ಪಕ್ಷದ ಟಿಕೆಟ್ ಕೊಡುವುದು ಒಂದು ಪಕ್ಷದ ನಿರ್ಧಾರ. ಟಿಕೆಟ್ ಕೊಟ್ಟ ಮೇಲೆ ಬಿ ಫಾರಂ ಕೊಟ್ಟು ಉಮೇದುವಾರರಾಗಿ ನಿಲ್ಲಿಸ್ತಾರೆ. ಆ ಅಭ್ಯರ್ಥಿ ಗೆಲುವಿಗೆ ಶ್ರಮ ಹಾಕ್ತಾರೆ. ಆದರೆ.. ರಾಜಸ್ಥಾನದ ಕಾಂಗ್ರೆಸ್ ಪರಿಸ್ಥಿತಿ ವಿಭಿನ್ನ.. ವಿಚಿತ್ರ.. ವಿಸ್ಮಯ..
ರಾಜಸ್ಥಾನದ ಬನ್ಸ್ವಾರಾ-ಡುಂಗ್ರಾಪುರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ವಿಚಿತ್ರ ಪರಿಸ್ಥಿತಿ ಎದುರಿಸ್ತಾ ಇದೆ. ತಾನೇ ಟಿಕೆಟ್ ಕೊಟ್ಟು, ಬಿ ಫಾರಂ ಕೊಟ್ಟು ನಿಲ್ಲಿಸಿದ್ದ ವ್ಯಕ್ತಿಗೆ ಮತ ಹಾಕಬೇಡಿ ಎಂದು ಹೇಳುತ್ತಿದೆ. ಇಷ್ಟಕ್ಕೂ ಇದು ಸೃಷ್ಟಿಯಾದ ಪರಿಸ್ಥಿತಿಯೇ ವಿಚಿತ್ರ ಬಿಡಿ.
ರಾಜಸ್ತಾನದಲ್ಲಿ ಕಾಂಗ್ರೆಸ್ ಮತ್ತು ಭಾರತ್ ಆದಿವಾಸಿ ಪಾರ್ಟಿ (ಬಿಎಪಿ)ಯ ಜೊತೆ ಮೈತ್ರಿ ಮಾತುಕತೆ ನಡೆದಿತ್ತು. ಆದರೆ.. ಮಾತುಕತೆ ಪದೇ ಪದೇ ವಿಫಲವಾಗುತ್ತಿತ್ತು. ಇನ್ನು ಮೈತ್ರಿ ಮಾತುಕತೆ ಮುಗಿದ ಅಧ್ಯಾಯ ಎಂದುಕೊಂಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಅರವಿಂದ್ ದಾಮೋರ್ ಅವರನ್ನು ಕಣಕ್ಕಿಳಿಸಿತ್ತು. ನಾಮಪತ್ರ ಸಲ್ಲಿಸಿದ ನಂತರ.. ಮೈತ್ರಿ ಮಾತುಕತೆ ಕುದುರಿತು. ಹೀಗಾಗಿ.. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭಾರತ್ ಆದಿವಾಸಿ ಪಾರ್ಟಿ (ಬಿಎಪಿ) ಬೆಂಬಲ ಘೋಷಿಸಿತ್ತು. (ಬಿಎಪಿ) ಅಭ್ಯರ್ಥಿ ರಾಜ್‌ಕುಮಾರ್ ರೋಟ್‌ಗೆ ಬೆಂಬಲ ನೀಡಿತು.
ಬಿಎಪಿಯನ್ನು ಬೆಂಬಲಿಸುವ ಪಕ್ಷದ ಘೋಷಣೆಗೆ ಅನುಗುಣವಾಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮತ್ರ ಸಲ್ಲಿಸಿದ್ದ ಅರವಿಂದ ದಾಮೋರ್ ಅವರಿಗೆ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಹೇಳಿತು. ಆದರೆ ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಮುಗಿಯುವವರೆಗೂ ದಾಮೋರ್ ನಾಪತ್ತೆಯಾಗಿಬಿಟ್ಟರು. ಮನೆಯಲ್ಲೂ ಸಿಗಲಿಲ್ಲ. ಗೆಳೆಯರ ಜೊತೆಯಲ್ಲೂ ಇರಲಿಲ್ಲ. ಅಕ್ಷರಶಃ ಭೂಗತರಾಗಿಬಿಟ್ಟರು. ನಾಮಪತ್ರ ವಾಪಸ್ ಅವಧಿ ಮುಗಿದ ನಂತರ ಮಾಧ್ಯಮಗಳ ಎದುರು ಕಾಣಿಸಿಕೊಂಡು.. ಆಗಿರುವ ಬೆಳವಣಿಗೆಯ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಘೋಷಣೆ ಮಾಡಿಬಿಟ್ಟರು.
ಈಗ ಕಾಂಗ್ರೆಸ್ ಪರಿಸ್ಥಿತಿ ಯಾರಿಗೂ ಬೇಡ. ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರು ಇಡೀ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ಮತ ನೀಡಬೇಡಿ. ಬೆಂಬಲಿತ ಅಭ್ಯರ್ಥಿಯಾಗಿರುವ ರೋಟ್‌ಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಬಿಎಪಿ ಜೊತೆಗಿನ ಮೈತ್ರಿಗೆ ವಿರುದ್ಧವಾಗಿರುವ ಪಕ್ಷದ ಕೆಲವು ಮುಖಂಡರ ಬೆಂಬಲ ತನಗೆ ಇದೆ ಎಂದು ದಾಮೋರ್ ಹೇಳಿಕೊಂಡಿದ್ದಾರೆ. ಜಿಲ್ಲಾ ಮಟ್ಟದ ನಾಯಕ ವಿಕಾಸ್ ಬಮ್ನಿಯಾ ಮತ್ತು ಕಾಂಗ್ರೆಸ್ ಶಾಸಕ ಅರ್ಜುನ್ ಬಮ್ನಿಯಾ ಅವರ ಪುತ್ರ, ಪಕ್ಷವು ರೋಟ್‌ಗೆ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಇಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿರುವುದು ಮಹೇಂದ್ರಜಿತ್ ಸಿಂಗ್ ಮಾಳವೀಯ. ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು.. ಯಾರು ಗೆಲ್ತಾರೆ ಅನ್ನೋದು ಕುತೂಹಲ. ಬನ್ಸ್ವಾರಾ-ಡುಂಗರ್‌ಪುರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರವಾಗಿದ್ದು, ಶುಕ್ರವಾರ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬನ್ಸ್ವಾರಾದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.



