ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಇತ್ತೀಚೆಗಷ್ಟೇ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಮುಂದಿನ ಮೂರು ತಿಂಗಳೊಳಗೆ ಈ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಎಸ್‌ಎಸ್‌ಎಲ್‌ಸಿ ಪಾಸ್ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಎಸ್‌ಎಸ್‌ಎಲ್‌ಸಿ ಆಗಿರುವುದಷ್ಟೇ ಅಲ್ಲ, ಇನ್ನೂ ಕೆಲವು ಅರ್ಹತೆಗಳಿರುತ್ತವೆ. ಅವುಗಳಿಗೆ ಈಗಿಂದಲೇ ತಯಾರಿ ಮಾಡಿಕೊಂಡರೆ ಕೆಲಸ ಗಿಟ್ಟಿಸುವುದು ಸುಲಭವಾಗಬಹುದು.
ಮೊದಲಿಗೆ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳೋಣ.
ಎಲ್ಲ ಸಾಮಾನ್ಯ ಪುರುಷ ಮತ್ತು ತೃತೀಯ ಲಿಂಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ
ಕನಿಷ್ಠ ಎತ್ತರ – 168 ಸೆಂ.ಮೀ.
ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ ಕನಿಷ್ಠ ವಿಸ್ತರಣೆ 5 ಸೆಂ.ಮೀ).
ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ
ಕನಿಷ್ಠ ಎತ್ತರ – 155 ಸೆಂ.ಮೀ.
ಎದೆ ಸುತ್ತಳತೆ : 70 ಸೆಂ.ಮೀ. ಸಂಪೂರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇರಬಾರದು
ಫಿಸಿಕಲ್ ಟೆಸ್ಟ್/ಪರೀಕ್ಷೆಗೆ ಸಿದ್ಧರಾಗಿ
1600 ಮೀಟರ್ ಓಟ : 6 ನಿಮಿಷ 30 ಸೆಕೆಂಡ್ ಒಳಗೆ ಓಡಬೇಕು
ಎತ್ತರ ಜಿಗಿತ : 1.20 ಮೀಟರ್‌ಗಿಂತ ಹೆಚ್ಚು ಜಿಗಿಯಬೇಕು
ಉದ್ದ ಜಿಗಿತ : 3.80 ಮೀಟರ್‌ಗಿಂತ ಹೆಚ್ಚು ಜಿಗಿಯಬೇಕು
ಗುಂಡು ಎಸೆತ (7.26 KG) : ಕನಿಷ್ಠ 5.60 ಮೀಟರ್ ದೂರ ಎಸೆಯಬೇಕು
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕೆಲವು ವಿನಾಯಿತಿಗಳಿವೆ
400 ಮೀಟರ್ ಓಟ : ಕನಿಷ್ಠ 2 ನಿಮಿಷಗಳಲ್ಲಿ ಓಡಬೇಕು
ಎತ್ತರ ಜಿಗಿತ : 0.90 ಮೀಟರ್‌ಗಿಂತ ಹೆಚ್ಚು ಎತ್ತರ ಜಿಗಿಯಬೇಕು
ಉದ್ದ ಜಿಗಿತ : 2.50 ಮೀಟರ್‌ಗಿಂತ ಕಡಿಮೆ ಇಲ್ಲದಂತೆ ಜಿಗಿಯಬೇಕು
ಗುಂಡು ಎಸೆತ (4 KG) : ಕನಿಷ್ಠ 3.75 ಮೀಟರ್ ದೂರ ಗುಂಡು ಎಸಯಬೇಕು
ಈ ಮೇಲಿನ ಎಲ್ಲ ಪರೀಕ್ಷೆಗೆ 3 ಅವಕಾಶಗಳು ಇರುತ್ತವೆ. ೩ ಅವಕಾಶಗಳಲ್ಲಿ ಯಾವುದಾದರೊಂದು ಪರೀಕ್ಷೆಯಲ್ಲಿ ವಿಫಲರಾದರೆ ಅಲ್ಲಿಂದಲೇ ಹೊರಗೆ ಕಳಿಸಲಾಗುತ್ತದೆ.
ಲಿಖಿತ ಪರೀಕ್ಷೆಯ ವಿವರಗಳು :
ಮೊದಲು 100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ 1:5 ರ ಅನುಪಾತದಡಿ ಒಟ್ಟು ಹುದ್ದೆಗೆ ಅರ್ಹಗೊಂಡ ಅಭ್ಯರ್ಥಿಗಳಿಗೆ ದೇಹದಾರ್ಢ್ಯತೆ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೊದಲು ದೇಹದಾರ್ಢ್ಯತೆ ಪರೀಕ್ಷೆ ನಡೆಸಿ, ಇದರಲ್ಲಿ ಅರ್ಹರಾದವರಿಗೆ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ.
