೂ ಕೂಡಾ ಕಾನೂನಿಗೆ ಆತೀತರಲ್ಲ. ಇತ್ತೀಚೆಗೆ ದರ್ಶನ್ ಅವರನ್ನು ಲೇಟ್ ನೈಟ್ ಪಾರ್ಟಿ ಮಾಡಿದ್ದ ಕೇಸಿನಲ್ಲಿ ಒಬ್ಬರಲ್ಲ, ಎಲ್ಲ ನಟ, ತಂತ್ರಜ್ಞರನ್ನೂ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗಿತ್ತು. ದರ್ಶನ್ ಅವರಿಗೆ ಪೊಲೀಸ್ ಕೇಸ್, ಕೋರ್ಟು ಹೊಸದಲ್ಲ. ಈ ಹಿಂದೆ ಇದನ್ನೂ ಮೀರಿದ ಅನುಭವಗಳಾಗಿವೆ. ನಟ ಸುದೀಪ್ ಕೂಡಾ ಹಲವು ಬಾರಿ ಒಂದಲ್ಲ ಒಂದು ಕೇಸಿಗೆ ಠಾಣೆ ಮೆಟ್ಟಿಲೇರಿದ್ಧಾರೆ. ಕೋರ್ಟಿಗೂ ಹೋಗಿದ್ದಾರೆ. ಹೀಗಿರುವಾಗ ಹಲ್ಲೆ ಮಾಡಿಸಿಕೊಂಡವನು ಒಂದು ಕಂಪ್ಲೇಂಟ್ ಕೊಟ್ಟರೆ ಜೈಲು ಗ್ಯಾರಂಟಿ. ಅಭಿಮಾನ ಪ್ರದರ್ಶನ ಮಾಡಲು ವಿಡಿಯೋ ಮಾಡಿ ಸಾಕ್ಷಿಯನ್ನೂ ಕೊಟ್ಟು ತಗ್ಲಾಕ್ಕೊಂಡ್ರೆ ಕೋರ್ಟಲ್ಲೂ ಶಿಕ್ಷೆ ತಪ್ಪಿದ್ದಲ್ಲ.



