ಪ್ರಧಾನಿ ನರೇಂದ್ರ ಮೋದಿ ರಾಜಕೀಯ ವೇದಿಕೆಗಳಲ್ಲಿ ಹೊಗಳುವುದು ಕಡಿಮೆ. ಅದರಲ್ಲೂ ತಮ್ಮದೇ ಪಕ್ಷದವರನ್ನು ಹೊಗಳುವುದಕ್ಕೆ ಚೌಕಾಸಿ ಮಾಡುತ್ತಾರೆ. ಕರ್ನಾಟಕದ ವಿಚಾರಕ್ಕೆ ಬಂದರೆ.. ಬಹುಶಃ ಅಷ್ಟೋ ಇಷ್ಟೋ ಹೊಗಳಿಸಿಕೊಂಡ ಏಕೈಕ ನಾಯಕರೆಂದರೆ.. ಅದು ಬಿ.ಎಸ್.ಯಡಿಯೂರಪ್ಪ ಮಾತ್ರ. ದೇವೇಗೌಡರನ್ನು ಹೊಗಳಿರುವುದರ ಪ್ರಮಾಣಕ್ಕೆ ಹೋಲಿಸಿದರೆ.. ಆ ಹೊಗಳಿಕೆ ಏನೇನೂ ಅಲ್ಲ.
ಅಮಿತ್ ಶಾ, ರಾಜ್ ನಾಥ್ ಸಿಂಗ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಜೈಶಂಕರ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರ ರಾಜೇ ಸಿಂಧಿಯಾ.. ಹೀಗೆ ಯಾವ ನಾಯಕರನ್ನೂ ಹೊಗಳುವುದು ಕಡಿಮೆಯೇ. ಆದರೆ. ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಹೋದಾಗಲೆಲ್ಲ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳುತ್ತಿದ್ಧಾರೆ.
ನಮಗೆ ಮಕ್ಕಳಿಲ್ಲ. ಆದರೆ ಮೋದಿ ಮತ್ತು ಯೋಗಿ (ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್), ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದಿರುವ ಮೋದಿ, ಯೋಗಿ ಆದಿತ್ಯನಾಥ್ ಶ್ರಮಿಸುತ್ತಿರುವ ರೀತಿಗೆ ಶರಣಾಗಿದ್ಧಾರೆ. ಉತ್ತರ ಪ್ರದೇಶದ ಎಟಾವಾದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ ಯೋಗಿಯವರು ತಮ್ಮಂತೆಯೇ ಕುಟುಂಬದಿಂದ ದೂರ ಇದ್ದು ದೇಶಕ್ಕಾಗಿ ದುಡಿಯುತ್ತಿದ್ದಾರೆ ಎಂದು ಹೊಗಳಿದ್ಧಾರೆ.
ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ನಡೆದ ಹಲವು ರಾಜಕೀಯ ಸಮಾವೇಶಗಳಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತಂದ ಯೋಗಿ, ಕೈಗಾರಿಕೆಗಳನ್ನು ಸ್ಥಾಪಿಸುತ್ತಿರುವ ಯೋಗಿ, ಬಂಡವಾಳ ಹೂಡಿಕೆಗೆ ಸೇಫ್ ಆಗುತ್ತಿರುವ ಉತ್ತರ ಪ್ರದೇಶದ ಸಾಧನೆಯ ಹಿಂದೆ ಯೋಗಿ ಆದಿತ್ಯನಾಥ್ ಶ್ರಮ ಇದೆ ಎಂದು ಶ್ಲಾಘಿಸಿದ್ಧಾರೆ. ಉತ್ತರ ಪ್ರದೇಶದಲ್ಲಿ ಗೂಂಡಾಗಳಿಗೆ ಹೆದರಿ ಉದ್ಯಮಿಗಳೇ ಬರುತ್ತಿರಲಿಲ್ಲ. ಆ ಭಯ ಹೋಗಲಾಡಿಸಿ, ಒಂದು ಕಡೆ ಧೈರ್ಯ ಹಾಗೂ ಮತ್ತೊಂದು ಕಡೆ ಆತ್ಮವಿಶ್ವಾಸ ತುಂಬಿದ್ಧಾರೆಂದು ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ್ಧಾರೆ.
