ರಾಜ್ಯವಷ್ಟೇ ಅಲ್ಲ.. ದೇಶದ ರಾಜಕೀಯದಲ್ಲಿ ಈಗ ಮಾಂಗಲ್ಯದ್ದೇ ಸದ್ದು. ಪ್ರಧಾನಿ ನರೇಂದ್ರ ಮೋದಿ ರಾಜಸ್ತಾನದಲ್ಲಿ ಮಾತನಾಡುತ್ತಾ ಆಸ್ತಿ ಮರುಹಂಚಿಕೆ ಎಂದರೆ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಆಸ್ತಿಯ ಮರುಹಂಚಿಕೆ ಎಂದರ್ಥ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ನುಸುಳುಕೋರರಿಗೆ ಹಂಚಿಕೆ ಮಾಡುವುದು ನಿಶ್ಚಿತ. ನಗರ ನಕ್ಸಲ್ ಮನಸ್ಥಿತಿಯನ್ನು ಹೊಂದಿರುವವರು ನಮ್ಮ ತಾಯಿ ಹಾಗೂ ಸಹೋದರಿಯರ ಮಂಗಲಸೂತ್ರವನ್ನೂ ಬಿಡುವುದಿಲ್ಲ. ಆ ಮಟ್ಟಕ ಇಳಿಯಲೂ ಅವರು ಹೇಸಿಗೆ ಪಡುವುದಿಲ್ಲ ಎಂದು ಟೀಕಿಸಿದ್ದರು.
ಮೋದಿ ಧರ್ಮಾಧಾರಿತ ಹೇಳಿಕೆ ನೀಡುತ್ತಿದ್ಧಾರ ಎಂದು ಪ್ರತಿಪಕ್ಷಗಳು ಮುಗಿಬಿದ್ದಿವೆ. ಚುನಾವಣಾ ಆಯೋಗಕ್ಕೆ ನೂರಾರು ದೂರು ನೀಡಲಾಗಿದೆ. ಇತ್ತ ಕೌಂಟರ್ ಅಟ್ಯಾಕ್ ಕೂಡಾ ನಡೆಯುತ್ತಿದೆ.
ಕಳೆದ 55 ವರ್ಷಗಳಲ್ಲಿ ಯಾರದ್ದಾದರೂ ಮಾಂಗಲ್ಯ ಅಥವಾ ಚಿನ್ನವನ್ನು ಕಾಂಗ್ರೆಸ್ ಕಿತ್ತುಕೊಂಡಿದೆಯೇ? ದೇಶವು ಯುದ್ಧದಲ್ಲಿ ಹೋರಾಡುತ್ತಿದ್ದಾಗ ನಮ್ಮ ಅಜ್ಜಿ ಇಂದಿರಾ ಗಾಂಧಿ ಅವರು ತಮ್ಮ ಮಂಗಳಸೂತ್ರ ಮತ್ತು ಆಭರಣಗಳನ್ನು ಮಾರಾಟ ಮಾಡಿ ತ್ಯಾಗ ಮಾಡಿದ್ದರು. ನನ್ನ ತಾಯಿಯ ಮಂಗಳಸೂತ್ರವನ್ನು ಈ ದೇಶಕ್ಕಾಗಿ ತ್ಯಾಗ ಮಾಡಲಾಗಿದೆ ಎಂದಿರುವ ಪ್ರಿಯಾಕಾ ವಾದ್ರಾ ಮೋದಿಗೆ ತಿರುಗೇಟು ಕೊಟ್ಟಿದ್ಧಾರೆ.
