ರಾಹುಲ್ ಗಾಂಧಿ ಕೊನೆಗೂ ಉತ್ತರ ಪ್ರದೇಶ ಅಖಾಡವನ್ನು ಉಳಿಸಿಕೊಂಡಿದ್ಧಾರೆ. ಸೋನಿಯಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ಧಾರೆ. ಅಂದಹಾಗೆ ನಾಮಪತ್ರ ಸಲ್ಲಿಸಲು ಮೇ 3 ಅಂದರೆ.. ಇವತ್ತೇ ಕೊನೆ ದಿನ. ಕೊನೆಯ ದಿನವೇ ಅಭ್ಯರ್ಥಿಯನ್ನು ಘೋಷಿಸಿ ಅಖಾಡಕ್ಕಿಳಿಯುತ್ತಿದ್ಧಾರೆ ರಾಹುಲ್ ಗಾಂಧಿ.
ರಾಹುಲ್ ಗಾಂಧಿ ಅವರಿಗೆ ಎದುರಾಳಿಯಾಗಿವುದು ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್. ಕಳೆದ ಬಾರಿ ಸೋನಿಯಾ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ರಾಯ್ ಬರೇಲಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಬಚ್ರವಾನ್, ಹರಚಂದಪುರ, ಸರಿಣಿ, ಉಂಚಹಾರ್ ಹಾಗೂ ರಾಯ್ ಬರೇಲಿ. ಈ 5 ಕ್ಷೇತ್ರಗಳಲ್ಲಿ ರಾಯ್ ಬರೇಲಿ ಹೊರತುಪಡಿಸಿದರೆ.. ಉಳಿದೆಲ್ಲ ಕಡೆ ಇರುವುದು ಸಮಾಜವಾದಿ ಪಕ್ಷದ ಶಾಸಕರು. ಕಾಂಗ್ರೆಸ್ಸಿನ ಒಬ್ಬರೂ ಗೆದ್ದಿಲ್ಲ. ರಾಯ್ ಬರೇಲಿ ಅಸೆಂಬ್ಲಿಯಲ್ಲಿ ಗೆದ್ದಿರುವುದು ಬಿಜೆಪಿ.
ರಾಹುಲ್ ಗಾಂಧಿಗೆ ಎದುರಾಳಿಯಾಗಿರುವ ದಿನೇಶ್ ಪ್ರತಾಪ್ ಸಿಂಗ್ 2019ರಲ್ಲಿಯೂ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಸೋನಿಯಾ ಗಾಂಧಿ 5 ಲಕ್ಷದ 24 ಸಾವಿರದ 918 ಮತಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ದಿನೇಶ್ ಪ್ರತಾಪ್ ಸಿಂಗ್ 3 ಲಕ್ಷದ 67 ಸಾವಿರದ 740 ಮತ ಪಡೆದಿದ್ದರು. ಸೋನಿಯಾ ಗಾಂಧಿ 1 ಲಕ್ಷದ 67 ಸಾವಿರದ 178 ಮತಗಳ ಅಂತರದಲ್ಲಿ ಗೆದ್ದಿದ್ದರು. ಆದರೆ.. ಈ ಬಾರಿ ಸೋನಿಯಾ ಗಾಂಧಿ ರಾಜ್ಯಸಭಾ ಸದಸ್ಯರಾಗಿ ಲೋಕಸಭೆ ಅಖಾಡದಿಂದ ದೂರ ಉಳಿದಿದ್ಧಾರೆ.
