ಬ್ರೆಡ್ಡು ಎಂದರೆ ಮಧ್ಯವಯಸ್ಕರಿಗೆ ರೋಗ ಬಂದಾಗಲಷ್ಟೇ ತಿನ್ನುವ ಆಹಾರ ಎನ್ನುವ ನಂಬಿಕೆಯಿದೆ. ಇನ್ನೂ ಹಲವರಿಗೆ ಟೀ-ಬನ್ನು ಎಂದರೆ ಅದೇ ಟಿಫನ್ನು. ಮತ್ತೂ ಕೆಲವರಿಗೆ ಅದು ಸ್ನ್ಯಾಕ್ಸ್. ಬ್ರೆಡ್ಡಿನಲ್ಲಿ ಏನೇನೆಲ್ಲ ವೆರೈಟಿ ಮಾಡಬಹುದು ಅನ್ನೋದು ಗೊತ್ತಾದರೆ ಅಚ್ಚರಿಯಾಗುತ್ತೆ. ಇದು ಬ್ರೆಡ್ ಬೋಂಡಾ ಅಥವಾ ಬ್ರೆಡ್ ಪಕೋಡಾ ಪ್ಲಾನ್. ಹೇಗೆ ಮಾಡಬಹುದು ಅಂತೀರಾ..
ಎರಡು ಆಲೂಗಡ್ಡೆ ತಗೊಳ್ಳಿ. ಚೆನ್ನಾಗಿ ಬೇಯಿಸಿ. ಒಂದು ನಾಲ್ಕು ಬ್ರೆಡ್ ಪೀಸ್ ತಗೊಳ್ಳಿ. ಇವಿಷ್ಟು ರೆಡಿಯಾದ ಮೇಲೆ 1 ಚಮಚ ಜೀರಿಗೆೆ, 1 ಕೊತ್ತಂಬರಿ ಬೀಜ, ಸ್ವಲ್ಪ ಕೊತ್ತಂಬರಿ ಸೊಪ್ಪು, 2 ಕಪ್ ಕಡಲೆ ಹಿಟ್ಟು, 2 ಚಮಚ ಒಣ ಮಾವಿನಕಾಯಿ ಪುಡಿ , 2 ಚಮಚ ಪುಡಿ ಮಾಡಿದ ಕಾಶ್ಮೀರ ಮೆಣಸು, ಒಂದಿಷ್ಟು ಹಸಿಮೆಣಸಿನಕಾಯಿ, ಅರ್ಧ ಇಂಚು ಶುಂಠಿ, ಉಪ್ಪು ಇಟ್ಟುಕೊಳ್ಳಿ.

ಮೊದಲು ಒಂದು ಬಾಣಲಿಯಲ್ಲಿ ಜೀರಿಗೆ ಮತ್ತು ಕೊತ್ತಂಬರಿಯನ್ನು ಒಣ ರೂಪದಲ್ಲಿ ಹುರಿದುಕೊಳ್ಳಿ. ಉರಿದುಕೊಂಡ ಮೇಲೆ ಆರಿಸಿ. ಆಮೇಲೆ ಚೆನ್ನಾಗಿ ಸಂಪೂರ್ಣವಾಗಿ ಆರಿದ ನಂತರ ರುಬ್ಬಿ.ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಸೇರಿಸಿ, ಬಿಸಿ ಮಾಡಿ.ಬಿಸಿಯಾದ ಎಣ್ಣೆಗೆ ನುಣ್ಣಗೆ ಹೆಚ್ಚಿಕೊಂಡ ಶುಂಠಿ, ಹಸಿಮೆಣಸಿನ ಕಾಯಿ, ಬೇಯಿಸಿದ ಆಲೂಗಡ್ಡೆ ಸೇರಿದಂತೆ ಎಲ್ಲಾ ಮಸಾಲೆ ಸಾಮಾಗ್ರಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಮಿಶ್ರಣದ ಜೊತೆಗೆ ಕೆಂಪು ಮೆಣಸಿನ ಪುಡಿ, ಧನಿಯಾ/ಕೊತ್ತಂಬರಿ ಪುಡಿ ಮತ್ತು ಜೀರಿಗೆಯನ್ನು ಮಿಕ್ಸ್ ಮಾಡಿ. ಮಿಶ್ರಣಕ್ಕೆ ಉಪ್ಪು ಮತ್ತು ತಾಜಾ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಸ್ವಲ್ಪ ಹೊತ್ತು ಬಿಟ್ಟು ಇನ್ನೊಂದು ಪಾತ್ರೆಯಲ್ಲಿ ಕಡ್ಲೇ ಹಿಟ್ಟು, ಓಮ್ಕಾಳು, ಸ್ವಲ್ಪ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಮಿಕ್ಸ್ ಮಾಡಿ. ಸ್ವಲ್ಪ ನೀರನ್ನು ಸೇರಿಸಿ ಹದವಾಗಿ ಹಿಟ್ಟು ತಯಾರಿಸಿ. 5ರಿಂದ 10 ನಿಮಿಷ ಇಡಿ.
ಅದೆಲ್ಲ ಆದ ಮೇಲೆ ಒಂದು ಬ್ರೆಡ್ ಸ್ಲೈಸ್ ಮೇಲೆ ಆಲೂಗಡ್ಡೆಯ ಮಿಕ್ಸ್ ಹರಡಿ. ಅದರ ಮೇಲೆ ಇನ್ನೊಂದು ಬ್ರೆಡ್ ಸ್ಲೈಸ್ ಇಟ್ಟು ಮುಚ್ಚಿ. ಮಿಶ್ರಣವನ್ನು ತುಂಬಿಕೊಂಡ ಬ್ರೆಡ್ ಸ್ಲೈಸ್ ಅನ್ನು ಕಡ್ಲೇ ಹಿಟ್ಟಿನಲ್ಲಿ ಅದ್ದಿ. ಚೆನ್ನಾಗಿ ಕಾದಿರುವ ಎಣ್ಣೆ ಬಂಡಿಯಲ್ಲಿ ಕರಿಯಿರಿ.ಪಕೋಡಾದ ಎರಡು ಬದಿಯಲ್ಲಿ ಚೆನ್ನಾಗಿ ಹುರಿದು, ಕಂದು ಬಣ್ಣಕ್ಕೆ ತಿರುಗಿದ ನಂತರ ಎಣ್ಣೆಯಿಂದ ತೆಗೆಯಿರಿ. ಬಿಸಿ ಬಿಸಿ ಪಕೋಡಾ ಸಿದ್ಧ. ಅದನ್ನ ಸಾಸ್ ಅಥವಾ ಪುದಿನ ಚಟ್ನಿ ಜೊತೆ ತಿನ್ನಿ. ಕೇಳಿದ ಕೂಡಲೇ ನೀರು ಬಂತಲ್ವಾ.. ಮತ್ಯಾಕೆ ತಡ.. ರೆಡಿ ಮಾಡಿ.



