ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ಸಿಗರು ಅಟ್ಯಾಕ್ ಮಾಡುತ್ತಿರುವುದು ಪ್ರಧಾನಿ ಮೋದಿಯವರನ್ನ. ಮೋದಿ ಯಾಕೆ ಏನೂ ಹೇಳ್ತಿಲ್ಲ. ಪ್ರಜ್ವಲ್ʻನನ್ನು ದೇಶ ಬಿಟ್ಟು ಹೋಗೋಕೆ ಯಾಕೆ ಬಿಟ್ರು..? ಮೋದಿ ಯಾಕೆ ಸೈಲೆಂಟು.. ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದರೆ.. ಜೆಡಿಎಸ್ʻನೊಂದಿಗೆ ಮೈತ್ರಿ ಮಾಡ್ಕೋಬೇಕಿತ್ತಾ ಎಂದು ಬಿಜೆಪಿ ನಾಯಕರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ವಿವಾದದಿಂದ ಸಾಕಷ್ಟು ಅಂತರ ಕಾಯ್ದುಕೊಳ್ತಿದ್ಧಾರೆ ಬಿಜೆಪಿ ಲೀಡರ್ಸ್. ಸ್ವತಃ ಕುಮಾರಸ್ವಾಮಿ ಕೂಡಾ ಮೋದಿಗೂ.. ಈ ಕೇಸಿಗೂ ಏನ್ ಸಂಬಂಧ ರೀ.. ನಮ್ಮ ಕುಟುಂಬದ ಮೇಲೆ ಆರೋಪ ಬಂದಿದೆ. ನಾವು ಎದುರಿಸುತ್ತೇವೆ ಅಂತಿದ್ಧಾರೆ. ಈ ಮಧ್ಯೆಯೇ ಮೋದಿ ಮಾತನಾಡಿದ್ದಾರೆ.
ಜೆಡಿಎಸ್ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದ ವೇಳೆಯೇ ಈ ಕುಕೃತ್ಯಗಳೆಲ್ಲ ನಡೆದಿವೆ. ಆಗ ಕ್ರಮ ಜರುಗಿಸದೆ ಸುಮ್ಮನಿದ್ದ ಸರ್ಕಾರ, ಚುನಾವಣೆ ಸಮಯದಲ್ಲಿ ರಿಲೀಸ್ ಮಾಡಿದೆ. ಒಕ್ಕಲಿಗರ ಮತಗಳ ಮೇಲೆ ಕಣ್ಣಿಟ್ಟು ಮತದಾನದ ಸಮಯದಲ್ಲಿ ವಿಡಿಯೋ ಬಿಡುಗಡೆ ಮಾಡಲಾಗಿದೆ. ವಿಡಿಯೋ ಪ್ರಕರಣದಲ್ಲಿ ಎಲ್ಲವೂ ಅನುಮಾನಕ್ಕೆ ಕಾರಣವಾಗುತ್ತಿವೆ. ಆರೋಪಿ ಪ್ರಜ್ವಲ್ ದೇಶ ಬಿಟ್ಟು ಹೋದ ಮೇಲೆ ವಿಡಿಯೋ ಬಿಡುಗಡೆ ಮಾಡಿದ್ಧಾರೆ. ಆತ ವಿದೇಶಕ್ಕೆ ಹೋಗುವ ಮಾಹಿತಿ ಇದ್ದರೂ ಮೌನವಾಗಿದ್ದ ಸರ್ಕಾರ, ಆಮೇಲೆ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದಿದ್ದರೆ ನಿಗಾ ಇಡಬೇಕಿತ್ತು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸರನ್ನು ಇಟ್ಟು ತಡೆಯಬೇಕಿತ್ತು ಎಂದು ಹೇಳಿದ್ಧಾರೆ.
ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮಾತನಾಡಿರುವ ಮೋದಿ ರಾಜಕೀಯ ಲಾಭ ಪಡೆದುಕೊಳ್ಳಲು ಆರೋಪಿ ದೇಶ ಬಿಟ್ಟು ಹೋಗುವವರೆಗೂ ಸುಮ್ಮನಿದ್ದು, ವ್ಯರ್ಥ ಕಾಲಹರಣ ಮಾಡಿದೆ ಎಂದು ಆರೋಪಿಸಿದ್ಧಾರೆ.
ಇದಕ್ಕೂ ಮೊದಲು ಅಮಿತ್ ಶಾ, ಜೆಪಿ ನಡ್ಡಾ ಕೂಡ ಈ ಬಗ್ಗೆ ಮಾತನಾಡಿದ್ದರು. ಈಗ ಮೋದಿಯವರೂ ಮಾತನಾಡಿದ್ದಾರೆ. ಆದರೆ.. ಇಲ್ಲಿ ಒಂದು ವಿಷಯ ಸ್ಪಷ್ಟ. ಮೋದಿ ಮಾತನಾಡಬೇಕು ಎಂದು ಗುರಿಯಾಗಿರಿಸಿಕೊಂಡು ಹೇಳಿಕೆ ಕೊಡುತ್ತಿದ್ದ ಕಾಂಗ್ರೆಸ್ ನಾಯಕರು, ಮೋದಿಯವರು ಅನಿವಾರ್ಯವಾಗಿ ಪ್ರಜ್ವಲ್ ರೇವಣ್ಣ ವಿಷಯದ ಬಗ್ಗೆ ಮಾತನಾಡಿಸುವಷ್ಟರ ಮಟ್ಟಿಗೆ ಗೆದ್ದಿದ್ದಾರೆ.
ವಿಶೇಷ ಅಂದ್ರೆ.. ತಾನು ಹಾಗೂ ತಮ್ಮವರು ಗೆದ್ದಿದ್ದ ಎರಡು ಕ್ಷೇತ್ರಗಳನ್ನು ಜೆಡಿಎಸ್ʻಗೆ ಬಿಟ್ಟುಕೊಟ್ಟು ಮೈತ್ರಿ ಮಾಡಿಕೊಂಡಿದ್ದ ಬಿಜೆಪಿಗೆ, ಮೈತ್ರಿಯಿಂದ ಏನು ಲಾಭವಾಯಿತೋ.. ಬಿಟ್ಟಿತೋ.. ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಿಂದಾಗಿ ಬಿಜೆಪಿಗೆ ದೇಶಾದ್ಯಂತ ಮುಜುಗರವಾಗಿದ್ದಂತೂ ಹೌದು. ಅಕಸ್ಮಾತ್.. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳದೇ ಇದ್ದಿದ್ದರೆ.. ಅನುಮಾನವೇ ಇಲ್ಲ. ಬಿಜೆಪಿಯವರು ಕೂಡಾ ಜೆಡಿಎಸ್ ವಿರುದ್ಧ ಮುಗಿಬೀಳುತ್ತಿದ್ದರು. ಈಗ ಜೆಡಿಎಸ್ ಮಾಡಿರುವ ತಪ್ಪುಗಳಿಗೆ ಬಿಜೆಪಿಯೂ ಉತ್ತರ ಕೊಡಬೇಕಾಗಿ ಬಂದಿದೆ.
ನಿಜವಾದ ಚಾತುರ್ಯವೆಂದರೆ.. ಕಾಂಗ್ರೆಸ್ಸಿನವರದ್ದು. ಯಾಕೆಂದರೆ.. ಅವರು ಸುಮ್ಮನೆ ಕೂತು.. ಚೆಸ್ ಪಾನ್ ನಡೆಸಬೇಕಾದ ಸಮಯದಲ್ಲಿ ಚೆಸ್ ಆಡಿ.. ಕೈಗೆ ಕೆಸರು ಮಾಡಿಕೊಳ್ಳದೆ ಗೆದ್ದಿದ್ದಾರೆ.



