ಸ್ಟಾರ್ ನಟರ ಚಿತ್ರಗಳು ಬರುತ್ತಿಲ್ಲ. ಹೀಗಾಗಿ ಚಿತ್ರಮಂದಿರಗಳು ಆಕ್ಟಿವ್ ಆಗಿಲ್ಲ. ಚಿತ್ರಮಂದಿರಗಳು ಬಾಗಿಲು ಮುಚ್ಚುವ ಪರಿಸ್ಥಿತಿ ತಲುಪಿವೆ ಎನ್ನುವ ಆರೋಪಗಳಿಗೆ ಒಬ್ಬೊಬ್ಬರೇ ಸ್ಟಾರ್ ನಟರು ಮಾತನಾಡುತ್ತಿದ್ಧಾರೆ. ಅಲ್ಲದೆ ಥಿಯೇಟರಿಗೆ ಒಂದಿಡೀ ಕುಟುಂಬ ಹೋಗಿ ಸಿನಿಮಾ ನೋಡುವ ಹಣದಲ್ಲಿ ಪುಟ್ಟದೊಂದು ಕೌಟುಂಬಿಕ ಪ್ರವಾಸವನ್ನೇ ಮಾಡಿ ಬರಬಹುದು ಎಂಬ ಅಭಿಪ್ರಾಯ ಪ್ರೇಕ್ಷಕರದ್ದು. ಥಿಯೇಟರ್, ಮಲ್ಟಿಪ್ಲೆಕ್ಸ್ ಟಿಕೆಟ್ ದರ ದುಬಾರಿ, ಕುಡಿಯುವ ನೀರು, ತಿನ್ನುವ ಆಹಾರ, ಕೂಲ್ ಡ್ರಿಂಕ್ಸ್, ಬಿಸ್ಕೆಟ್, ಪಾಪ್ ಕಾರ್ನ್.. ಪ್ರತಿಯೊಂದರಲ್ಲೂ ಸಿನಿಮಾ ನೋಡಲು ಬರುವವರನ್ನು ದರೋಡೆ ಮಾಡಿ.. ಚಿತ್ರಮಂದಿರಕ್ಕೆ ಜನ ಬರ್ತಿಲ್ಲ ಅಂದ್ರೆ ಹೇಗೆ ಅನ್ನೋ ವಾದವೂ ಇದೆ. ಈ ವಾದ ಹೆಚ್ಚಾಗಿ ಒಪ್ಪುವಂಥಹದ್ದು. ಆದರೆ.. ಸ್ಟಾರ್ ನಟರಾದ ದುನಿಯಾ ವಿಜಯ ಹಾಗೂ ಡಾಲಿ ಧನಂಜಯ ಅವರ ಮಾತುಗಳೇ ಬೇರೆ.
ಡಾಲಿ ಧನಂಜಯ ಹೀರೋ ಆಗಿ ಬಂದು, ಪೋಷಕ ನಟರಾಗಿ ಹಿಂಬಡ್ತಿ ಪಡೆದು, ಮತ್ತೆ ಖಳನಟರಾಗಿ.. ಈಗ ಮತ್ತೊಮ್ಮೆ ಹೀರೋ ಆಗಿರುವವರು. ನಿರ್ಮಾಪಕರೂ ಹೌದು. ಸಾಹಿತಿಯೂ ಹೌದು. ಹೀಗಾಗಿ.. ಡಾಲಿ ಅವರಿಗೆ ಚಿತ್ರರಂಗದ ಅರಿವು ಚೆನ್ನಾಗಿಯೇ ಇದೆ.
