ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಬಾರು ಮಾಡಿದ್ದಕ್ಕ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ದರ್ಶನ್ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟ ಕಾರಣಕ್ಕೆ ಇಲ್ಲಿನ ಪೊಲೀಸರಿಗೂ ಒಂದು ಶಿಕ್ಷೆ ಎದುರಾಗಿದೆ. ಅಷ್ಟೇ ಅಲ್ಲ, ದರ್ಶನ್ʻಗೂ ಕೂಡಾ ನಿಜವಾದ ಶಿಕ್ಷೆಯ ಅನುಭವ ಆಗುತ್ತಿದೆ. ಏಕೆಂದರೆ 10 ಅಡಿ ಉದ್ದ, 10 ಅಡಿ ಅಗಲದ ಕೋಣೆಯಲ್ಲಿ ದಿನವಿಡೀ ಇರಬೇಕು. ಅಲ್ಲಿಯೇ ಓಡಾಡಬೇಕು. ಅಲ್ಲಿಯೇ ಮಲಗಬೇಕು. ದರ್ಶನ್ ಮತ್ತು ಜೈಲಿನ ಸಿಬ್ಬಂದಿಗೂ ಈಗ ನರಕ ಶುರುವಾಗಿದೆ.
ಜೈಲು ಸಿಬ್ಬಂದಿಗಳ ಕಥೆ : ದರ್ಶನ್ ಸೆಕ್ಯೂರಿಟಿ ಕಾರಣಕ್ಕೆ ರಾತ್ರಿ ಹಗಲು ಪೊಲೀಸರು ನಿದ್ದೆಗೆಡಬೇಕಿದೆ. ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಫೋನ್ನಲ್ಲಿ ಮಾತಾಡಿದ್ರು. ವಿಡಿಯೋ ಕಾಲ್‌ನಲ್ಲಿ ಮುಖ ತೋರಿಸಿದ್ದರು. ಜೈಲಿನ ನಿಯಮಗಳ ಉಲ್ಲಂಘನೆ ಮಾಡಿದ್ದರು. ಈ ಕಾರಣಕ್ಕಾಗಿಯೇ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರೋ ದರ್ಶನ್ ಅವರಿಂದಾಗಿ.. ಅವರಿಗಷ್ಟೇ ಅಲ್ಲ, ಪೊಲೀಸರಿಗೂ ಕಠಿಣ ಕ್ರಮ ಜಾರಿಯಾಗಿದೆ. ದರ್ಶನ್ ಬಳ್ಳಾರಿ ಜೈಲಿಗೆ ಬಂದಿರೋ ಕಾರಣಕ್ಕೆಇದೀಗ ಅಲ್ಲಿನ ಸಿಬ್ಬಂದಿಯೂ ಫೋನ್ ಬಳಸುವಂತಿಲ್ಲ. ಸಿಬ್ಬಂದಿಗಳಿಗೂ ಸೆಲ್ ನಲ್ಲಿ ಮೊಬೈಲ್ ಬಳಕೆ ನಿಷೇಧಿಸಿದೆ. ವೈರ್ ಲೆಸ್ ಬಳಕೆಗೆ ಮಾತ್ರ ಅವಕಾಶ ನೀಡಿದೆ. ಮೊಬೈಲೂ ಬೇಡ.. ಏನೂ ಬೇಡ ಅಂದ್ಕೊಡ ಜೈಲಿನ ಸಿಬ್ಬಂದಿಗಳಲ್ಲಿ ಬಹುತೇಕ ಜನ ಜೈಲಿಗೆ ಬರುವಾಗ ಮೊಬೈಲ್ ತರುವುದನ್ನೇ ಬಿಟ್ಟಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿರುತ್ತಾರೆ. ದರ್ಶನ್ಗೆ 24 ಗಂಟೆಯೂ ಸಿಸಿಟಿವಿ ಹಾಗೂ ಬಾಡಿವೋರ್ನ್ ಕ್ಯಾಮರಾ ಕಣ್ಗಾವಲು ಇರಲಿದೆ. ಅದು ಕಡ್ಡಾಯ ಕೂಡಾ. ಹೀಗಾಗಿ ಪೊಲೀಸರೂ ಅಲರ್ಟ್ ಆಗಿರಬೇಕು. ದರ್ಶನ್ ಕೂಡಾ ಅಲರ್ಟ್ ಆಗಿರಬೇಕು. ದರ್ಶನ್ರ ಸಣ್ಣ ಪುಟ್ಟ ಚಲನವಲನಗಳನ್ನೂ ಸಹ ಚಿತ್ರೀಕರಿಸಲಾಗುತ್ತದೆ. ಭದ್ರತೆಯ ಕಾರಣಕ್ಕೆ ದರ್ಶನ್ ಬೆಂಕಿಯಿಂದ ಬಾಣಲೆಗೆ ಬಿದ್ದಷ್ಟೇ ಟೈಟ್ ವಾತಾವರಣದಲ್ಲಿ ಇರಬೇಕಾಗುತ್ತದೆ.ʼ
10/10 ಜೈಲು : ದರ್ಶನ್ ಈಗ ಇರಬೇಕಾಗಿರೋದು 10/10 ಅಡಿ ಅಗಲದ ಪುಟ್ಟ ಸೆಲ್ʻನಲ್ಲಿ. ಸದ್ಯ ದರ್ಶನ್ ವಿಚಾರಣಾಧೀನ ಕೈದಿ ನಂಬರ್ 511. ಸೆಲ್ ನಂಬರ್ 15. ದರ್ಶನ್ ಜೊತೆ ಮತ್ತೊಬ್ಬರು ಇರೋದಕ್ಕೆ ಅವಕಾಶ ಇಲ್ಲ. ಸೆಲ್ ಮುಂಭಾಗ 20 ಅಡಿ ಅಗಲ 60 ಅಡಿ ಉದ್ದದ ಜಾಗದಲ್ಲಿ ವಾಕಿಂಗ್ ಮಾಡಬಹುದು. ವಾಕಿಂಗ್ ಕೂಡಾ ಬೆಳಗ್ಗೆ ಮತ್ತು ಸಂಜೆ 15 ನಿಮಿಷ ಅಷ್ಟೆ.
ಗ್ರಾಮುಗಳ ಲೆಕ್ಕದಲ್ಲಿ ಊಟ :
ಇನ್ನು ಊಟವೂ ಅಷ್ಟೆ, ಒಮ್ಮೆ ಬೇಡ ಅಂದ್ರೆ ಮುಗೀತು, ಮತ್ತೆ ಜೈಲಿನ ಊಟ/ತಿಂಡಿ ಸಮಯ ಬರುವವರೆಗೆ ಏನೂ ಇಲ್ಲ. ಜೈಲು ನಿಯಮದ ಪ್ರಕಾರ 11-12 ಗಂಟೆಗೆ ಮಧ್ಯಾಹ್ನದ ಊಟವಿದೆ. ಮೊದಲ ದಿನ ಮಧ್ಯಾಹ್ನದ ಊಟ ಬೇಡ ಎಂದ ಕಾರಣಕ್ಕೆ ಸಂಜೆ ೬ ಗಂಟೆಯವರೆಗೂ ಊಟ ಕೊಟ್ಟಿಲ್ಲ. ದರ್ಶನ್ ಅವರಿಗೆ ಜೈಲಿನ ನಿಯಮದಂತೆ 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆ ನೀಡಲಾಗುತ್ತದೆ. ಇಷ್ಟು ದಿನ ಮನೆಯೂಟ ಬೇಕು ಎನ್ನುತ್ತಿದ್ದ ದರ್ಶನ್ ಈಗ ಜೈಲಿನ ಊಟವನ್ನೇ ಗ್ರಾಂಗಳ ಲೆಕ್ಕದಲ್ಲಿ ಮಾಡಬೇಕು.
ಕಡಗವನ್ನು ತೆಗೆಸಿದ್ದು ಹೇಗೆ..?
ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್ ಪೂಮಾ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಕೂಲಿಂಗ್ ಗ್ಲಾಸ್ ಹಾಕೊಂಡು ಬಂದಿದ್ದರು. ಪರಪ್ಪನ ಅಗ್ರಹಾರದಲ್ಲಿ ಸಿಕ್ಕಿದ್ದ ರಾಜಾತಿಥ್ಯ, ಬಳ್ಳಾರಿಯಲ್ಲಿಯೂ ಕಂಟಿನ್ಯೂ ಆಗುತ್ತಾ ಎಂಬ ಅನುಮಾನ ಮಾಡುವಂತೆಯೇ ಇತ್ತು. ಆದರೆ, ನಂತರದ ಬೆಳವಣಿಗೆಗಳು ಆ ರೀತಿಯ ಅನುಮಾನಕ್ಕೆ ಆಸ್ಪದ ಕೊಟ್ಟಿಲ್ಲ. ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟಾಗ ದರ್ಶನ್ ಕೈಯಲ್ಲಿದ್ದ ಕಡಗವನ್ನೂ ಪೊಲೀಸರು ತೆಗೆಸಿದ್ದಾರೆ. ಒಪ್ಪದ ದರ್ಶನ್ ಅವರನ್ನು ಪೊಲೀಸರು ಬಿಚ್ಚಿ ಕೊಡಿ, ಇಲ್ಲದಿದ್ದರೆ ಕತ್ತರಿಸಿ ತೆಗೆದಿಟ್ಟುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಕೊನೆಗೆ ದರ್ಶನ್ ಸುಮಾರು ೧೦ ನಿಮಿಷ ಸೋಪಿನ ನೀರಿನಲ್ಲಿ ಕೈ ಇಟ್ಟುಕೊಂಡು, ನಂತರ ತೆಗೆದುಕೊಟ್ಟಿದ್ದಾರೆ. ಯಾವ ವಸ್ತುಗಳನ್ನೂ ದರ್ಶನ್ ಜೊತೆ ಕೊಟ್ಟಿಲ್ಲ. ಆದರೆ ದರ್ಶನ್ ವಿಚಾರಣಾಧೀನ ಖೈದಿಯಾಗಿರೋದ್ರಿಂದ ಸಾಮಾನ್ಯ ಬಟ್ಟೆಗಳನ್ನು ಧರಿಸುವುದಕ್ಕೆ ಅವಕಾಶ ಇದೆ.
ಒಟ್ಟಿನಲ್ಲಿ ನಟ ದರ್ಶನ್ʻರ ನಿಜವಾದ ಜೈಲು ವಾಸ ಈಗ ಆರಂಭವಾದಂತೆ ಕಾಣುತ್ತಿದೆ. ಆದರೆ, ಪರಪ್ಪನ ಅಗ್ರಹಾರ ಜೈಲನ್ನೂ ಹಾಗೆಯೇ ಭಾವಿಸಲಾಗಿತ್ತು. ಬಳ್ಳಾರಿ ಜೈಲು ಕೂಡಾ ಹಾಗೆಯೇ ನಿರ್ಮಾಣವಾದರೆ, ಆಶ್ಚರ್ಯ ಪಡಬೇಕಿಲ್ಲ.
ಅಂದಹಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ರಾಜಕೀಯ ಮತ್ತು ಚಿತ್ರರಂಗದವರೆಲ್ಲ ಹೋಗಿ ಬಂದು ಭೇಟಿ ಮಾಡುತ್ತಿದ್ದರು. ಅದೊಂಥರಾ ನೆಂಟರ ಮನೆಯಂತೆಯೇ ಇತ್ತು. ಆದರೆ, ಬಳ್ಳಾರಿ ಜೈಲಿನಲ್ಲಿ ಪತ್ನಿ, ಮಕ್ಕಳು, ತಾಯಿ, ತಮ್ಮ ಸೇರಿದಂತೆ ರಕ್ತ ಸಂಬಂಧಿಗಳು ಹಾಗೂ ವಕೀಲರಿಗಷ್ಟೇ ಭೇಟಿ ಮಾಡಲು ಅವಕಾಶ ಇದೆ.
ಇನ್ನು ದರ್ಶನ್ ಅವರನ್ನು ಕೈಗೆ ಕೋಳ ಹಾಕಿ ಕರೆತಂದಿಲ್ಲ ಎಂದು ಎಸ್.ಪಿ.ಶೋಭಾರಾಣಿ ಸ್ಪಷ್ಟನೆ ಕೊಟ್ಟಿದ್ದಾರೆ. ದರ್ಶನ್ ಅವರ ಕೈ ನೋಯುತ್ತಿದೆ ಎಂದ ಕಾರಣಕ್ಕೆ ಕೈಗೆ ಬಟ್ಟೆ ಸುತ್ತಿಕೊಡಲು ಅವಕಾಶ ನೀಡಲಾಗಿತ್ತಷ್ಟೇ, ಕೈಗೆ ಕೋಳ ಹಾಕಿಲ್ಲ ಎಂದು ಹೇಳಿದ್ದಾರೆ. ಇದು ಜೈಲು. ನಾವೂ ಕೂಡಾ ಬಳ್ಳಾರಿಗೆ ಹೊರಗಿನಿಂದ ಬಂದವರೇ, ಅಡ್ಜಸ್ಟ್ ಆಗಿದ್ದೇವೆ, ಅಲ್ವಾ.. ಹಾಗೆಯೇ ದರ್ಶನ್ ಅವರೂ ಜೈಲಿಗೆ ಬಂದ ಮೇಲೆ ಅಡ್ಜಸ್ಟ್ ಆಗಲೇಬೇಕು ಎಂದಿದ್ದಾರೆ.



