ರಚಿತಾ ರಾಮ್ ಅವರ ಲುಕ್ಕು.. ಸ್ಮೈಲಿಗೆ ಫಿದಾ ಆಗದೇ ಇರೋದ್ಯಾರು.. ಅಂತಹ ರಚಿತಾ ರಾಮ್ ರೊಮ್ಯಾನ್ಸ್ ಮಾಡುವುದಕ್ಕೆ 50 ಲಕ್ಷ ಸುರಿದಿದ್ಧಾರೆ ಪ್ರೊಡ್ಯೂಸರ್ ಛಲವಾದಿ ಕುಮಾರ್. ಹೋಲ್ಡ್ ಆನ್.. ಇದು ಸಿನಿಮಾಗಾಗಿ ಮಾಡಿದ ಖರ್ಚು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಈ 50 ಲಕ್ಷದ ಬಜೆಟ್ಟಿನ ಹಾಡಿನಲ್ಲಿ ರಚಿತಾ ರಾಮ್ ಜೊತೆ ರೊಮ್ಯಾನ್ಸ್ ಮಾಡುವುದು ಶ್ರೀನಗರ ಕಿಟ್ಟಿ.
ಸಂಜು ವೆಡ್ಸ್ ಗೀತಾ 2 ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಅಷ್ಟೇ ವೇಗವಾಗಿ ನಡೆಯುತ್ತಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಈಗಾಗಲೇ 15 ದಿನಗಳ ಕಾಲ ಸುಮಾರು ಹನ್ನೊಂದು ಲೋಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹೀರೋ. ರಚಿತಾ ರಾಮ್ ಹೀರೋಯಿನ್. ಇವರಿಬ್ಬರ ಒಂದು ಪ್ರೀತಿಯ ಹಾಡಿಗೆ 50 ಲಕ್ಷ ರೂ. ಖರ್ಚು ಮಾಡುತ್ತಿರುವುದು ವಿಶೇಷ.
ಇತ್ತೀಚೆಗೆ 50 ಲಕ್ಷ ರೂಪಾಯಿ ಬಜೆಟ್‌ನಲ್ಲಿ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಹಾಡನ್ನು ಕುಣಿಗಲ್‌ನ ಯುಬಿ ಕುದುರೆ ಫಾರಂನಲ್ಲಿ ಐದು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಅದ್ಧೂರಿಯಾಗಿ ಕಲರ್‌ಫುಲ್ ಸೆಟ್ ಹಾಕಿ, ರೊಮ್ಯಾಂಟಿಕ್ ಹಾಡನ್ನು ಶೂಟ್ ಮಾಡಲಾಗಿದೆ. ನಿರ್ಮಾಪಕ ಛಲವಾದಿ ಕುಮಾರ್ ದುಡ್ಡು ಸುರಿಯುವುದಕ್ಕೆ ಹಿಂದೆ ಮುಂದೆ ನೋಡಿಲ್ಲ. ನಾಗಶೇಖರ್ ಅವರ ಮೇಲೆ ನಂಬಿಕೆ.
ಸಿನಿಮಾಗೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ಕೇವಲ ಪ್ರೀತಿ ಪ್ರೇಮದ ಕಥೆ ಅಷ್ಟೇ ಅಲ್ಲ, ರೈತರ ಹೋರಾಟದ ಕಥೆಯೂ ಇದೆ ಎಂದೂ ಹೇಳಿರುವ ನಾಗಶೇಖರ್ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಶ್ರೀಧರ ವಿ ಸಂಭ್ರಮ್ ಸಂಗೀತ ನಿರ್ದೇಶನವಿದೆ.



