ಮೊದಲಿಗೆ ಕುಮಾರಸ್ವಾಮಿ.. ಈಗ ನಿಖಿಲ್. ಕೆಲವೇ ದಿನಗಳ ಹಿಂದೆ ಹಾಸನದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಪ್ರಜ್ವಲ್ ಅವರನ್ನು ತಮ್ಮ ಮಗ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ಕುಮಾರಸ್ವಾಮಿ, ಪೆನ್ ಡ್ರೈವ್ ಹೊರಬರುತ್ತಿದ್ದಂತೆ ಪ್ರಜ್ವಲ್, ರೇವಣ್ಣ-ಭವಾನಿಯವರ ಮಗ. ನನ್ನ ಮಗನಲ್ಲ ಎಂದಿದ್ದರು. ಅಣ್ಣನ ಕುಟುಂಬವೇ ಬೇರೆ. ನಾವೇ ಬೇರೆ. ನಾನು, ನನ್ನ ಹೆಂಡತಿ, ನನ್ನ ಮಗ, ಸೊಸೆ ಮತ್ತು ಮೊಮ್ಮಗನಿಗೆ ನಾನು ಜವಾಬ್ದಾರಿ ಎಂದಿದ್ದರು. ಈಗ ಅದೇ ಹಾದಿಯಲ್ಲಿ ನಿಖಿಲ್ ಕೂಡಾ ಇದ್ಧಾರೆ.
ಈಗ ಅರೆಸ್ಟ್ ಆಗಿರುವ ರೇವಣ್ಣ, ಕುಮಾರಸ್ವಾಮಿಯವರಿಗೆ ಅಣ್ಣ. ನಿಖಿಲ್ ಅವರಿಗೆ ದೊಡ್ಡಪ್ಪನಾಗಬೇಕು. ಈಗ ಬಂಧನದ ಭೀತಿಯಲ್ಲಿರುವ ಪ್ರಜ್ವಲ್ ರೇವಣ್ಣ, ನಿಖಿಲ್ ಅವರಿಗಿಂತ ಒಂದು ವರ್ಷ ದೊಡ್ಡವರು. ಅಣ್ಣನಾಗಬೇಕು. ಆದರೆ.. ಅಶ್ಲೀಲ ವಿಡಿಯೋ ಕೇಸಿನಲ್ಲಿ ಮಾನ ಮರ್ಯಾದೆ ಕಳೆದುಕೊಂಡಿರುವ ಪ್ರಜ್ವಲ್ ಅವರನ್ನು ಅಣ್ಣ ಎನ್ನುವುದಕ್ಕೂ ಹಿಂದೇಟು ಹಾಕಿದ್ಧಾರೆ ನಿಖಿಲ್. ಅಣ್ಣ ಎನ್ನುವುದು ಅತ್ಲಾಗಿರಲಿ.. ಹಾಸನದ ಸಂಸದರೂ ಆಗಿರುವ ಪ್ರಜ್ವಲ್ ಅವರ ಹೆಸರು ಹೇಳೋದಕ್ಕೂ ಹಿಂದೆ ಮುಂದೆ ನೋಡಿದ್ಧಾರೆ. ಹೆಸರು ಹೇಳಿಲ್ಲ.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ, ಹಾಗೂ ಅವರ ಸೋದರ ನಿಖಿಲ್ ಕುಮಾರಸ್ವಾಮಿ ಫಸ್ಟ್ ರಿಯಾಕ್ಷನ್ ಕೊಟ್ಟಿದ್ಧಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ಆಗುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಅಂತಿಮವಾಗಿ ಎಸ್‌ಐಟಿ ವರದಿ ಬಂದ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ ಎಂದಿರುವ ನಿಖಿಲ್, ತಮ್ಮ ಸುದೀರ್ಘ ಹೇಳಿಕೆಯಲ್ಲಿ ಅಪ್ಪಿ ತಪ್ಪಿಯೂ ಪ್ರಜ್ವಲ್ ಎಂಬ ಹೆಸರು ಹೇಳಿಲ್ಲ. ಅಣ್ಣ ಎಂದು ಕರೆಯುವುದು ದೂರದ ಮಾತು.
ನನ್ನ ಸ್ನೇಹಿತರು ಫೋನ್ ಮಾಡಿ ಹೇಳಿದರು. ಆ ವಿಡಿಯೋಗಳನ್ನು ನೋಡಲು ನನಗೆ ಧೈರ್ಯ ಬರಲಿಲ್ಲ. ಬ್ಲರ್ ಮಾಡದೇ ವಿಡಿಯೋ ಹರಿಬಿಟ್ಟಿದ್ದಾರೆ. ಆ ಹೆಣ್ಣು ಮಕ್ಕಳ ಮುಖ ಕಾಣುವ ರೀತಿ ವಿಡಿಯೋ ರಿಲೀಸ್ ಮಾಡಿದ್ಧಾರೆ. ಈ ರೀತಿ ವಿಡಿಯೋ ಬಿಡುಗಡೆ ಮಾಡಿರುವವರ ಮೇಲೆ ಕ್ರಮ ಆಗಬೇಕು ಎಂದಿದ್ಧಾರೆ ನಿಖಿಲ್.
ರೇವಣ್ಣ ಅವರ ವಿಚಾರವಾಗಿರಲಿ, ಹಾಸನ ಸಂಸದರ ವಿಚಾರವಾಗಲಿ ನಾನು ಬಹಳಷ್ಟು ಬಾರಿ ಹೇಳಿದ್ದೇನೆ. ನಾನು ಹೆಚ್ಚು ಹಾಸನ ಜಿಲ್ಲೆಗೆ ಕಾಲಿಟ್ಟವನಲ್ಲ, ಹಾಸನಾಂಬೆ ದರ್ಶನಕ್ಕೆ ಹೋಗುತ್ತಿದ್ದೆ. ನನಗಾಗಲಿ, ಹಾಸನ ಸಂಸದರಿಗೆ ಹೆಚ್ಚಿನ ಸಂಪರ್ಕ ಇಲ್ಲ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣ ಅವರ ಹೆಸರು ಕೂಡಾ ಹೇಳಿಲ್ಲ ನಿಖಿಲ್.
ಆ ಮೂಲಕ ತಮ್ಮ ತಂದೆ ಕುಮಾರಸ್ವಾಮಿ ಅವರಂತೆಯೇ.. ಮಗ ನಿಖಿಲ್ ಕೂಡಾ ದೊಡ್ಡಪ್ಪ ರೇವಣ್ಣ, ಅಣ್ಣ ಪ್ರಜ್ವಲ್ ಹಾಗೂ ದೊಡ್ಡಮ್ಮ ಭವಾನಿ ರೇವಣ್ಣ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ದೇವೇಗೌಡರ ಕುಟುಂಬದಲ್ಲಿ ಇದೇ ಮೊದಲ ಬಾರಿಗೆ ಒಬ್ಬರು ಜೈಲಿಗೆ ಹೋದಂತಾಗಿದೆ.



