ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ಸಭೆ ನಡೆದಿದೆ. ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಸೈಟ್ ಹಂಚಿಕೆ ಹಗರಣದ ಪ್ರಾಸಿಕ್ಯೂಷನ್ ಹಾಗೂ ಬಿಜೆಪಿ ಹಗರಣಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಸಿದ್ಧರಾಮಯ್ಯ ಅವರ ಬೆನ್ನಿಗೆ ನಿಂತಿದೆ ಕಾಂಗ್ರೆಸ್ ಹೈಕಮಾಂಡ್.
‘ಪ್ರಕರಣದಲ್ಲಿ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದೆ’ ಎಂದು ಖುದ್ದು ರಾಹುಲ್ ಗಾಂಧಿ ಅವರೇ ಭರವಸೆ ನೀಡಿದ್ದಾರೆ. ಯಾವುದೇ ಆತಂಕ ಇಲ್ಲದೆ ನಿರಾಳವಾಗಿ ಆಡಳಿತ ನಡೆಸುವಂತೆಯೂ ಸಲಹೆ ನೀಡಿದ್ದಾರೆ’ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸುವ ಜತೆಗೆ ರಾಷ್ಟ್ರ ಮಟ್ಟದಲ್ಲೂ ಪ್ರಬಲ ಹೋರಾಟ ನಡೆಸಲು ದೆಹಲಿಯಲ್ಲಿ ಶುಕ್ರವಾರ ನಡೆದ ಎಐಸಿಸಿ ವರಿಷ್ಠರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಷ್ಟ್ರಪತಿಗಳ ಎದುರು ಶಾಸಕರ ಪರೇಡ್ ನಡೆಸುವ ಬಗ್ಗೆಯೂ ಚಿಂತನೆ ನಡೆದಿದೆ. ಹಾಗೇನಾದರೂ ಆದರೆ.. ರಾಷ್ಟ್ರಮಟ್ಟದಲ್ಲಿ ಸುದ್ದಿ ಸಂಚಲನ ಸೃಷ್ಟಿಸಲಿದೆ.
ರಾಜ್ಯಪಾಲರು ಕಾನೂನು ಬಾಹಿರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಹಾಗೂ ಪ್ರತಿಪಕ್ಷಗಳ ನಾಯಕರ ಮೇಲಿನ ದೂರುಗಳ ಬಗ್ಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ, ಜೆಡಿಎಸ್ ವಿರುದ್ಧ ರಾಜ್ಯಾದ್ಯಂತ ಪ್ರಬಲ ಹೋರಾಟ ರೂಪಿಸಿ ಎಂದು ರಾಹುಲ್ ಗಾಂಧಿ ಅವರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.
‘ಇದು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾದ ವಿಷಯವಲ್ಲ. ಇದನ್ನು ರಾಜ್ಯಕ್ಕೆ ಸೀಮಿತಗೊಳಿಸಿದರೆ ಬೇರೆ ರಾಜ್ಯಗಳಲ್ಲೂ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಬಹುದು. ಹೀಗಾಗಿ ಇಂಡಿಯಾ ಒಕ್ಕೂಟದ ಜತೆ ಚರ್ಚಿಸಿ ರಾಷ್ಟ್ರಮಟ್ಟದಲ್ಲಿ ರಾಜ್ಯಪಾಲರ ಕ್ರಮದ ವಿರುದ್ಧ ಹೋರಾಟ ರೂಪಿಸೋಣ’ ಎಂದು ಸಭೆಯಲ್ಲಿ ರಾಹುಲ್ ಗಾಂಧಿಯವರೇ ಹೇಳಿದ್ದಾರೆ. ಹೀಗಾಗಿ ಮುಡಾ ಹಗರಣ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಲಿದೆ. ಇದಕ್ಕೆಲ್ಲ ಕಾರಣಗಳೂ ಇವೆ.
ಸಿಎಂ ಸಿದ್ದರಾಮಯ್ಯ ಅವರನ್ನು ಮೊದಲಿಗೆ ಟಾರ್ಗೆಟ್ ಮಾಡಿದರೆ, ಸರಕಾರವನ್ನು ಅಭದ್ರಗೊಳಿಸುವ ಟಾರ್ಗೆಟ್‌ನ ಮೊದಲ ಪ್ರಯತ್ನ ಯಶಸ್ವಿಯಾಗುತ್ತದೆ ಎಂಬ ಚಿತಾವಣೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಂದ ನಡೆದಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿರುವ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲಿ ಸರಕಾರವನ್ನು ರಕ್ಷಣೆ ಮಾಡಿಕೊಳ್ಳುವುದು ಆದ್ಯತೆ ಆಗಬೇಕು. ಈ ಪ್ರಯತ್ನದಲ್ಲಿಎಡವಿದರೆ ತೆಲಂಗಾಣ ಸೇರಿ ಯಾವ ರಾಜ್ಯದಲ್ಲೂ ಪಕ್ಷದ ಸರಕಾರವನ್ನು ಕೇಂದ್ರ ಸರಕಾರ ಉಳಿಸುವುದಿಲ್ಲ. ಹಾಗಾಗಿ ಸಿಎಂ ಆಗಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆ ಮಾಡುವ ಯಾವ ಪ್ರಯತ್ನವೂ ಬೇಡ ಎಂಬ ಖಡಕ್ ತೀರ್ಮಾನಕ್ಕೆ ಎಐಸಿಸಿ ಹೈಕಮಾಂಡ್ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್‌ನಲ್ಲಿ ರಾಜ್ಯಪಾಲರ ತೀರ್ಮಾನವನ್ನು ಎತ್ತಿ ಹಿಡಿದರೆ ಮುಂದೇನು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ”ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನೇ ರಾಜ್ಯಪಾಲರು ವಾಪಸ್ ಪಡೆಯುವಂತಹ ಸ್ಥಿತಿ ಎದುರಾಗುತ್ತದೆ, ಕಾದುನೋಡಿ,” ಎಂದು ಸವಾಲು ಹಾಕಿದ್ದಾರೆ.



