ಶ್ರೀ ದಿಗಂಬರ ರಾಜ ಭಾರತಿ. ಇವರಿರೋದು ಬಳ್ಳಾರಿಯ ಸಂಡೂರು ತಾಲೂಕಿನ ಜೋಗಿ ಎಂಬ ಹಳ್ಳಿಯ ಬಳಿ ಇರುವ ದೇವರಕೊಳ್ಳದಲ್ಲಿ. ನಾಗಾಸಾಧುಗಳು. ಇವರು ಜನರ ನಡುವೆಯೇ ಇರ್ತಾರೆ. ಆದರೆ ಅಷ್ಟೇ ಸಹಜವಾಗಿ ಜನರಿಂದ ದೂರ ಹೊರಟು ಹೋಗ್ತಾರೆ. ವರ್ಷದಲ್ಲಿ ಇವರ ವಾಸ ಒಂದು ಹಂತಕ್ಕೆ ಉತ್ತಮ ಎನ್ನಬಹುದಾದ ಮನೆ ಅಥವಾ ಕಚೇರಿಯಲ್ಲಾದರೆ, ಇನ್ನಾರು ತಿಂಗಳು ವಾಸ ಮಾಡುವುದು ಪೊಟರೆಗಳಲ್ಲಿ. ಗುಹೆಗಳಲ್ಲಿ. 6 ತಿಂಗಳು ಮಾತನಾಡಿದರೆ, 6 ತಿಂಗಳು ಮೌನವ್ರತ ಮಾಡುವ ನಾಗಾಸಾಧು ದಿಗಂಬರ ರಾಜ ಭಾರತಿ ಸ್ವಾಮೀಜಿಗಳು ಯಾರಿಗೆ ಆಶೀರ್ವಾದ ಮಾಡುತ್ತಾರೋ.. ಅವರು ಗೆಲ್ಲುತ್ತಾರೆ ಎನ್ನುವುದು ನಂಬಿಕೆ. ಇಂತಹ ನಾಗಾಸಾಧುಗಳನ್ನು ಸಂಸದ ಅನಂತಕುಮಾರ್ ಹೆಗಡೆ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈಗ ಸಾಧುಗಳು ಪೊಟರೆ ವಾಸ ಮತ್ತು ಮೌನವ್ರತದಿಂದ ಹೊರಬಂದಿದ್ದಾರೆ. ಹೀಗಾಗಿ ಜನರಿಗೆ ದರ್ಶನ ಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅನಂತಕುಮಾರ ಹೆಗಡೆ ಅವರು ಸಹ ಶ್ರೀಗಳ ದರ್ಶನ ಪಡೆದಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿತ ರಾಜಕೀಯ ನಾಯಕರು ದಿಗಂಬರ ಭಾರತಿ ಸ್ವಾಮಿಗಳ ದರ್ಶನ ಪಡೆದು ರಾಜಕೀಯ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸಾಮಾನ್ಯ. ಕೆಲ ದಿನಗಳ ಹಿಂದೆ ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಹ ನಾಗಸಾಧು ದರ್ಶನ ಪಡೆದಿದ್ದರು.
2019ರ ಏ. 30ರಂದು ಶಿರಸಿಯ ಕೆಎಚ್ ಬಿ ಕಾಲೋನಿಯಲ್ಲಿರುವ ಅನಂತ ಕುಮಾರ್ ಹೆಗಡೆಯವರ ಮನೆಗೆ ನಾಗಾ ಸಾಧುಗಳು ಒಮ್ಮೆ ಭೇಟಿಯಾಗಿದ್ದರು. ಉತ್ತರ ಪ್ರದೇಶದಿಂದ ಬಂದಿದ್ದ ಆ ಸಾಧುಗಳಿಗೆ ಅನಂತ ಕುಮಾರ್ ಅವರು ಪಾದಪೂಜೆ ನೆರವೇರಿಸಿದ್ದರು. ನಾಗಾಸಾಧು ಮಹಾಂತ ರಾಮಗಿರಿ ಸ್ವಾಮೀಜಿ ಮುಂದಾಳತ್ವದಲ್ಲಿ ಐವರು ನಾಗಾ ಸಾಧುಗಳು ಬಂದಿದ್ದರು. ಅಂದು ತಮ್ಮನ್ನು ಭವ್ಯವಾಗಿ ಸ್ವಾಗತಿಸಿ, ಪಾದಪೂಜೆ ನೆರವೇರಿಸಿದ್ದ ಅನಂತ ಕುಮಾರ್ ಹೆಗಡೆ ಹಾಗೂ ಅವರ ಪತ್ನಿ ಶ್ರೀರೂಪಾ ದಂಪತಿಯನ್ನು ಆಶೀರ್ವದಿಸಿದ್ದ ನಾಗಾಸಾಧುಗಳು, ಅನಂತ ಕುಮಾರ್ ಅವರ ರಾಜಕೀಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿದೆ ಎಂದು ಹಾರೈಸಿದ್ದರು.
ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಅನಂತ ಕುಮಾರ್ ಹೆಗಡೆ ದಾಖಲೆಯ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರೂ.. ಸಚಿವರಾದರೂ.. ಆನಂತರ ಸೈಲೆಂಟ್ ಆಗಿಬಿಟ್ಟರು. ಒಂದು ಕಾಲದ ಫೈರ್ ಬ್ರಾಂಡ್ ಅನಂತ ಕುಮಾರ್ ಹೆಗಡೆ, ತಮ್ಮ ಕ್ಷೇತ್ರಕ್ಕೆ ಮೋದಿ ಬಂದಾಗಲೂ ಕಾಣಿಸಿಕೊಳ್ಳಲಿಲ್ಲ. ರಾಜಕೀಯ ನಿವೃತ್ತಿಯ ಮಾತನಾಡುತ್ತಿದ್ದರು. ಈಗೇನೋ ಇದ್ದಕ್ಕಿದ್ದಂತೆ ಆಕ್ಟಿವ್ ಆಗಿರುವ ಅನಂತ ಕುಮಾರ್ ಹೆಗಡೆ, ಟಿಕೆಟ್ ಪಡೆದುಕೊಂಡು ಮತ್ತೆ ಸ್ಪರ್ಧೆ ಮಾಡುವ ಉದ್ದೇಶದಿಂದಲೇ ನಾಗಾಸಾಧುಗಳ ಭೇಟಿ ಮಾಡುತ್ತ, ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.



