ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿರುವಾಗ ಸಂಸದ ಪ್ರಜ್ವಲ್ ರೇವಣ್ಣ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಎಂದಿದ್ದಾರೆ. ಹಾಗಂತ ಪ್ರಜ್ವಲ್ ರೇವಣ್ಣ ನಿಜಕ್ಕೂ ತಪ್ಪು ಮಾಡಿದ್ದಾರೆ ಎಂದೇನಲ್ಲ, ಇಷ್ಟಕ್ಕೂ ಅವರು ಈ ಮಾತು ಹೇಳಿರುವುದು ಹಾಸನದಲ್ಲಿ. ಹಾಸನ ನಗರದಲ್ಲಿ ಬುಧವಾರ ಸಂಜೆ ಮೊಮ್ಮಗ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ಐದು ವರ್ಷಗಳ ಸಾಧನಾ ಪುಸ್ತಕ ಬಿಡುಗಡೆಗೊಳಿಸಿದ ವೇಳೆ ಪ್ರಜ್ವಲ್ ರೇವಣ್ಣ ಈ ಮಾತು ಹೇಳಿದ್ಧಾರೆ.
ನಾನು ಸಂಸದನಾದಾಗಿನಿಂದ ಸುಮ್ಮನೆ ಕೂತಿಲ್ಲ. ಪ್ರತಿದಿನ ಒಂದಲ್ಲ ಒಂದು ಕಡೆ ಓಡಾಡಿದ್ದೀನಿ. ಐದು ವರ್ಷದಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೀನಿ ಎಂದರು. ಮುಂದೆ ಇನ್ನೂ ಹೆಚ್ಚಿನ ಕೆಲಸ ಮಾಡ್ತೀನಿ, ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ನಿಮ್ಮ ಜೊತೆ ಇರ್ತೀನಿ, ನಿಮಗೆ, ಪಕ್ಷಕ್ಕೆ ಶಕ್ತಿ ತುಂಬವ ಕೆಲಸ ಮಾಡ್ತೀನಿ, 27ನೇ ವರ್ಷಕ್ಕೇ ಸಂಸದನಾದೆ, ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಕ್ಷಮೆ ಇರಲಿ ಎಂದು ಕೇಳಿದರು. 5 ವರ್ಷ ಜನಪರ ಕೆಲಸ ಮಾಡಿದ್ದೀನಿ. ನಮ್ಮ ಶಾಸಕರ ಸಹಕಾರದಿಂದ ಇಷ್ಟು ಕೆಲಸ ಮಾಡಲು ಸಾಧ್ಯವಾಯಿತು. 7 ಫ್ಯಾಕ್ಟರಿಗಳನ್ನು ಹಾಸನಕ್ಕೆ ತರುವ ಕೆಲಸ ಮಾಡಿದ್ದೇನೆ. ಸ್ಥಳೀಯರಿಗೆ ಕೆಲಸ ಸಿಗಬೇಕು. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ. ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿ ಮತ್ತಷ್ಟು ಕೆಲಸ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲೆಗೆ ನೀರಾವರಿ, ರಸ್ತೆ, ರೈಲ್ವೆ ಹೀಗೆ ಸಾವಿರಾರು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ನಾವು ಮಾಡಿದ್ದನ್ನು ಕಾಂಗ್ರೆಸ್‌ನವರು ಉದ್ಘಾಟನೆ ಮಾಡಿದ್ದಾರೆ. ಆ ಕೆಲಸ ಯಾರ ಕಾಲದಲ್ಲಿ ಆಗಿತ್ತು ಎಂದು ಸವಾಲು ಹಾಕಿದ್ಧಾರೆ.
ಇದೇ ವೇಳೆ ವೇದಿಕೆಯಲ್ಲಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಾತೆತಿದ್ದರೆ ನಾನು ಪ್ರಧಾನಿಯಾಗಿದ್ದೆ, ಮಗ ಮುಖ್ಯಮಂತ್ರಿಯಾಗಿದ್ದ, ಇನ್ನೊಬ್ಬ ಮಗ ಮಂತ್ರಿ, ಮೊಮ್ಮಗ ಎಂಪಿ, ಮಗದೊಬ್ಬ ಎಂಎಲ್‌ಸಿ ಅನ್ನೋದು ಬಿಟ್ಟರೆ ವಿರೋಧಿಗಳಿಗೆ ಬೇರೇನೂ ಇಲ್ಲ ಚುನಾವಣೆಗೆ ಶತದಿನವೂ ಇಲ್ಲ. ಆಗಲೇ ನಮ್ಮ ಮೇಲೆ ಗದಾ ಪ್ರಹಾರ ಶುರು ಮಾಡಿದ್ದಾರೆ. ಅರಸೀಕೆರೆ, ಹಾಸನದಲ್ಲಿ ಸಿಎಂ-ಡಿಸಿಎಂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮ ಮಾಡಿದ್ದಾರೆ. ನಮ್ಮ ಕುಟುಂಬದ ಮೇಲೆ ಕೇವಲ ಕುಟುಂಬ ರಾಜಕೀಯ ಎಂಬ ಒಂದೇ ಅಸ್ತ್ರ ಹೊರತು ಪಡಿಸಿದರೆ ವಿರೋಧಿಗೆ ಬೇರೆ ಅಸ್ತ್ರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜ್ವಲ್ ಕೆಲಸ ಮಾಡಿರೋ ವಿಚಾರಗಳನ್ನ ಜನರಿಗೆ ಮುಟ್ಟಿಸಬೇಕು. ಇಲ್ಲವಾದರೆ ನಮ್ಮ ಎದುರಾಳಿಗಳು ನಮ್ಮನ್ನ ಬಿಡುವುದಿಲ್ಲ ಎಂದ ಗೌಡರು, ರಾಜ್ಯ ಸಭೆಯಲ್ಲಿ ನನಗಿನ್ನೂ ಎರಡೂವರೆ ವರ್ಷ ಇದೆ. ನಾನು ಪ್ರಜ್ವಲ್ ಹಿಂದೆ ನಿಲ್ಲುತ್ತೇನೆ, ಸಲಹೆ ಸಹಕಾರ ನೀಡುತ್ತೇನೆ, ಈ ಜಿಲ್ಲೆಯ ಜನರ ಋಣ ತೀರಿಸಬೇಕಿದೆ ಎಂದಿರುವ ದೇವೇಗೌಡ, ಪ್ರಜ್ವಲ್ ಅವರ ಗೆಲುವಿಗೆ ಮನವಿ ಮಾಡಿದ್ದಾರೆ.



