ಪ್ರಧಾನಿ ನರೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಗಾಲೋಟದಲ್ಲಿ 400ರ ಗಡಿಯತ್ತ ಮುನ್ನುಗ್ಗುತ್ತಿದೆ. ಬಿಜೆಪಿ ಒಂಧೆ 370ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ. ಎನ್ʻಡಿಎ 400ರ ಗಡಿ ದಾಟಿಸಲಿದೆ. ಇದು ಬಿಜೆಪಿಯ ಜೆಪಿ ನಡ್ಡಾ, ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿಯ ಯಡಿಯೂರಪ್ಪ, ವಿಜಯೇಂದ್ರ, ರಾಷ್ಟ್ರ ಮಟ್ಟದ ನಾಯಕರಾದ ಯೋಗಿ ಆದಿತ್ಯನಾಥ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ರಾಜನಾಥ್ ಸಿಂಗ್.. ಸೇರಿದಂತೆ ಎಲ್ಲರೂ ಹೇಳುತ್ತಿರುವ ಮಾತು.
ಆದರೆ.. ಒಂದೋ ಎರಡೋ ಸಮೀಕ್ಷೆ ಬಿಟ್ಟರೆ.. ಮಿಕ್ಕ ಯಾವ ಸಮೀಕ್ಷೆಗಳಲ್ಲೂ ಬಿಜೆಪಿ+ಎನ್ʻಡಿಎ ಸೀಟುಗಳ ಸಂಖ್ಯೆ 400ರ ಗಡಿ ದಾಟಿಲ್ಲ. ಸಟ್ಟಾ ಬಜಾರಿನಲ್ಲೂ 400ರ ಗಡಿ ದಾಟಿಲ್ಲ. ಹಾಗಾದರೆ.. ಬಿಜೆಪಿಗೆ ಅದರ ಅರಿವು ಇಲ್ಲವಾ..? ಹೀಗೇಕೆ ಹೇಳುತ್ತಿದೆ ಬಿಜೆಪಿ.. ಎಂದು ಪ್ರಶ್ನೆ ಮಾಡಿದರೆ.. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳುವುದೇ ಬೇರೆ.
ʻಅದು ಅವರಿಗೂ ಗೊತ್ತಿದೆ. ಆದರೆ.. ಅದು ಅವರೇ ಹೂಡಿರುವ ನಿಗೂಢ ಆಟ. ಚಾರ್ ಸೋ ಪಾರ್ ಎನ್ನುವುದು ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ನೀಡಿರುವ ಘೋಷಣೆಯಷ್ಟೇ. ಇದೊಂದು ಸೈಕಲಾಜಿಕಲ್ ಗೇಮ್ ಹಾಗೂ ಟ್ರ್ಯಾಪ್ ಎನ್ನಬಹುದು. ಎದುರಾಳಿಗಳಿಗೆ ಬಿಜೆಪಿಯವರೇ ಫಿಕ್ಸ್ ಮಾಡಿರುವ ಟಾರ್ಗೆಟ್ 400ʼʼ ಎನ್ನುತ್ತಾರೆ.
ಏಕೆ ಅನ್ನೋ ಪ್ರಶ್ನೆಗೂ ಅವರ ಬಳಿ ಉತ್ತರ ಇದೆ. ಕಾಂಗ್ರೆಸ್ ಸೇರಿದಂತೆ ಯಾವ ನಾಯಕರೂ ಕೂಡಾ ಆರಂಭದಲ್ಲಿ ಬಿಜೆಪಿ 272 ದಾಟಲ್ಲ ಎನ್ನುತ್ತಿದ್ದರು. ಬಿಜೆಪಿಗೆ 400ರ ಗಡಿ ದಾಟುವುದು ಅಸಾಧ್ಯ ಎನ್ನುತ್ತಿದ್ದರು. ಆ ಮೂಲಕ ಎನ್ʻಡಿಎಯೇ ಅಧಿಕಾರಕ್ಕೆ ಬರಲಿದೆ ಎಂದು ಮೆಂಟಲಿ ಫಿಕ್ಸ್ ಆಗಿದ್ದರು. ಅದನ್ನವರು ಕಾರ್ಯಕರ್ತರಿಗೂ ದಾಟಿಸಿದ್ದರು. ಅಲ್ಲಿಗೆ ಬಿಜೆಪಿ ಮೊದಲ ಯುದ್ಧ ಗೆದ್ದಂತಾಗಿತ್ತು ಎನ್ನುತ್ತಾರೆ. ಅವರ ಪ್ರಕಾರ ಮಿಷನ್ 400+ ಅನ್ನೋದು ಬಿಜೆಪಿಯವರು, ಪ್ರತಿಪಕ್ಷಗಳಿಗೆ ತೋಡಿದ್ದ ಖೆಡ್ಡಾ. ಅದಕ್ಕೆ ಅವರಾಗಿಯೇ ಬಿದ್ದರು ಎನ್ನುವುದು ಪ್ರಶಾಂತ್ ಕಿಶೋರ್ ಮಾತು.
