ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಜಾಮೀನು ದೊರೆತಿದೆ. ಆರೋಪಿ ನಂ.16 ಕೇಶವಮೂರ್ತಿಗೆ ಜಾಮೀನು ಲಭ್ಯವಾಗಿದೆ. ಕೊಲೆಗೂ, ಕೇಶವಮೂರ್ತಿಗೂ ಸಂಬಂಧ ಇಲ್ಲ ಎಂದು ವಾದಿಸಿದ ವಕೀಲರು, ಕೇಶವಮೂರ್ತಿಗೆ ಜಾಮೀನು ಕೊಡಿಸಿದ್ದಾರೆ. ಇನ್ನು ಆರೋಪಿ ನಂ.15 ಕಾರ್ತಿಕ್ ಹಾಗೂ ಆರೋಪಿ ನಂ.17 ನಿಖಿಲ್ ಎಂಬುವವರಿಗೂ ಜಾಮೀನು ಸಿಕ್ಕಿದೆ.
ರೇಣುಕಾಸ್ವಾಮಿ ಕೊಲೆ ವೇಳೆ ಟೀ ಕುಡಿಯೋಕೆ ಅಂತ ಹೋಗಿದ್ದ ಕೇಶವಮೂರ್ತಿ, ಆರೋಪಿ ನಂಬರ್ 16 ಆಗಿದ್ದ. ಕೇಶವಮೂರ್ತಿಗೆ ಅಡ್ವಾನ್ಸ್ ಆಗಿ 5 ಲಕ್ಷ ರೂಪಾಯಿ ಸಹ ಕೊಡಲಾಗಿತ್ತು. 5 ಲಕ್ಷದ ಆಸೆಗೆ ಜೈಲಿಗೆ ಹೋಗಲು ಸಿದ್ಧವಾಗಿದ್ದ ಕೇಶವಮೂರ್ತಿಯೇ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಮೊದಲು ಬಾಯಿಬಿಟ್ಟಿದ್ದ ವ್ಯಕ್ತಿ ಎಂದು ಬಹಿರಂಗವಾಗಿತ್ತು. ರೇಣುಕಾಸ್ವಾಮಿ ಕೊಲೆ ಆದ ಬಳಿಕ ಸರೆಂಡರ್ ಆಗಲು ಕಾರ್ತಿಕ್ ಮತ್ತು ನಿಖಿಲ್ ಮೊದಲು ಒಪ್ಪಿದ್ದರು. ಆದ್ರೆ ರಾಘವೇಂದ್ರ ಮೊದಲು ಒಪ್ಪಿಗೆ ಕೊಟ್ಟು ಆಮೇಲೆ ಸರೆಂಡರ್ ಆಗಲ್ಲ ಎಂದಿದ್ದ. ಈ ಸಮಯದಲ್ಲಿ ಯಾರಾದ್ರೂ ಸಿಗ್ತಾರಾ ಅಂತ ಹುಡುಕಿಕೊಂಡು ಹೋಗಿದ್ದ ನಿಖಿಲ್ ಮತ್ತು ಕಾರ್ತಿಕ್ಗೆ ಉತ್ತರಹಳ್ಳಿ ಬಳಿ ಟೀ ಕುಡಿಯುತ್ತಾ ಕುಳಿತಿದ್ದ ಕೇಶವಮೂರ್ತಿ ಕಣ್ಣಿಗೆ ಬಿದ್ದಿದ್ದ. . ಕೂಡಲೇ ಅವನ ಜೊತೆ ಮಾತನಾಡಿದ ಕಾರ್ತಿಕ್, ಒಂದು ಕೊಲೆಯಾಗಿದೆ. ಸರೆಂಡರ್ ಆದ್ರೆ ಹಣ ಕೊಡ್ತಾರೆ ಬಳಿಕ ಬೇಲ್ ಕೊಡಿಸಿ ಆಚೆಗೂ ಕರೆದುಕೊಂಡು ಬರುತ್ತಾರೆ ಎಂದು ಪುಸಲಾಯಿಸಿದ್ದ. ಹಣ ಸಿಗುತ್ತೆ ಅಂತ ಒಪ್ಪಿಕೊಂಡ ಕೇಶವಮೂರ್ತಿ ಶೆಡ್ಗೆ ಹೋಗಿದ್ದ. ಆತನಿಗೆ ಅಡ್ವಾನ್ಸ್ ಆಗಿ ನೀಡಿದ್ದ 5 ಲಕ್ಷ ರೂ. ಹಣವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಪ್ರಕರಣದಲ್ಲಿ ಕೊನೆಯ ಆರೋಪಿಗಳಾಗಿದ್ದ ಮೂವರಿಗೂ ಜಾಮೀನು ನೀಡಿರುವ ನ್ಯಾಯಾಲಯ, ಒಬ್ಬರ ಪರ್ಸನಲ್ ಶ್ಯೂರಿಟಿ ಪಡೆದು ಜಾಮೀನು ನೀಡಿದೆ.
ದರ್ಶನ್ ಜಾಮೀನು ಅರ್ಜಿ ಏನಾಯ್ತು..?
ಇತ್ತೀಚೆಗಷ್ಟೇ ದರ್ಶನ್ ಅವರು ಬೇಲ್ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿದೆ. ಸದ್ಯಕ್ಕೆ ದರ್ಶನ್ ಬಳ್ಳಾರಿ ಜೈಲಿನಲ್ಲಿತ್ತಿದ್ದಾರೆ. ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 25ಕ್ಕೆ ಮುಂದೂಡಿಕೆ ಆಗಿದೆ. ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಕಾಲಾವಕಾಶ ಕೋರಿದ್ದಾರೆ. ಅದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ.
ಇತ್ತೀಚೆಗಷ್ಟೇ ರೇಣುಕಾ ಸ್ವಾಮಿ ಕೊಲೆ ಕೇಸ್ನ ತನಿಖೆ ಅಂತ್ಯವಾಗಿದ್ದು, ಚಾರ್ಜ್ಶೀಟ್ ಕೂಡ ಸಲ್ಲಿಕೆ ಆಗಿದೆ. ರೇಣುಕಾ ಸ್ವಾಮಿಯ ಕೊಲೆ ನಡೆದಿದ್ದು ಹೇಗೆ, ಯಾರೆಲ್ಲ ಭಾಗಿಯಾಗಿದ್ದರು ಎಂಬಿತ್ಯಾದಿ ವಿವರಗಳು ಚಾರ್ಜ್ಶೀಟ್ನಲ್ಲಿ ಇವೆ. ಚಾರ್ಜ್ಶೀಟ್ ಸಲ್ಲಿಕೆ ಬಳಿಕ ದರ್ಶನ್ ಹಾಗೂ ಇತರ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ಮತ್ತೊಂದೆಡೆ ದರ್ಶನ್ ಪ್ರಕರಣದಲ್ಲಿ ಐಟಿ ಅಧಿಕಾರಿಗಳೂ ಎಂಟ್ರಿ ಆಗಿದ್ದಾರೆ. ಕೋರ್ಟ್ ಆದೇಶ ದೊರೆತ ಬಳಿಕ ಐಟಿ ಅಧಿಕಾರಿಗಳೂ ದರ್ಶನ್ ಅವರನ್ನು ವಿಚಾರಣೆ ನಡೆಸಲಿದ್ದಾರೆ.



