ದೇಶದಲ್ಲಿ ಇವಿಎಂ ಬಗ್ಗೆ ಚರ್ಚೆಯಾಗುತ್ತಿರುವುದು ಇವತ್ತಿಂದಲ್ಲ. 2014ರಲ್ಲಿ ಮೋದಿ ಪ್ರಧಾನಿ ಆದ ದಿನಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಕಾಂಗ್ರೆಸ್ ಅಥವಾ ಬಿಜೆಪಿ ವಿರೋಧಿ ಪಕ್ಷಗಳು ಗೆದ್ಧಾಗ ಇವಿಎಂ ಮೇಲೆ ಬರದ ಅನುಮಾನ.. ಬಿಜೆಪಿ ಗೆದ್ದಾಗ ಸೃಷ್ಟಿಯಾಗುತ್ತವೆ. ಈ ಬಗ್ಗೆ ಸುಪ್ರೀಂಕೋರ್ಟ್ ಕಳೆದ ಕೆಲವು ವರ್ಷಗಳಲ್ಲಿ ಅದೆಷ್ಟು ಬಾರಿ ಅರ್ಜಿ ಸ್ವೀಕರಿಸಿ ವಿಚಾರಣೆ ನಡೆಸಿದೆಯೋ.. ಲೆಕ್ಕ ಇಟ್ಟವರಿಲ್ಲ. ಈ ಬಾರಿ ಅಂಥಾದ್ದೊಂದು ಅರ್ಜಿ ಹಾಕಿದ್ದವರು ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್. ಅವರ ಪರ ವಾದ ಮಂಡಿಸಿದವರು ಹಿರಿಯ ವಕೀಲ ಪ್ರಶಾಂತ್ ಭೂಷಣ್. ಪ್ರಶಾಂತ್ ಭೂಷಣ್.. ದೇಶದ ಪ್ರಖ್ಯಾತ ವಕೀಲರು. ಅವರ ಬದ್ಧತೆಯನ್ನು ಪ್ರಶ್ನೆ ಮಾಡುವಂತಿಲ್ಲ. ಜ್ಞಾನಿಗಳೂ ಹೌದು. ಇವುಗಳಿಗೆಲ್ಲ ಫುಲ್ ಸ್ಟಾಪ್ ಇಡುವಂತೆ ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಬುದ್ದಿವಾದ ಹೇಳಿದೆ.
ಅರ್ಜಿದಾರರ ವಾದ ಏನಿತ್ತು..?
ವೋಟರ್-ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ)ಯಿಂದ ಹೊರಬರುವ ಎಲ್ಲಾ ಸ್ಲಿಪ್‌ಗಳನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮೂಲಕ ಚಲಾಯಿಸಿದ ಮತಗಳೊಂದಿಗೆ ಮ್ಯಾಚ್ ಮಾಡಬೇಕು. ಹೆಚ್ಚಿನ ಮತದಾರರು ಇವಿಎಂಗಳನ್ನು ನಂಬೋದೇ ಇಲ್ಲ. ಇವಿಎಂ ಮತದಾನಕ್ಕೆ ಆಯ್ಕೆಯಾಗಿದ್ದ ಬಹುತೇಕ ಯುರೋಪಿಯನ್ ರಾಷ್ಟ್ರಗಳು ಬ್ಯಾಲೆಟ್ ಪೇಪರ್‌ಗೆ ಮರಳಿವೆ. ವಿಎಂಗಳನ್ನು ಸರ್ಕಾರದ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಘಟಕಗಳ ಕಂಪನಿಗಳು ತಯಾರಿಸುತ್ತವೆ. ಇವುಗಳು ನಂಬಿಕೆಗೆ ಅರ್ಹವಲ್ಲ. ಇವಿಎಂಗಳಲ್ಲಿ ದಾಖಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್‌ಗಳೊಂದಿಗೆ ಶೇ 100 ರಷ್ಟು ತಾಳೆ ಮಾಡಬೇಕು.
