“ಮಾತುಲಕಿ ಮಾರ್ದವಂ ಸಾಮ್ಯಶೂನ್ಯಮ್”. ತಾಯಿ ಎಂದರೇನೇ ಮಾರ್ದವತೆ, ವಾತ್ಸಲ್ಯ. ಅದಕ್ಕೆ ಸಾಟಿಯಾಬಲ್ಲ ಇನ್ನೊಂದು ಪ್ರತಿರೂಪ ಇಲ್ಲ. ಇಂತಾದ್ದೊಂದು ಮಾತು ಹೇಳಿದ್ದಾರೆ ಪ್ರಧಾನಿ ಮೋದಿ. ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ತಾಯಿಯನ್ನೂ ನೆನಪಿಸಿಕೊಂಡಿದ್ದಾರೆ. ಸುದೀಪ್ ಅವರಿಗೆ ದೇವರು ನೋವು ಮರೆಯುವ ಶಕ್ತಿ ಕೊಡಲಿ ಎಂದು ಹೇಳಿದ್ದಾರೆ. ವೈಯಕ್ತಿಕವಾಗಿ ಸುದೀಪ್ ಅವರಿಗೆ ಬರೆದು ಸಾಂತ್ವನ ಹೇಳಿದ್ದಾರೆ. ನಿಮ್ಮ ನೋವು ನನಗೆ ಅರ್ಥವಾಗುತ್ತದೆ ಎಂಬ ಒಂದು ಮಾತಿನಲ್ಲಿ ತಾವು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದನ್ನೂ ನೆನಪಿಸಿಕೊಂಡಿದ್ದಾರೆ.
ಮೋದಿ ಅವರು ತಮ್ಮ ಪತ್ರದಲ್ಲಿ ʻʻಸುದೀಪ್ ಸಂಜೀವ್ ಅವರೇ, ನಿಮ್ಮ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ತಾಯಿಯ ಅಗಲಿಕೆ ತುಂಬಲಾರದ ನಷ್ಟ. “ಮಾತುಲಕಿ ಮಾರ್ದವಂ ಸಾಮ್ಯಶೂನ್ಯಮ್” ಎಂದು ಹೇಳಿದಂತೆ, ತಾಯಿಯ ಹೃದಯದ ಮೃದುತ್ವಕ್ಕೆ ಈ ಜಗತ್ತಿನಲ್ಲಿ ಬೇರೆ ಸಾಟಿಯಿಲ್ಲ. ನಿಮ್ಮ ನೋವು, ಭಾವನೆ ಆಕೆಯ ಜೊತೆಗಿದ್ದ ಬಾಂದವ್ಯವನ್ನು ಸಾರಿ ಹೇಳುತ್ತಿದೆ. ನಿಮ್ಮ ಮತ್ತು ಕುಟುಂಬದ ಮೇಲೆ ಅಕೆ ಬೀರಿದ ಪ್ರಭಾವವನ್ನು ತೋರಿಸುತ್ತಿದೆ. ಆ ತಾಯಿ ನಿಮ್ಮ ನೆನಪುಗಳಲ್ಲಿ ಶಾಶ್ವತವಾಗಿ ಬದುಕಿರುತ್ತಾರೆ. ಅವರು ನಿಮ್ಮ ಜೀವನದಲ್ಲಿ ತುಂಬಿದ ಮೌಲ್ಯಗಳು ನಿಮಗೆ ಸ್ಫೂರ್ತಿ ನೀಡುತ್ತವೆ ಎಂದು ನನಗೆ ನಂಬಿಕೆ ಇದೆ. ನಿಮ್ಮ ಜೀವನದ ಅತ್ಯಂತ ಕಷ್ಟಕರವಾದ ಈ ಹಂತ ಹೇಗಿರುತ್ತದೆ ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಈ ನಷ್ಟ, ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನಿಮಗೆ ದಯಪಾಲಿಸಲಿ ಓಂ ಶಾಂತಿ…ʼʼ ಎಂದು ಬರೆದಿದ್ದಾರೆ.
ಅಕ್ಟೋಬರ್ 23 ರಂದೇ ತಲುಪಿದ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಸುದೀಪ್, ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲ ಸೆಲೆಯನ್ನು ನೀಡಿದೆ.ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ.ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ ಎಂದು ಬರೆದುಕೊಂಡಿದ್ದಾರೆ ಕಿಚ್ಚ ಸುದೀಪ್.
ಸುದೀಪ್ ಅವರ ತಾಯಿಯ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಸೇರಿದಂತೆ, ಹೊರ ರಾಜ್ಯದ ನಟ, ನಟಿಯರು ಸೇರಿದಂತೆ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ ಕೂಡ ಪತ್ರ ಬರೆದು ಸಂತಾಪ ಸೂಚಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿ ಪತ್ರ ಬರೆದಿದ್ದರು. ಇದೀಗ ಆ ಪತ್ರ ವೈರಲ್ ಆಗಿದೆ. ಕಿಚ್ಚ ಸುದೀಪ್ ಅವರಿಗೆ ಇಡೀ ಕರ್ನಾಟಕದ ಚಿತ್ರ ಪ್ರೇಕ್ಷಕರು ಸಾಂತ್ವನ ಹೇಳಿದ್ದರು. ಖುದ್ದು ಪ್ರಧಾನಿಯೂ ಸಾಂತ್ವನ ಹೇಳಿದ್ದಾರೆ. ಈ ಮೂಲಕ ಸುದೀಪ್ ಅವರು ಏರಿರುವ ಎತ್ತರ ಎಂಥದ್ದು ಎನ್ನುವುದನ್ನೂ ಸೂಚಿಸಿದ್ದಾರೆ. ಕಿಚ್ಚನ ಫ್ಯಾನ್ಸ್ ನೋವಿನಲ್ಲೂ ಕೂಡಾ ಇದು ಸುದೀಪ್ ಅವರ ಅತಿ ದೊಡ್ಡ ಸಂಪಾದನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.