ಇದೇ ವೇಳೆ ಮೋದಿ ಅವರು ಯೋಗಿ ಜೊತೆ ಅಯೋಧ್ಯೆಯಲ್ಲಿ ರೋಡ್ ಶೋ ಕೂಡಾ ನಡೆಸಿದ್ದಾರೆ. ಈ ವರ್ಷದ ಜನವರಿ 22 ರ ಪ್ರಾಣ ಪ್ರತಿಷ್ಠಾ ಸಮಾರಂಭದ ಬಳಿಕ ಮೊದಲ ಬಾರಿಗೆ ಪ್ರಧಾನಿ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಉದ್ಘಾಟಿಸಿದ ದೇಗುಲದ ಮುಂಭಾಗದ ರಸ್ತೆಯಾದ ರಾಮಪಥದಲ್ಲಿ ರೋಡ್ ಶೋ ನಡೆಸಿದ್ದಾರೆ.
ಸಂಜೆ 5 ಗಂಟೆಯಿಂದ ಪ್ರಧಾನಿಗಾಗಿ ಕಾದು ಕುಳಿತಿದ್ದ ಕಾರ್ಯಕರ್ತರಲ್ಲಿ ಹಲವರು ಸುಸ್ತಾಗಿ ರಸ್ತೆಯಲ್ಲೇ ಕುಳಿತುಕೊಂಡಿದ್ದರೂ.. ಮೋದಿ ರಾತ್ರಿ ಏಳೂಮುಕ್ಕಾಲಿಗೆ ಬರುತ್ತಿದ್ದಂತೆ.. ಉತ್ಸಾಹ ತುಂಬಿಕೊಂಡರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಫೈಜಾಬಾದ್ ಅಭ್ಯರ್ಥಿ ಲಲ್ಲು ಸಿಂಗ್ ಅವರಿಗೆ ಸಾಥ್ ನೀಡಿದರು.
ಅಂದಹಾಗೆ ಈ ಚುನಾವಣೆಯಲ್ಲಿ ಬಿಜೆಪಿಗೆ ಪ್ಲಸ್ ಆಗಲಿರುವ ವಿಷಯಗಳಲ್ಲಿ ರಾಮಮಂದಿರವೂ ಒಂದು. ಐದು ಶತಮಾನಗಳಿಂದ ಕಾಯುತ್ತಿದ್ದ ಭಾರತೀಯರ ರಾಮಮಂದಿರ ಕನಸು ಈಗ ನನಸಾಗಿದೆ. ರಾಜಕೀಯದ ವಿಷಯಕ್ಕೆ ಹೇಳಬೇಕೆಂದರೆ.. ಪ್ರತಿಪಕ್ಷಗಳು ವಿರೋಧಿಸುವ ಭರದಲ್ಲಿ ರಾಮ ಮಂದಿರದ ಸಂಪೂರ್ಣ ಕ್ರೆಡಿಟ್ʻನ್ನು ಮೋದಿಯವರಿಗೇ ಕೊಟ್ಟಿವೆ.
ಅಂದಹಾಗೆ ಮೋದಿ ಇತ್ತೀಚೆಗೆ ಯೋಗಿ ಅವರನ್ನು ಹೊಗಳುತ್ತಿರುವುದರ ಹಿಂದಿನ ಅರ್ಥವನ್ನು ಜನ ಹುಡುಕುತ್ತಿದ್ದಾರೆ. ಏಕೆಂದರೆ.. ಈ ಬಾರಿ ಮೋದಿ 3ನೇ ಬಾರಿಗೆ ಆಯ್ಕೆಯಾದರೆ.. ಮಧ್ಯದಲ್ಲಿಯೇ ಅವರ ವಯಸ್ಸು 75 ದಾಟುತ್ತದೆ. ಆಗ.. ಪ್ರಧಾನಿ ಬದಲಾಗುತ್ತಾರಾ..? ಗೊತ್ತಿಲ್ಲ. ಆದರೆ.. ಮೋದಿಯವರೇನಾದರೂ.. ತಮ್ಮ ಉತ್ತರಾಧಿಕಾರಿ ಮೋದಿ ಎಂದ ಸೂಚನೆ ನೀಡುತ್ತಿದ್ದಾರಾ.. ಇದು ಹಲವರ ಲೆಕ್ಕಾಚಾರ. ಸದ್ಯದ ಮಟ್ಟಿಗೆ ಲೆಕ್ಕಾಚಾರಗಳು ಮಾತ್ರ.