ಡಾಲಿ ಧನಂಜಯ ಅವರ ಪ್ರಕಾರ :
ಇಂತಿಂತಹ ನಟರು ಇಷ್ಟಿಷ್ಟು ಸಿನಿಮಾ ಮಾಡಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಒತ್ತಾಯ ಮಾಡುವುದಕ್ಕೆ ಆಗಲ್ಲ. ಪ್ರತಿಯೊಬ್ಬರಿಗೂ ಅವರವರದ್ದೇ ಆದ ಆಯ್ಕೆಗಳು ಇರುತ್ತವೆ. ಪ್ರತಿಯೊಬ್ಬರು ಕೂಡಾ ತಮ್ಮ ತಮ್ಮ ಕೆರಿಯರ್, ಭವಿಷ್ಯದ ಪ್ಲಾನ್ ಮಾಡುತ್ತಲೇ ಇರುತ್ತಾರೆ. ನನ್ನನ್ನೇ ತೆಗೆದುಕೊಂಡರೆ, ವರ್ಷಕ್ಕೆ ಎರಡು ಸಿನಿಮಾಗಳಲ್ಲಿ ನಟಿಸುವ ಪ್ಲಾನ್ ಇದೆ. ಜೊತೆಗೆ ನನ್ನದೇ ನಿರ್ಮಾಣದಲ್ಲಿ ಹೊಸಬರ ಎರಡು ಚಿತ್ರಗಳಿಗೆ ಬಂಡವಾಳ ಹೂಡುತ್ತಿದ್ದೇನೆ. ಅದು ನನ್ನ ಆಯ್ಕೆ. ಅದನ್ನೇ ಎಲ್ಲರೂ ಮಾಡಿ ಎಂದು ಹೇಳೋಕೆ ಆಗಲ್ಲ. ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡಿದಾಗ.. ಇದೇ ಜನ ಧನಂಜಯ ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಳ್ತಾನೆ ಎನ್ನುತ್ತಿದ್ದರು. ಇಷ್ಟಕ್ಕೂ ಸ್ಟಾರ್ ಹೀರೋಗಳ ಚಿತ್ರಗಳನ್ನು ರೆಗ್ಯುಲರ್ ಆಗಿ ನಿರ್ಮಾಣ ಮಾಡುವ ಪ್ರೊಡಕ್ಷನ್ ಸಂಸ್ಥೆಗಳು ನಮ್ಮಲ್ಲಿ ಎಷ್ಟಿವೆ ಎಂದು ಪ್ರಶ್ನೆ ಮಾಡಿದ್ಧಾರೆ.
ಸಮಸ್ಯೆ ಸಡನ್ನಾಗಿ ಹುಟ್ಟಿಕೊಂಡಿದ್ದಲ್ಲ. ತಕ್ಷಣವೇ ಪರಿಹಾರವೂ ಸಿಗುವುದಿಲ್ಲ ಎನ್ನುವುದು ಡಾಲಿ ಧನಂಜಯ ವಾದ.
ಇನ್ನು ದುನಿಯಾ ವಿಜಯ್ ಆರ್ಡಿನರಿ ಸ್ಟಂಟ್ ಮ್ಯಾನ್ ಆಗಿ (ಸ್ಟಂಟ್ ಮಾಸ್ಟರ್ ಅರ್ಥಾತ್ ಸಾಹಸ ನಿರ್ದೇಶಕ ಅಲ್ಲ), ಗುಂಪಿನಲ್ಲಿ ಬಂದು ಹೀರೋ ಜೊತೆ ಹೊಡೆದಾಡುವ ಪುಡಿಗಳ ಪಾತ್ರದಲ್ಲಿ ನಟಿಸುತ್ತಿದ್ದವರು. ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿ, ಹೀರೋ ಆಗಿ.. ಸ್ಟಾರ್ ಆಗಿ.. ನಿರ್ಮಾಪಕರಾಗಿ.. ಈಗ ನಿರ್ದೇಶಕರೂ ಆಗಿರುವವರು. ದುನಿಯಾ ವಿಜಯ್ ಅವರಿಗೂ ಈ ವಿಷಯದ ಗಂಭೀರತೆ ಚೆನ್ನಾಗಿಯೇ ಅರಿವಿದೆ.