ಪ್ರಶಾಂತ್ ಕಿಶೋರ್ ಪ್ರಕಾರ ಬಿಜೆಪಿ ಗೆಲುವಿಗೆ ಮೂರು ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದ್ದು ನಾಯಕತ್ವದ ಕೊರತೆ. ಕಳೆದ ಐದಾರು ವರ್ಷಗಳಲ್ಲಿ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸಿಲ್ಲ, ಆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರೆ ಅದು ವಿಪಕ್ಷಗಳ ಹಿನ್ನಡೆ. ಮೋದಿಯವರನ್ನು ಎದುರಿಸುವ ಸಮರ್ಥ ನಾಯಕರ ಕೊರತೆಯೇ ಇದಕ್ಕೆ ಕಾರಣ. ಹತ್ತು ವರ್ಷಗಳ ಹಿಂದೆ ಜನರಿಗೆ ಮೋದಿ ಮೇಲೆ ಇದ್ದಷ್ಟು ನಂಬಿಕೆ ಈಗ ಇಲ್ಲ. ಅದೇ ರೀತಿ, ರಾಹುಲ್ ಗಾಂಧಿ ಕೂಡಾ ಕಳೆದ ವರ್ಷಗಳಲ್ಲಿ ಮೋದಿಗೆ ಪೈಪೋಟಿ ನೀಡುವಷ್ಟು ಬೆಳೆದಿಲ್ಲ ಎನ್ನುವುದೂ ಒಪ್ಪಿಕೊಳ್ಳಬೇಕಾದ ವಿಚಾರ. ಹಾಗಾಗಿ, ಮೋದಿಗೆ ವಿರುದ್ದವಾಗಿ ವಿಪಕ್ಷಗಳಲ್ಲಿ ನಿಲ್ಲುವ ನಾಯಕನಾರು ? ಈ ಪ್ರಶ್ನೆಯೇ ಬಿಜೆಪಿಯನ್ನು ಗೆಲ್ಲಿಸುತ್ತದೆ ಎನ್ನುವುದು ಪ್ರಶಾಂತ್ ಕಿಶೋರ್ ವಿಶ್ಲೇಷಣೆ.
ಅಲ್ಲದೆ.. ಎರಡನೆಯದ್ದು ಮೋದಿಯವರ ಬಗ್ಗೆ ಜನರಿಗೆ ಅಸಮಾಧಾನವಿದೆಯೇ ಹೊರತು, ಆಕ್ರೋಶವಿಲ್ಲ. ಒಂದು ವರ್ಗದ ಜನರ ಬೆಂಬಲ ಬಿಜೆಪಿಗೆ ಇದ್ದೇ ಇದೆ. ರಾಮ ಮಂದಿರದ ಪ್ರಾಣಪ್ರತಿಷ್ಠೆಯ ವೇಳೆ ಬಿಜೆಪಿಗಿದ್ದ ಅನುಕೂಲಕರ ವಾತಾವರಣ ಈಗ ಅಷ್ಟಾಗಿಲ್ಲ. ರಾಮ ಮಂದಿರ ಚುನಾವಣಾ ವಿಷಯವಾಗಿ ಉಳಿದಿಲ್ಲ ಎನ್ನುತ್ತಾರೆ.
ಇನ್ನು ಮತ್ತೊಂದು ವಿಷಯವೆಂದರೆ.. ಹಿಂದೂಗಳಲ್ಲಿ 38% ಹಿಂದೂಗಳಷ್ಟೇ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಗಾಂಧಿವಾದಿಗಳು, ಸಮಾಜವಾದಿಗಳು, ಕಮ್ಯುನಿಸ್ಟರು ಹಾಗೂ ಅಂಬೇಡ್ಕರ್ ವಾದಿಗಳು ಬಿಜೆಪಿಯನ್ನು ಒಪ್ಪುವುದಿಲ್ಲ. ಇನ್ನು ಮುಸ್ಲಿಮರು 100% ವಿರೋಧಿಸುತ್ತಾರೆ. ಮೊದಲ 4 ವರ್ಗದವರನ್ನು ಮುಸ್ಲಿಮರ ಜೊತೆಗೂಡಿಸಿದರೆ.. ಗೆಲ್ಲಬಹುದು. ಅಂತಹ ಪ್ರಯತ್ನ ಇಂಡಿ ಒಕ್ಕೂಟದಿಂದ ಆಗಿಲ್ಲ ಎನ್ನುವುದು ಪ್ರಶಾಂತ್ ಕಿಶೋರ್ ವಿಶ್ಲೇಷಣೆ.
ಪ್ರಶಾಂತ್ ಕಿಶೋರ್ ಪ್ರಕಾರ ʻಬಿಜೆಪಿ ( ಎನ್ʻಡಿಎ ಮೈತ್ರಿಕೂಟ ಅಲ್ಲ) ಮಾತ್ರ ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ. ಕರ್ನಾಟಕ, ರಾಜಸ್ಥಾನ, ಬಿಹಾರ ಮುಂತಾದ ಕಡೆ ಕೆಲವೊಂದು ಸೀಟ್ ಅನ್ನು ಬಿಜೆಪಿ ಕಳೆದುಕೊಳ್ಲಬಹುದು. ಅದನ್ನು ಪೂರ್ವ ಮತ್ತು ದಕ್ಷಿಣದ ರಾಜ್ಯಗಳಿಂದ ಬಿಜೆಪಿ ಪಡೆದುಕೊಳ್ಳಲಿದೆ. ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರ್ಕಾರದ ಅವಧಿ ಮುಗಿಯಲಿದ್ದು, ಬಿಜೆಪಿ ಸಾಧನೆ ಉತ್ತಮವಾಗಲಿದೆ. ಕೇರಳ ಮತ್ತು ತಮಿಳುನಾಡಿನಲ್ಲೂ ಬಿಜೆಪಿ ಅಕೌಂಟ್ ಓಪನ್ ಮಾಡಲಿದೆ. ಒಡಿಶಾ, ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಗೆಲ್ಲುವ ಸೀಟ್ ಸಂಖ್ಯೆ ಹೆಚ್ಚಾಗಲಿದೆʼ.