ಸುಪ್ರೀಂ ಕೋರ್ಟ್ ವಾದ :
ಬಹುತೇಕ ಜನ ಇವಿಎಂ ಡೇಟಾ ನಂಬುವುದಿಲ್ಲ ಎನ್ನುತ್ತಿದ್ದೀರಿ. ಹೆಚ್ಚಿನ ಮತದಾರರಿಗೆ ಇವಿಎಂಗಳ ಮೇಲ್ ವಿಶ್ವಾಸ ಇಲ್ಲ ಎನ್ನುತ್ತಿದ್ದೀರಿ. ಈ ಡೇಟಾ ನಿಮಗೆ ಎಲ್ಲಿಂದ ಸಿಕ್ಕಿತು? ಈ ಡೇಟಾವನ್ನು ಹೇಗೆ ಮತ್ತು ಎಲ್ಲಿ ಪಡೆದುಕೊಂಡಿದ್ದೀರಿ?
ಇದಕ್ಕೆ ವಕೀಲರು ಕೊಟ್ಟ ಸಮೀಕ್ಷೆ ನಡೆಸಲಾಗಿದೆ ಎನ್ನುವುದು. ಸುಪ್ರೀಂ ಕೋರ್ಟ್ ಇದಕ್ಕೆ ಖಾಸಗಿ ಸಮೀಕ್ಷೆಗಳನ್ನು ನಾವು ನಂಬೋದಿಲ್ಲ ಎಂದು ತಳ್ಳಿ ಹಾಕಿತು.
ಇವಿಎಂ ಒಪ್ಪಿಕೊಂಡಿದ್ದ ಜರ್ಮನಿಯಂತಹ ದೇಶಗಳು ಬ್ಯಾಲೆಟ್ ಪೇಪರ್ ಮತದಾನಕ್ಕೆ ವಾಪಸ್ ಬಂದಿವೆ ಎಂಬ ವಾದಕ್ಕೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡುವಾಗ ಯಾವ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದು ಗೊತ್ತಿದೆ. ನೀವು ಮರೆತಿದ್ದೀರೋನೋ.. ನಮಗೆ ನೆನಪಿದೆ. ನಾವೂ 6 ದಶಕದ ಆಯುಷ್ಯ ಕಳೆದಿದ್ದೇವೆ. ಎಲ್ಲವನ್ನೂ ನೋಡಿದ್ದೇವೆ ಎಂಬ ಉತ್ತರ ಕೊಟ್ಟಿದೆ ನ್ಯಾಯಪೀಠ. ಅಲ್ಲದೆ.. ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳು ಜರ್ಮನಿಯ ಜನ ಸಂಖ್ಯೆ ನನ್ನ ರಾಜ್ಯ ಪ.ಬಂಗಾಳಕ್ಕಿಂತ ಚಿಕ್ಕ ದೇಶ. ಭಾರತದಂತಹ ದೇಶದಲ್ಲಿ ಬ್ಯಾಲೆಟ್ ಪೇಪರ್ ಸೂಕ್ತ ಅಲ್ಲ ಎಂದು ಹೇಳಿತು.
ಇವಿಎಂಗಳನ್ನು ಸರ್ಕಾರದ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಘಟಕಗಳ ಕಂಪನಿಗಳು ತಯಾರಿಸುತ್ತವೆ ಎಂಬ ಆರೋಪಕ್ಕೆ ಹಾಗಿದ್ದರೆ, ಖಾಸಗಿ ಕಂಪನಿಗಳು ಇವಿಎಂ ತಯಾರಿಸಿದರೆ ನೀವು ಸಂತೋಷಪಡುತ್ತೀರಾ? ಎಂದು ಪ್ರಶ್ನೆ ಮಾಡಿತು.
ಇವಿಎಂಗಳಲ್ಲಿ ದಾಖಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್‌ಗಳೊಂದಿಗೆ ಶೇ 100 ರಷ್ಟು ತಾಳೆ ಮಾಡಬೇಕು ಎಂಬ ವಾದಕ್ಕೆ 60 ಕೋಟಿ ವಿವಿ ಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿತು. ಈ ವೇಳೆ ಚುನಾವಣಾ ಆಯೋಗದ ಪರ ವಕೀಲ ಗೋಪಾಲ್ ಶಂಕರ್ ನಾರಾಯಣ್, ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಸಲು ಕನಿಷ್ಠ 12 ದಿನಗಳು ಬೇಕು ಎಂದು ಚುನಾವಣಾ ಆಯೋಗ ಹೇಳುತ್ತದೆ ಎಂದರು.