ದುನಿಯಾ ವಿಜಯ್ :
ಸ್ಟಾರ್ ಹೀರೋಗಳು ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡಬೇಕು ಅನ್ನೋ ವಾದಕ್ಕೆ ಅರ್ಥ ಇಲ್ಲ. ನಾವು ಬೇರೆಯದೇ ದಿಕ್ಕಿನಲ್ಲಿ ಯೋಚನೆ ಮಾಡಬೇಕು. ಈ ವರ್ಷ ಹಿಟ್ ಕಂಡಿರುವುದು ಮಲಯಾಳಂ ಚಿತ್ರರಂಗ ಮಾತ್ರ. ಅಲ್ಲಿ ಹಿಟ್ ಆದ ಮಂಜುಮ್ಮಲ್ ಬಾಯ್ಸ್ ಚಿತ್ರದಲ್ಲಿ ಏನಿದೆ? ಅಲ್ಲಿ ಡ್ಯುಯೆಟ್, ರೇಪ್ ಸೀನ್ ಯಾವುದೂ ಇಲ್ಲ. ಆವೇಶಂನಲ್ಲಿ ಐಟಂ ಸಾಂಗ್ ಇಲ್ಲ. ಪ್ರೇಮುಲು ಚಿತ್ರದಲ್ಲಿ ಹಾಸ್ಯ ಮತ್ತು ಪ್ರೀತಿಯ ಹೊರತಾಗಿ ಏನಿದೆ..? ಕಥೆ ಮುಖ್ಯವೇ ಹೊರತು, ಹೀರೋಗಳಲ್ಲ. ನಾವು ಹೀರೋಗಳಿಗೆ, ದುಡ್ಡಿಗೆ ಕೊಡುತ್ತಿರುವ ಮಹತ್ವವನ್ನು ಕಥೆಗಾರರಿಗೆ ಕೊಡುತ್ತಿಲ್ಲ. ಸಿನಿಮಾಗಳ ಸಂಖ್ಯೆ ಅಲ್ಲ, ಕಥೆಗಳ ಸಂಖ್ಯೆ ಹೆಚ್ಚಾಗಬೇಕು ಎಂದಿರುವ ದುನಿಯಾ ವಿಜಯ್ ಒಬ್ಬ ಹೀರೋ 3-4 ಸಿನಿಮಾ ಮಾಡುವುದು ಮುಖ್ಯವೋ.. ಒಂದೇ ಸಿನಿಮಾ ಮೂರ್ನಾಲ್ಕು ತಿಂಗಳು ಥಿಯೇಟರುಗಳಲ್ಲಿ ನಿಲ್ಲುವಂತೆ ಮಾಡುವುದು ಮುಖ್ಯವೋ ಎಂದು ಪ್ರಶ್ನೆ ಮಾಡಿದ್ದಾರೆ.
ಈಗ ಸಿನಿಮಾಗಳು ಟಿವಿಗಳಿಗೆ ಬೇಡವಾಗಿವೆ. ಥಿಯೇಟರಿಗೆ ಬಂದರೆ ಒಂದೇ ದಿನದಲ್ಲಿ ಟೆಲಿಗ್ರಾಮಿಗೆ ಬರುತ್ತೆ. ಮೊದಲು ಸರ್ಕಾರವೇ ಮುಂದೆ ನಿಂತು ಟೆಲಿಗ್ರಾಂ ಬ್ಯಾನ್ ಮಾಡಲಿ. ಕೇರಳ ಮಾದರಿಯಲ್ಲಿ ಒಟಿಟಿ ಮಾಡಲಿ. ಎಲ್ಲ ಸಿನಿಮಾಗಳಿಗೆ ಟಿಕೆಟ್ ದರ ನಿಗದಿ ಮಾಡಲಿ ಎಂದು ಸಲಹೆ ನೀಡಿದ್ಧಾರೆ.



