ಪೊಲೀಸರು ಎಂದರೆ ಅರೆಸ್ಟ್ ಮಾಡ್ತಾರೇನೋ ಎನ್ನುವ ಭಯ. ಪತ್ರಕರ್ತ ಎಂದರೆ ಎಲ್ಲಿ ನೆಗೆಟಿವ್ ಸುದ್ದಿ ಮಾಡ್ತಾರೋ ಎನ್ನುವ ಭಯ. ಈ ಭಯದಲ್ಲಿಯೇ ಹಲವರು ಮೋಸ ಹೋಗ್ತಾರೆ. ಅಂತಹುದೇ ಒಂದು ಘಟನೆಯಲ್ಲಿ ದುಡ್ಡು ಕೊಟ್ಟು ಮೋಸ ಹೋಗಿರುವ ವ್ಯಕ್ತಿ ಕಥೆ ಇದು. ಲಕ್ಷ ಲಕ್ಷ ಕಳೆದುಕೊಂಡಿರುವವನ ಹೆಸರು ರಂಧೀರ್.
ಘಟನೆ ನಡೆದಿದ್ದು ಇಷ್ಟು :
ಡಿ.3ರ ರಾತ್ರಿ 12.30ರ ಸುಮಾರಿಗೆ ಅನಾಮಧೇಯ ಸಂಖ್ಯೆಯಿಂದ ರಂಧೀರ್ ಅವರ ಮೊಬೈಲ್‌ಗೆ ವಾಟ್ಸಾಪ್ ವಿಡಿಯೋ ಕರೆ ಬಂದಿದೆ. ವಿಡಿಯೋ ಕಾಲ್ ಮಾಡಿದ ಮಹಿಳೆ ಮೈಮೇಲೆ ಬಟ್ಟೆ ಇರಲಿಲ್ಲ. ನಗ್ನವಾಗಿದ್ದ ಆಕೆಯ ವಿಡಿಯೋ ನೋಡುತ್ತಲೇ ರಂಧೀರ್ ಗಾಬರಿಯಾಗಿದ್ದಾನೆ. ರಂಧೀರ್ ಅವರನ್ನೂ ಬಟ್ಟೆ ಬಿಚ್ಚು ಎಂದಾಗ ಹೆದರಿದ ರಂಧೀರ್ ವಿಡಿಯೋ ಕಾಲ್ ಕಟ್ ಮಾಡಿದ್ಧಾನೆ. ಭಯಗೊಂಡ ರಂಧೀರ್, ಕರೆ ಸ್ಥಗಿತಗೊಳಿಸಿ ಆ ಸಂಖ್ಯೆಯನ್ನು ಡಿಲೀಟ್ ಮಾಡಿದ್ದಾರೆ
ಆ ಘಟನೆ ನಡೆದ ಕೆಲವು ದಿನಗಳ ವರೆಗೆ ಬೇರೆ ಬೇರೆ ನಂಬರಿಂದ ಕರೆ ಬಂದರೂ ಹೆದರಿದ್ದ ರಂಧೀರ್ ಕಾಲ್ ಸ್ವೀಕರಿಸಿಲ್ಲ. ಅದಾದ ಸುಮಾರು 10 ದಿನಗಳ ನಂತರ ಇನ್ನೊಂದು ಕಾಲ್ ಬಂದಿದ್ದು, ಡಿ.14ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಇದೂ ಕೂಡಾ ವಿಡಿಯೋ ಕಾಲ್. ಕರೆ ಸ್ವೀಕರಿಸಿದಾಗ ವಿಡಿಯೋ ಕರೆ ಮಾಡಿದ್ದ ವ್ಯಕ್ತಿ ಖಾಕಿ ಸಮವಸ್ತ್ರದಲ್ಲಿರುವುದು ಕಂಡು ಬಂದಿದೆ. ಆತ ‘ನಾನು ಪೊಲೀಸ್ ಅಧಿಕಾರಿಯಾಗಿದ್ದು, ನೀನು ಮಹಿಳೆ ಜತೆಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ನನಗೆ ದೂರು ಬಂದಿದ್ದು, ನಿನ್ನನ್ನು ಬಂಧಿಸಬೇಕಿದೆ’ ಎಂದು ಹೆದರಿಸಿದ್ದಾನೆ. ಅಷ್ಟೇ ಅಲ್ಲ, ಇನ್ನೊಂದು ನಂಬರ್ ಕೊಟ್ಟು ಇದು ಮೀಡಿಯಾದವರ ನಂಬರ್ ಎಂದು ಹೆದರಿಸಿದ್ದಾನೆ.
