ದೇಶಾದ್ಯಂತ ಮೂರು ಹಂತಗಳಲ್ಲಿ ಮತದಾನ ಪೂರ್ಣಗೊಂಡಿದ್ದು, ನಾಲ್ಕನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಯುತ್ತಿದೆ. ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಈಗಾಗಲೇ ಚುನಾವಣೆ ಮುಗಿದಿರುವ ಈ ಸಂದರ್ಭದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎನ್ನುವ ಪ್ರಶ್ನೆಗೆ, ಮತದಾರರು ಅರ್ಧಕ್ಕರ್ಧ ಉತ್ತರ ಕೊಟ್ಟಾಗಿದೆ.
ಹಲವು ಸಮೀಕ್ಷೆಗಳು ಮತ್ತು ರಾಜಕೀಯ ವಿಶ್ಲೇಷಕರ ಪ್ರಕಾರ ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಮೋದಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಮುಸ್ಲಿಂ ಹೆಸರು ತಂದು ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದ್ಧಾರೆ. ಮೋದಿಗೆ ಸೋಲಿನ ಭಯ ಕಾಡೋಕೆ ಶುರುವಾಗಿದೆ. ಅದಕ್ಕೇ ಹೀಗೆ ಮಾಡುತ್ತಿದ್ಧಾರೆ ಎನ್ನುವುದು ಕಾಂಗ್ರೆಸ್ ಪರ ಇರುವವರ ವಿಶ್ಲೇಷಣೆ. ಈ ಮೊದಲಿನ ಚುನಾವಣೆಗಳಲ್ಲಿ ಮೋದಿ ಈ ರೀತಿ ಇರಲಿಲ್ಲ ಎನ್ನುವುದಂತೂ ವಾಸ್ತವ.
ಅತ್ತ ಕಾಂಗ್ರೆಸ್ ನೋಡಿದರೆ.. ಇಂಡಿಯಾ ಒಕ್ಕೂಟದ ಎಲ್ಲಾ ಎಡವಟ್ಟುಗಳನ್ನು ಮ್ಯಾನೇಜ್ ಮಾಡಿಕೊಂಡು ಹೇಗೋ ಎಲೆಕ್ಷನ್ ಎದುರಿಸುತ್ತಿದೆ. ಕಾಂಗ್ರೆಸ್ಸಿಗೆ ಸ್ಯಾಂ ಪಿತ್ರೋಡಾ ಮಾಡಿರುವ ಹಾನಿ ಸಣ್ಣದ್ದಲ್ಲ. ಪಿತ್ರಾರ್ಜಿತ ಆಸ್ತಿ, ಶ್ರೀರಾಮ ಜನ್ಮಭೂಮಿ.. ಕೊನೆಗೆ ಭಾರತೀಯರನ್ನು ಬಣ್ಣದ ಮೇಲೆ ವಿಭಜನೆ ಮಾಡಿದ್ದು ಎಲ್ಲವೂ ಸೇರಿವೆ.
ಇಷ್ಟೆಲ್ಲ ಇದ್ದರೂ ಕೂಡಾ.. ಮೇಲ್ನೋಟಕ್ಕೆ ಕಾಣುತ್ತಿರೋ ಅಂಶಗಳೆಂದರೆ.. ಎದುರಾಳಿಯೇ ಇಲ್ಲದಂತಾಗಿದೆ ಎನ್ನುವುದು.
ಈ ಬಾರಿಯ ಚುನಾವಣೆ ಫಲಿತಾಂಶದ ನಿರೂಪಣೆಯೊಂದಿಗೇ ಶುರುವಾಗಿದ್ದು ವಿಶೇಷ. ಪಿಎಂ ಮೋದಿ ಸತತ ಮೂರನೇ ಬಾರಿಗೆ ಸರ್ಕಾರವನ್ನು ರಚಿಸುತ್ತಾರೆ ಎಂಬ ಸಮೀಕ್ಷೆಗಳೊಂದಿಗೆ ಶುರುವಾಯ್ತು. ಬಿಜೆಪಿ ಮತ್ತು ಎನ್‌ಡಿಎ ಸ್ಥಾನಗಳ ಸಂಖ್ಯೆಯ ಬಗ್ಗೆ ಹೊರಬಿದ್ದ ಸಮೀಕ್ಷೆಗಳು ಬಿಜೆಪಿಗೆ ಈ ಬಾರಿಯೂ ಅಧಿಕಾರ ಸಲೀಸು ಎಂಬು ಭವಿಷ್ಯ ನುಡಿದವು. ಮೋದಿಗೆ ಹೋಲಿಸಿದರೆ.. ಪ್ರತಿಪಕ್ಷಗಳ ಲೀಡರ್ ಆಗಿದ್ದ ರಾಹುಲ್ ಗಾಂಧಿ ಸಪ್ಪೆ ಎನಿಸಿದ್ದರೆ.. ಅದು ಅವರ ತಪ್ಪಲ್ಲ.
ಮೋದಿ ಪ್ರಚಾರದ ವಿಷಯಕ್ಕೆ ಬರೋದಾದ್ರೆ.. ಏಪ್ರಿಲ್ʻನಲ್ಲಿ 28, ಮೇನಲ್ಲಿ 26 (ಮೇ 10ರವರೆಗೆ) ಸಮಾವೇಶ ಮಾಡಿದ್ಧಾರೆ. ರೋಡ್ ಶೋಗಳು ಪ್ರತ್ಯೇಕ. ರೋಡ್ ಶೋಗಳ ಸಂಖ್ಯೆ ಕೂಡಾ 25 ದಾಟಿದೆ. ಇದೆಲ್ಲದರ ನಡುವೆ ಪ್ರಾದೇಶಿಕ ಟಿವಿ ಚಾನೆಲ್ಲುಗಳನ್ನೂ ಸೇರಿದಂತೆ 24 ಸಂದರ್ಶನ ಕೊಟ್ಟಿದ್ಧಾರೆ.