ಅತ್ತ ರಾಹುಲ್ ಗಾಂಧಿ, ಅಮ್ಮನಿಂದಲೇ ಸಿಕ್ಕಿದ್ದ ಅಮೇಥಿಯಲ್ಲಿ ಕಳೆದ ಬಾರಿ ಸೋತಿದ್ದವರು. ಹೌದು, ರಾಹುಲ್ ರಾಜಕೀಯಕ್ಕೆ ಬರುವವರೆಗೆ ಸೋನಿಯಾ ಗಾಂಧಿ ಅಮೇಥಿಯಿಂದ ಗೆಲ್ಲುತ್ತಿದ್ದವರು. (ಮೊದಲ ಚುನಾವಣೆಯಲ್ಲಿ ಬಳ್ಳಾರಿಯಿಂದಲೂ ಸ್ಪರ್ಧೆ ಮಾಡಿ ಗೆದ್ದು, ಆಮೇಲೆ ಬಿಟ್ಟುಕೊಟ್ಟಿದ್ದರು). ಈಗ ಅಮೇಥಿಯಲ್ಲಿ ಸೋತಿರುವ ರಾಹುಲ್ ಗಾಂಧಿ, ಪಕ್ಕದ ರಾಯ್ ಬರೇಲಿಗೆ ವಲಸೆ ಹೋಗಿದ್ದಾರೆ. ಅಮ್ಮನ ಕ್ಷೇತ್ರದಿಂದ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಅಂದಹಾಗೆ ರಾಹುಲ್ ಅವರಿಗೆ ಅಮೇಥಿಯಲ್ಲಿ ಸೋಲಿನ ಮುನ್ಸೂಚನೆ ಇದ್ದ ಕಾರಣಕ್ಕಾಗಿಯೇ ಕೇರಳಕ್ಕೆ ವಲಸೆ ಹೋಗಿದ್ದರು. ವಯನಾಡುನಿಂದ ಸ್ಪರ್ಧಿಸಿ ಗೆದ್ದಿದ್ದರು. ಈಗ ವಯನಾಡು ಎಲೆಕ್ಷನ್ ಮುಗಿದ ಮೇಲೆಯೇ.. ರಾಯ್ ಬರೇಲಿಗೆ ಹೋಗುತ್ತಿದ್ಧಾರೆ. ಹಾಗಾದರೆ.. ವಯನಾಡುವಿನಲ್ಲಿ ರಾಹುಲ್ ಗಾಂಧಿಗೆ ಸೋಲಿನ ಸುಳಿವೇನಾದರೂ ಸಿಕ್ಕಿದ್ಯಾ..? ಗೊತ್ತಿಲ್ಲ.
ಅಮ್ಮನ ಮೊದಲ ಕಾಣಿಕೆ ಅಮೇಥಿಯನ್ನು ಕಳೆದುಕೊಂಡ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿಯವರ ಮತ್ತೊಂದು ಕ್ಷೇತ್ರ ರಾಯ್ ಬರೇಲಿಯಲ್ಲೂ ಅದೃಷ್ಟ ಪರೀಕ್ಷೆ ಮಾಡ್ತಿದ್ಧಾರೆ.
ರಾಯ್ ಬರೇಲಿ ಸಾಧಾರಣ ಕ್ಷೇತ್ರ ಅಲ್ಲ. ರಾಹುಲ್ ಗಾಂಧಿಯವರ ತಾತ ಫಿರೋಜ್ ಗಾಂಧಿ, ಮೊದಲ ಎರಡು ಬಾರಿ ಗೆದ್ದಿದ್ದದ್ದು ಇಲ್ಲಿಯೇ. ಅಜ್ಜಿ ಇಂದಿರಾ ಗಾಂಧಿ ಕೂಡಾ ಇಲ್ಲಿಂದಲೇ ಗೆದ್ದಿದ್ದರು. ಸಂಬಂಧಿ ಅರುಣ್ ನೆಹರು ಕೂಡಾ ಇಲ್ಲಿಂದಲೇ ಒಮ್ಮೆ ಗೆದ್ದಿದ್ದವರು. 2004ರಿಂದ 2019ರವರೆಗೆ 5 ಚುನಾವಣೆಗಳಲ್ಲಿ ಇಲ್ಲೀಗ ಸೋನಿಯಾ ಗಾಂಧಿಯವರೇ ಗೆದ್ದಿದ್ದರು.