ನೋಟು ಅಮಾನ್ಯೀಕರಣ ಮಾಡಿದ ಸಂದರ್ಭದಲ್ಲಿ ಎಷ್ಟೋ ನನ್ನ ಸಹೋದರಿಯರು ತಮ್ಮ ಮಂಗಳಸೂತ್ರಗಳನ್ನು ಅಡಮಾನವಿಟ್ಟಿದ್ದರು. ಆಗ ಪ್ರಧಾನಿ ಮೋದಿ ಎಲ್ಲಿದ್ದರು? ಸಾಲದ ಸುಳಿಯಲ್ಲಿ ಸಿಲುಕಿರುವ ರೈತನ ಪತ್ನಿ ಮಂಗಳಸೂತ್ರವನ್ನು ಮಾರಬೇಕಾದಾಗ ಪ್ರಧಾನಿ ಎಲ್ಲಿದ್ದರು? ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಮಣಿಪುರದ ಮಹಿಳೆಯ ಬಗ್ಗೆ ಪ್ರಧಾನಿ ಏಕೆ ಏನನ್ನೂ ಹೇಳಲಿಲ್ಲ? ಇಂದು ಹಣದುಬ್ಬರದಿಂದ ಎಷ್ಟು ಜನರ ಮಂಗಳಸೂತ್ರಗಳನ್ನು ಅಡಮಾನವಿಟ್ಟಿದ್ದಾರೆ ಎಂದು ಮೋದಿಯನ್ನು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಮೋದಿಯವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯನವರ ಪುತ್ರ ಮಾಜಿ ಶಾಸಕ ಯತೀಂದ್ರ ಕೂಡಾ ಹೇಳಿಕೆ ನೀಡಿದ್ದು ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಹಿಳೆಯರು ಮಂಗಳ ಸೂತ್ರ ಮಾತ್ರವಲ್ಲ ಗಂಡ ಹಾಗೂ ಮಕ್ಕಳನ್ನು ಕಳೆದುಕೊಳ್ಳುತ್ತಾರೆ ಬಿಜೆಪಿ ಕೋಮು ಗಲಭೆ ಸೃಷ್ಟಿಸಿ ಮಕ್ಕಳನ್ನು ಸಾಯುವಂತೆ ಮಾಡುತ್ತಾರೆ. ಮಕ್ಕಳನ್ನ ಕೋಮು ಗಲಭೆಯಲ್ಲಿ ತೊಡಗಿಸಿ ನಿರುದ್ಯೋಗಿಗಳಾಗಿ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮತೀಯ ಭಾವನೆ ಕೆರಳಿಸುವ ರೀತಿ ಮಾತನಾಡಿದ್ದಾರೆ. ಯಾವುದೇ ಪ್ರಜಾಪ್ರಭುತ್ವದಲ್ಲೂ ಈ ರೀತಿ ಮಾತನಾಡೋದಿಲ್ಲ. ಆದ್ರೆ, ಪ್ರಧಾನಿ ಮೋದಿ ತುಚ್ಛವಾಗಿ ಮಾತನಾಡಿದ್ದಾರೆ. ಇಷ್ಟಾದ್ರೂ ಚುನಾವಣಾ ಆಯೋಗ ಯಾಕೆ ಕಣ್ಣುಮುಚ್ಚಿ ಕುಳಿತಿದ್ಯೋ ಗೊತ್ತಿಲ್ಲ ಎಂದಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರಂತೂ ಮೋದಿಯವರ ಪರ್ಸನಲ್ ವಿಷಯವನ್ನು ಎಳೆದು ತಂದಿದ್ದು ಸ್ವಂತ ಪತ್ನಿಯ ಬಗ್ಗೆ ಗೌರವ ಇಲ್ಲದ ವ್ಯಕ್ತಿ ಈಗ ಮಾಂಗಲ್ಯದ ಬಗ್ಗೆ ಮಾತನಾಡುತ್ತಿದ್ಧಾರೆ ಎಂದು ಕಿಡಿಕಾರಿದ್ಧಾರೆ. ಮಾತಿಗೊಮ್ಮೆ ಭಾರತಾಂಬೆ ಎಂದು ಹೇಳುವ ಬಿಜೆಪಿ ನಾಯಕರು ನರೇಂದ್ರ ಮೋದಿ ಅವರ ಮಾಂಗಲ್ಯ ಹೇಳಿಕೆಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.