ಮೋದಿಯ ಸಂದರ್ಶನ ಪ್ರಸಾರ ಮಾಡಿದ ಚಾನೆಲ್ಲಗಳೆಂದರೆ.. ಪ್ರಾದೇಶಿಕ ಮಟ್ಟದಲ್ಲಿ ತಂತಿ ಟಿವಿ, ಅಸ್ಸಾಂ ಟ್ರಿಬ್ಯೂನ್, ಏಷ್ಯಾನೆಟ್ ಗ್ರೂಪ್, ವಿಜಯವಾಣಿ, ನ್ಯೂಸ್ 18, ಸಕಲ್, ಈನಾಡು, ಕಚ್ ಮಿತ್ರ, ದಿವ್ಯ ಭಾಸ್ಕರ್, ಗುಜರಾತ್ ಸಮಾಚಾರ್, ಫುಲ್ಚಾಬ್, ಸಂದೇಶ್ ನ್ಯೂಸ್, ಆನಂದ್ ಬಜಾರ್ ಪತ್ರಿಕಾ ಹಾಗೂ ಹಿಂದಿಯಲ್ಲಿ ಹಿಂದೂಸ್ತಾನ್, ಹಿಂದೂಸ್ತಾನ್ ಟೈಮ್ಸ್, ANI, ದೈನಿಕ್ ಜಾಗರಣ್, ಟೈಮ್ಸ್ ಆಫ್ ಇಂಡಿಯಾ, ನ್ಯೂಸ್18, ಟೈಮ್ಸ್ ನೌ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯೂಸ್ ವೀಕ್ʻಗೆ ಸಂದರ್ಶನ ಕೊಟ್ಟಿದ್ಧಾರೆ. ದೇವಾಲಯಗಳು ಮತ್ತು ಗುರುದ್ವಾರಗಳ ಭೇಟಿ, ಗಣ್ಯರ ಜೊತೆ ಮಾತುಕತೆಯೂ ಇದೆ.
ಆದರೆ.. ರಾಹುಲ್ ಗಾಂಧಿ, ಮೋದಿಯವರಿಗಿಂತ ವಯಸ್ಸಿನಲ್ಲಿ ಚಿಕ್ಕವರಾದರೂ.. ಉತ್ಸಾಹದ ಕೊರತೆ ಎದ್ದು ಕಾಣುತ್ತದೆ. ಮೊದಲಿಗೆ ಹೋಲಿಸಿದರೆ.. ಭಾಷಣಗಳಲ್ಲಿ ಪ್ರಖರತೆ ಕಾಣುತ್ತಿದೆ. ರಾಹುಲ್ ಗಾಂಧಿ ಅವರ ನ್ಯಾಯ್ ಯಾತ್ರೆ ಮುಗಿಸಿ, ಇದುವರೆಗೆ 39 ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ಯಾವುದೇ ಟಿವಿ ಸಂದರ್ಶನ ನೀಡಿಲ್ಲ. ಪತ್ರಿಕಾ ಸಂದರ್ಶನವೂ ಇಲ್ಲ. ಬದಲಿಗೆ ತಮ್ಮದೇ ಐಟಿ ಸೆಲ್ ಜೊತೆ ಸೋಷಿಯಲ್ ಮೀಡಿಯಾ ಸಂವಾದ ನಡೆಸಿದ್ಧಾರೆ. ಕೆಲವು ಪ್ರೆಸ್ ಮೀಟ್ ಮಾಡಿದ್ಧಾರೆ.
ಎಲ್ಲಿ ನೋಡಿದರೂ ಮೋದಿಯೇ ಕಾಣುವಾಗ.. ಕೆಲವು ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ರಾಹುಲ್ ಗಾಂಧಿ ನಿಗೂಢವಾಗಿಯೇ ಇರುತ್ತಾರೆ. ರಾಹುಲ್ ಮಾತನಾಡಿದರೆ.. ವಿವಾದಗಳೇ ಹೆಚ್ಚು ಸುದ್ದಿಯಾಗುತ್ತವೆ ಎಂಬ ಆರೋಪಗಳೂ ಇದಕ್ಕೆ ಕಾರಣ ಇರಬಹುದು.
ಎಲ್ಲದರ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಪ್ರಾದೇಶಿಕ ಪಕ್ಷಗಳಲ್ಲಿ ಇರುವ ನಾಯಕರು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ರಾಹುಲ್ ಗಾಂಧಿ ಅವರಿಗಿಂತ ಜನಪ್ರಿಯರು. ಉದಾಹರಣೆಗೆ ಹೇಳೋದಾದರೆ.. ಕರ್ನಾಟಕದಲ್ಲಿಯೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಮಾವೇಶಗಳಿಗೆ ಸಿಕ್ಕಷ್ಟು ಪ್ರತಿಕ್ರಿಯೆ ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಸಿಕ್ಕಿಲ್ಲ. ಅದೇ ಬಿಜೆಪಿಯಲ್ಲಿ ಮೋದಿಗೆ ಸಿಕ್ಕಷ್ಟು ಉತ್ಸಾಹದ ಬೆಂಬಲ, ವಿಜಯೇಂದ್ರ, ಯಡಿಯೂರಪ್ಪ ಅವರಿಗೂ ಸಿಕ್ಕಿಲ್ಲ. ಅಲ್ಲಿ ಹಂಗೆ.. ಇಲ್ಲಿ ಹಿಂಗೆ..