ನ್ಯೂಸ್ ಚಾನೆಲ್ಲಿನವರ ನಂಬರ್ ಎಂದಾಗ ಇನ್ನೂ ಹೆದರಿದ್ದಾರೆ ರಂಧೀರ್. ಇದಾದ ಬಳಿಕ ಅದೇ ಸಂಖ್ಯೆಯಿಂದ ರಂಧೀರ್‌ಗೆ ಕರೆ ಬಂದಿದ್ದು, ‘ನಾನು ಖಾಸಗಿ ನ್ಯೂಸ್ ಚಾನೆಲ್‌ನವನು. ನನ್ನ ಬಳಿ ನಿನ್ನ ನಗ್ನ ವಿಡಿಯೋ ಇದ್ದು, ನೀನು ನನಗೆ ಹಣ ನೀಡಿದರೆ, ನಾನು ನಿನ್ನ ವಿಡಿಯೋ ಡಿಲೀಟ್ ಮಾಡುತ್ತೇನೆ’ ಎಂದು ಹೇಳಿದ್ದಾನೆ.
ಇದರಿಂದ ಆತಂಕಗೊಂಡ ರಂಧೀರ್, ವಿವಿಧ ಹಂತಗಳಲ್ಲಿ ₹1.12 ಲಕ್ಷ ವರ್ಗಾಯಿಸಿದ್ದಾರೆ. ಅನಾಮಧೇಯ ವ್ಯಕ್ತಿ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದಾಗ, ರಂಧೀರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ ಇತ್ತೀಚೆಗೆ ಹಲವರು ನ್ಯೂಸ್ ಚಾನೆಲ್ ಹೆಸರಲ್ಲಿ ಮೋಸ ಮಾಡುತ್ತಿದ್ಧಾರೆ. ಎಷ್ಟೋ ಬಾರಿ ಇಂತಹ ಘಟನೆಗಳಿಂದ ನ್ಯೂಸ್ ಚಾನೆಲ್ಲಿನವರು ಮಜುಗರಕ್ಕೊಳಗಾಗಿದ್ದಾರೆ. ಏಕೆಂದರೆ ಆರೋಪಿಗಳಿಗೂ, ಚಾನೆಲ್ಲಿನವರಿಗೂ ಸಂಬಂಧವರೇ ಇರೋದಿಲ್ಲ. ಹೀಗಾಗಿಯೇ ಇಂತಹ ಘಟನೆ ಜರುಗಿದಾಗ ತಕ್ಷಣ ನಮ್ಮ ಗಮನಕ್ಕೆ ತನ್ನಿ ಎಂದು ಹಲವು ಚಾನೆಲ್ಲಿನವರು ಹೇಳುತ್ತಿರುತ್ತಾರೆ. ಯಾವುದೋ ಸಣ್ಣ ಸಣ್ಣ ಚಾನೆಲ್ಲುಗಳು, ಪತ್ರಿಕೆಗಳು ಆ ಕೆಲಸ ಮಾಡಬಹುದೇನೋ.. ಆದರೆ ವೀಕ್ಷಕರ ವಲಯದಲ್ಲಿ ಗೌರವಯುತ ಸ್ಥಾನ ಸಂಪಾದಿಸಿರುವ ಯಾವ ಪತ್ರಿಕೆ ಅಥವಾ ಚಾನೆಲ್ಲಿನವರೂ ಈ ಕೆಲಸ ಮಾಡುವುದಿಲ್ಲ. ಹೀಗಾಗಿ ಇಂತಹವರ ಬಗ್ಗೆ ಜನರೂ ಜಾಗೃತರಾಗಬೇಕಿದೆ.