ಮತದಾನಕ್ಕೆ ಬಾರ್‌ಕೋಡ್‌ಗಳ ಬಳಕೆ ಮಾಡಬೇಕು ಎಂಬ ಸಲಹೆಗೆ ಉತ್ತರಿಸಿದ ನ್ಯಾಯಪೀಠ ನೀವು ಅಂಗಡಿಗೆ ಹೋದರೆ, ಅಲ್ಲಿ ಬಾರ್‌ಕೋಡ್ ಇರುತ್ತದೆ. ಪ್ರತಿ ಅಭ್ಯರ್ಥಿ ಅಥವಾ ಪಕ್ಷಕ್ಕೆ ಬಾರ್‌ಕೋಡ್ ನೀಡದ ಹೊರತು ಬಾರ್‌ಕೋಡ್‌ಗಳು ಮತ ಎಣಿಕೆಗೆ ಸಹಾಯ ಮಾಡುವುದಿಲ್ಲ ಮತ್ತು ಇದು ಕೂಡ ದೊಡ್ಡ ಸಮಸ್ಯೆಯಾಗಿದೆ. ಸಾಫ್ಟ್‌ವೇರ್ ಅಥವಾ ಯಂತ್ರಕ್ಕೆ ಅನಧಿಕೃತ ಬದಲಾವಣೆಗಳನ್ನು ಮಾಡಿದಾಗ ಮಾನವ ಹಸ್ತಕ್ಷೇಪದಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ನಿಲ್ಲಿಸಲು ನೀವು ಯಾವುದೇ ಸಲಹೆಯನ್ನು ಹೊಂದಿದ್ದರೆ, ನೀವು ನಮಗೆ ತಿಳಿಸಬಹುದು ಎಂದು ಹೇಳಿದೆ.
ವಿವಿಪ್ಯಾಟ್‌ನಿಂದ ಮತದಾರರಿಗೆ ಚೀಟಿ ನೀಡುವುದು ಉತ್ತಮ ಮಾರ್ಗವಾಗಿದೆ ಮತ್ತು ಅದನ್ನು ನೋಡಿದ ನಂತರ ಅವರೇ ಅದನ್ನು ಪೆಟ್ಟಿಗೆಯಲ್ಲಿ ಇರಿಸಿ ನಂತರ ಅದನ್ನು ಇವಿಎಂಗೆ ಹೊಂದಿಸುತ್ತಾರೆ. ಪ್ರಸ್ತುತ ಚುನಾವಣಾ ಆಯೋಗವು ಪ್ರತಿ ವಿಧಾನಸಭೆಗೆ ಕೇವಲ 5 ವಿವಿಪ್ಯಾಟ್ ಯಂತ್ರಗಳನ್ನು ಎಣಿಸುತ್ತಿದ್ದರೆ, ಅಂತಹ 200 ಯಂತ್ರಗಳಿವೆ. ಇದು ಕೇವಲ 5 ಪ್ರತಿಶತವಾಗಿದೆ. ವಿವಿಪ್ಯಾಟ್‌ನಿಂದ ನೀಡಲಾದ ಚೀಟಿಯನ್ನು ತೆಗೆದುಕೊಂಡು ಮತಪೆಟ್ಟಿಗೆಯಲ್ಲಿ ಹಾಕಲು ಮತದಾರರಿಗೆ ಅವಕಾಶ ನೀಡಬಹುದು ಎಂದು ಹೇಳಿದರು. ಇದೇ ವೇಳೆ ಸುಪ್ರೀಂ ಕೋರ್ಟ್, ಇವಿಎಂ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದರ ಬಗ್ಗೆ ಚುನಾವಣಾ ಆಯೋಗ ನಮಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
ಇದೆಲ್ಲವೂ ಆದ ಮೇಲೆ ಮತ್ತೆ ಶುಕ್ರವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್.. ಪದೇ ಪದೇ ಇಂತಹ ಅರ್ಜಿ ಹಾಕಿ.. ಎಲೆಕ್ಷನ್ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಬೇಡಿ. ಇವಿಎಂ ಸರಿಯಾಗಿಯೇ ಇವೆ. ಪ್ರಜಾಪ್ರಭುತ್ವವನ್ನು ತಮಾಷೆ ಮಾಡಬೇಡಿ. ಇಂತಹ ಅರ್ಜಿಗಳು ಮತ್ತೆ ಮತ್ತೆ ಬರುವುದರಿಂದ ಜನರಲ್ಲಿ ಅಪನಂಬಿಕೆ, ವಿಶ್ವಾಸದ ಕೊರತೆ ಉದ್ಭವವಾಗುತ್ತದೆ ಎಂದು ಹೇಳಿದೆ.



