ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ.. ಹೀಗೆ ಕಾಂಗ್ರೆಸ್ಸಿನ ನಾಯಕರೆಲ್ಲ ಅಂಬಾನಿಯನ್ನು ಬಾಯಿಗೆ ಬಂದಂತೆ ಬೈದುಕೊಂಡು ಓಡಾಡ್ತಾರೆ. ಮೈಕು ಸಿಕ್ಕರೆ ಸಾಕು, ಅದಾನಿ, ಅಂಬಾನಿಯನ್ನು ಬೈತಾನೇ ಇರ್ತಾರೆ. ಅವರೆಲ್ಲ ಶ್ರೀಮಂತರಾಗಿದ್ದು ಮೋದಿಯಿಂದ ಎಂಬ ಅರ್ಥದಲ್ಲಿ ಮಾತನಾಡುವ ರಾಹುಲ್ ಗಾಂಧಿ, ಮೋದಿ ಪಿಎಂ ಆದ್ಮೇಲೆ ಅಂಬಾನಿ, ಅದಾನಿ ಅವರಷ್ಟೇ ಶ್ರೀಮಂತರಾದರು ಎಂದು ಆರೋಪಿಸ್ತಾನೆ ಇರ್ತಾರೆ. ಆದರೆ ಇದಕ್ಕೆಲ್ಲ ಮುಖೇಶ್ ಅಂಬಾನಿ ತಲೆ ಕೆಡಿಸಿಕೊಳ್ಳಲ್ಲ. ಚುನಾವಣೆಯಲ್ಲಿ ಬಿಜೆಪಿಗೆ ಕೊಟ್ಟಂತೆಯೇ, ಕಾಂಗ್ರೆಸ್ಸಿಗೂ ದೇಣಿಗೆ ಕೊಡುವ ಅಂಬಾನಿ, ಈಗ ಮಗಳ ಮದುವೆಗೆ ಲಗ್ನಪತ್ರಿಕೆಯನ್ನೂ ಕೊಟ್ಟಿದ್ದಾರೆ.
ತಮ್ಮ ಮನೆಯ ಕೊನೆಯ ಮದುವೆ ಹಾಗೂ ತಮ್ಮ ಕೊನೆ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಆಮಂತ್ರಣ ಪತ್ರವನ್ನು ನೀಡಿ ಸೋನಿಯಾ ಗಾಂಧಿಯವರನ್ನು ವಿವಾಹಕ್ಕೆ ಆಮಂತ್ರಿಸಿದ್ದಾರೆ. ದೆಹಲಿಯ 10ನೇ ಜನಪಥ್ ರಸ್ತೆಯಲ್ಲಿರುವ ಮನೆಗೆ ಉದ್ಯಮಿ ಮುಖೇಶ್ ಅಂಬಾನಿ ಭೇಟಿ ನೀಡಿದ್ದು, ತಮ್ಮ ಮಗನ ಮದ್ವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಮುಖೇಶ್ ಅಂಬಾನಿ ಅವರು ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿ ವಾಪಸ್ ಹೋಗುತ್ತಿರುವ ವೀಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಪೋಸ್ಟ್ ಮಾಡಿದೆ. ಇತ್ತ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮಗಳು ಸಾಕಷ್ಟು ಅದ್ದೂರಿ ಆಗಿ ನಡೆಯುತ್ತಿದೆ. ಇವರ ಮದುವೆಯ ಆಹ್ವಾನ ಪತ್ರಿಕೆಯ ವೀಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು. ಮುಂಬೈನ ಜಿಯೋ ವರ್ಲ್ಡ್ ಕನ್‌ವೆನ್ಶನ್ ಸೆಂಟರ್‌ನಲ್ಲಿ ಜುಲೈ 12ರಂದು ಈ ಜೋಡಿ ಅದ್ದೂರಿ ವಿವಾಹವಾಗಲಿದ್ದಾರೆ.
ಇತ್ತ ರಾಹುಲ್ ಗಾಂಧಿ ಅವರು ಅಂಬಾನಿ, ಅದಾನಿ ವಿರುದ್ಧ ನಿರಂತರ ವಾಗ್ದಾಳಿ ಮಾಡಿಕೊಂಡು ಬಂದಿದ್ದಾರೆ. ಹೀಗಿದ್ದರೂ ಇತ್ತೀಚೆಗೆ ತೆಲಂಗಾಣದಲ್ಲೂ ಅಲ್ಲಿನ ಕಾಂಗ್ರೆಸ್ ಸರ್ಕಾರ, ಹಳೆ ಹೈದ್ರಾಬಾದ್ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ವಿತರಣೆ ಮತ್ತು ವಿದ್ಯುತ್ ಬಿಲ್ ವಸೂಲಿ ಹೊಣೆಯನ್ನು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹಕ್ಕೆ ನೀಡಿದೆ.
ಅಂಬಾನಿ ಮತ್ತು ಅದಾನಿ ಕಂಪೆನಿಗಳ ಮೇಲೆ ಅಟ್ಯಾಕ್ ಮಾಡುವ ಕಾಂಗ್ರೆಸ್, ತನ್ನ ಅಧಿಕಾರದ ರಾಜ್ಯಗಳಲ್ಲಿಯೂ ಕೂಡಾ ಅಂಬಾನಿ, ಅದಾನಿ ಕಂಪೆನಿಗಳಿಗೇ ಟೆಂಡರ್ ಕೊಡುತ್ತೆ. ಅದೇ ಕಂಪೆನಿಗಳು ಹೂಡಿಕೆ ಮಾಡುತ್ತವೆ. ಅಂತಹ ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿಯವರೂ ಇದ್ದು, ಅಲ್ಲಿ ಹೊಗಳಿ ಬರುತ್ತಾರೆ. ಆದರೆ, ರಾಜಕೀಯ ವೇದಿಕೆ ಸಿಕ್ಕ ಕೂಡಲೇ ಅದೇ ಅಂಬಾನಿ, ಅದಾನಿಯನ್ನು ತೆಗಳುವುದಕ್ಕೆ ಶುರು ಮಾಡ್ತಾರೆ.
ಏನೇ ಇರಲಿ, ಮುಖೇಶ್ ಅಂಬಾನಿ ದೇಶದ ನಂ.1 ಶ್ರೀಮಂತ. ಉದ್ಯಮಿ. ಸಹಜವಾಗಿಯೇ ಎಲ್ಲ ರಾಜಕೀಯ ಪಕ್ಷಗಳಲ್ಲೂ ಮಿತ್ರರಿರುತ್ತಾರೆ. ಪೊಲಿಟಿಕಲ್ ಗೇಮ್ ಏನೇ ಇರಲಿ, ಮದುವೆಗಂತೂ ಹೋಗ್ತಾರೆ.