100 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಕನ್ನಡ / ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆ ಇರುತ್ತದೆ. ಸರಿ ಉತ್ತರಕ್ಕೆ 1 ಅಂಕ, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ. ಪರೀಕ್ಷೆ ಅವಧಿ 01 ಗಂಟೆ 30 ನಿಮಿಷ ಇರುತ್ತದೆ.
ಇನ್ನೂ ಕೆಲವು ಪರೀಕ್ಷೆಗಳಿವೆ. ಮೀಸಲಾತಿಗೆ ಅನುಗುಣವಾಗಿ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಸಿದ್ಧಪಡಿಸಿ ಪ್ರಕಟಿಸಲಾಗುತ್ತದೆ. ತಾತ್ಕಾಲಿಕ ಆಯ್ಕೆಪಟ್ಟಿಯ ಎಲ್ಲಾ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ.
ಈ ಪರೀಕ್ಷೆಯಲ್ಲಿ ದೃಷ್ಟಿ: ದೂರದ ದೃಷ್ಟಿ, ಸಮೀಪದ ದೃಷ್ಟಿ ಪರೀಕ್ಷೆ. ಶ್ರವಣ ಶಕ್ತಿ: ರಿನ್ನೇಸ್ ಪರೀಕ್ಷೆ, ವೆಬ್ಬರ್ ಪರೀಕ್ಷೆ, ವೆರ್ಟಿಗೋ ಪರೀಕ್ಷೆಗಳು ನಡೆಯುತ್ತವೆ. ಅಂದರೆ ಕಿವಿ ಸರಿಯಾಗಿದೆಯಾ ಎಂದು ಪರೀಕ್ಷಿಸುತ್ತಾರೆ.
ಅಪಧಮನಿಯಲ್ಲಿ ಊತವಿದ್ದರೆ ಅನರ್ಹತೆಯಾಗಬಹುದು. ಹೃದ್ರೋಗ ಸೇರಿದಂತೆ ಇತರೆ ರೋಗಗಳ ಮುನ್ಸೂಚನೆ ಇರುವ ಕಾರಣ ಅವರನ್ನು ಪರಿಗಣಿಸುವುದಿಲ್ಲ. ಮಾತಿನಲ್ಲಿ ಅಡಚಣೆ ಇದ್ದರೆ, ಸರಾಗವಾಗಿ ಮಾತನಾಡಲು ಬರದೇ ಇದ್ದರೆ ಕೂಡಾ ಅನರ್ಹತೆಯಾಗಬಹುದು. ಇನ್ನು ಎದೆಯ ಕ್ಷ-ಕಿರಣವನ್ನು (ಎಕ್ಸ್-ರೇ) ಪರೀಕ್ಷೆಗೆ ತೆಗೆದುಕೊಳ್ಳಲಾಗುತ್ತದೆ. ಅದಾದ ಮೇಲೆ ಮೆಡಿಕಲ್ ಟೆಸ್ಟ್ ಕ್ಲಿಯರೆನ್ಸ್ ಸಿಗುತ್ತದೆ.
ಎಲ್ಲ ಆಗಿ ಆಯ್ಕೆಯಾದವರಿಗೆ ನೇಮಕಾತಿ ದೊರೆಯುತ್ತದೆ. ೨ ವರ್ಷದ ನಂತರವೇ ಖಾಯಮ್ ಆಗುತ್ತದೆ. ಹುದ್ದೆಗೆ ವೇತನ ಶ್ರೇಣಿ ರೂ.23,500 – 47,650 ವರೆಗೆ ಇರುತ್ತದೆ. ಆದರೆ ಈಗ ಏಳನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ವೇತನ ಶ್ರೇಣಿ ಹೆಚ್ಚಿರಲಿದೆ. ಪ್ರತಿ ಮೂಲ ವೇತನದ ಜತೆಗೆ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ವಿಶೇಷ ಭತ್ಯೆ, ಇತರೆ ಹಲವು ಭತ್ಯೆಗಳು ಸೇರಲಿವೆ. ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಅಭ್ಯರ್ಥಿಗೆ ಆರಂಭದಲ್ಲೇ ಬೇಸಿಕ್ ಪೇ ಮಾತ್ರ ರೂ.2,82,000 (ವಾರ್ಷಿಕವಾಗಿ)ಇರುತ್ತದೆ.



