ಬಿಜೆಪಿ (BJP) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (NDA) ಜೆಡಿಎಸ್ (JDS) ಸೇರ್ಪಡೆಯಾದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ (BS Yeddyurappa) ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಪುತ್ರ ನಿಖಿಲ್ ಕುಮಾರ್ ಸ್ವಾಮಿ (Nikhil Kumaraswamy) ಮನೆಗೇ ಹೋಗಿ ಆಶೀರ್ವಾದ ಪಡೆದಿದ್ದಾರೆ. ಉಪಾಹಾರ ಸೇವಿಸಿದ್ದಾರೆ. ಸಡನ್ ಆಗಿ ಆಕ್ಟಿವ್ ಆಗಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಮನೆಗೆ ಬಂದು ಆಶೀರ್ವಾದ ಪಡೆದ ನಿಖಿಲ್ ರಾಜಕೀಯ ಭವಿಷ್ಯಕ್ಕೆ ಶುಭ ಹಾರೈಸಿದ ಯಡಿಯೂರಪ್ಪ, ಕುಮಾರಸ್ವಾಮಿ ಮನೆಗೆ ಭೇಟಿ ನೀಡುವುದಾಗಿ ಹೇಳಿದ್ದಾರಂತೆ. ನ್’ಡಿಎ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಅದರ ಆಧಾರದ ಮೇಲೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಯಡಿಯೂರಪ್ಪ ಕರ್ನಾಟಕದ ಹಿರಿಯ ನಾಯಕರು. ಹೀಗಾಗಿ ವೈಯಕ್ತಿಕವಾಗಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡೆ ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ಮಾಡಿಲ್ಲ, ನಾನು ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಅಲ್ಲ, ಸದ್ಯ ಬಿಜೆಪಿ, ಜೆಡಿಎಸ್ ನಡುವೆ ಟಿಕೆಟ್ ಬಗ್ಗೆ ಚರ್ಚೆ ಆಗಿಲ್ಲ, ನಮಗೆ 28 ಕ್ಷೇತ್ರಗಳ ಮೇಲೂ ಗಮನ ಇದೆ. ಹಾಗಾಗಿ ಎನ್ಡಿಎ ಕೂಟಕ್ಕೆ ಈ ಬಾರಿ 28 ಕ್ಷೇತ್ರಕ್ಕೆ 28 ಕ್ಷೇತ್ರದಲ್ಲೂ ಗೆಲುವು ನಿಶ್ಚಿತ ಎಂದಿದ್ದಾರಷ್ಟೇ ಅಲ್ಲ, ಮಂಡ್ಯದಿಂದ ಮತ್ತೆ ಸ್ಪರ್ಧೆ ಮಾಡುವ ಕುತೂಹಲವನ್ನು ಹಾಗೆಯೇ ಉಳಿಸಿದ್ದಾರೆ. ನಾನ್ಯಾವತ್ತೂ ರಾಜಕೀಯದಿಂದ ದೂರ ಹೋಗುತ್ತೇನೆ ಎಂದು ಹೇಳಿರಲಿಲ್ಲ ಎಂದಿರುವ ನಿಖಿಲ್, ಸಸ್ಪೆನ್ಸ್ ಹಾಗೆಯೇ ಇಟ್ಟಿದ್ದಾರೆ.
ಇತ್ತೀಚೆಗೆ ನಿಖಿಲ್ ರಾಜಕೀಯಕ್ಕೆ ಬರಲ್ಲ, ಸ್ಪರ್ಧೆ ಮಾಡುವುದು ಬೇಡ ಎಂದಿದ್ದೇನೆ ಎಂಬ ಕುಮಾರಸ್ವಾಮಿ ಹೇಳಿಕೆ ಭರ್ಜರಿ ಸುದ್ದಿಯಾಗಿತ್ತು.
ಇದೇ ವೇಳೆ ಮೈತ್ರಿಗೆ ದೊಡ್ಡಪ್ಪ ರೇವಣ್ಣನವರ ಬೆಂಬಲವೂ ಇದೆ. ಯಡಿಯೂರಪ್ಪ ಮನೆಗೆ ಅವರೂ ಬರಬೇಕಿತ್ತು. ಆದರೆ ಹೊಳೆನರಸೀಪುರದಲ್ಲಿ ಮೊದಲೇ ನಿಗಧಿಯಾಗಿದ್ದ ಕಾರ್ಯಕ್ರಮ ಇದ್ದ ಕಾರಣ ಬರಲಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದರು. ಬಳಿಕ ಜೆ. ಪಿ. ನಡ್ಡಾ ಜೆಡಿಎಸ್ ಪಕ್ಷವನ್ನು ಎನ್ಡಿಎ ಮೈತ್ರಿಕೂಟಕ್ಕೆ ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಸಹ ಉಪಸ್ಥಿತರಿದ್ದರು.
ಭಾನುವಾರ ನಿಖಿಲ್ ಕುಮಾರಸ್ವಾಮಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಜೊತೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಯಡಿಯೂರಪ್ಪ ಭೇಟಿ ಮಾಡಿದರು. ಶಾಲು ಹೊದಿಸಿ ಅವರನ್ನು ಸನ್ಮಾನಿಸಿದರು, ಕೃಷ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು.
ಪಕ್ಷದ ಮಾಹಿತಿಗಳ ಪ್ರಕಾರ ಜೆಡಿಎಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ 5 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಹಾಸನ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ. ಆದರೆ ಬಿಜೆಪಿಯ ಕೇಂದ್ರ ನಾಯಕರು ಈ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಸೀಟು ಹಂಚಿಕೆ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಿದೆ. 5 ಕ್ಷೇತ್ರಗಳಲ್ಲಿ ಹಾಸನದಲ್ಲಿ ಜೆಡಿಎಸ್, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 2019ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.



