ಮತ್ತೊಂದು ಕ್ರಿಮಿನಲ್ ಕೇಸ್ ಬಿದ್ದಿದೆ. ಈ ಬಾರಿ ಕೇಸು ಬಿದ್ದಿರೋದು ಬೈರತಿ ಬಸವರಾಜ್ ಮೇಲೆ. ಅದೂ ಕೊಲೆ ಕೇಸು. ಈ ಕೊಲೆಯ ಆರೋಪ ಹೊತ್ತಿರುವ ನಾಯಕರು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಬಿಜೆಪಿಗೆ ವಲಸೆ ಬಂದ ಶಾಸಕರೇ ವಿಲನ್ ಆಗುತ್ತಿದ್ದಾರಾ..? ಹೀಗೊಂದು ಚರ್ಚೆ ಶುರುವಾಗುತ್ತಿದೆ.
ಇದೀಗ ಬೈರತಿ ಬಸವರಾಜ್ ಕೊಲೆ ಕೇಸಿನಲ್ಲಿ ಜೈಲು ಸೇರುವ ಭೀತಿಯಲ್ಲಿದ್ದಾರೆ. ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಪ್ರಕರಣದಲ್ಲಿ ಪ್ರಭಾವಿ ಶಾಸಕ ಭೈರತಿ ಹೆಸರು ಕೇಳಿ ಬಂದಿದೆ. ಕೆಜಿಹಳ್ಳಿ ಠಾಣೆಯ ಎಸಿಪಿ ಪ್ರಕಾಶ್ ರಾಥೋಡ್ ಐಓ ಆಗಿದ್ಧಾರೆ. ಶಿವಪ್ರಕಾಶ್ ತಾಯಿಯ ದೂರಿನನ್ವಯ ಶಾಸಕ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿಯನ್ನಾಗಿ ಮಾಡಲಾಗಿದೆ. ತಾನು ಯಾವುದೇ ತಪ್ಪು ಮಾಡಿಲ್ಲ, ಆರೋಪಿ ಜಗ್ಗನೂ ಗೊತ್ತಿಲ್ಲ. ಬಿಕ್ಲು ಶಿವನೂ ಗೊತ್ತಿಲ್ಲ ಎನ್ನುತ್ತಿದ್ದಾರೆ ಬೈರತಿ ಬಸವರಾಜ್.
ವಿಶೇಷ ಅಂದ್ರೆ.. ಜಗ್ಗನ ಜೊತೆ ದೇಗುಲ ಯಾತ್ರೆ ಮಾಡಿರುವ ಫೋಟೋ/ವಿಡಿಯೋಗಳು ವೈರಲ್ ಆಗಿವೆ. ಅಲ್ಲಿಗೆ ಪರಿಚಯವೇ ಇಲ್ಲ ಎಂದಿದ್ದ ಬೈರತಿ ಬಸವರಾಜ್ ಮಾತು ಸುಳ್ಳಾಗಿದೆ. ಕೊಲೆ ಮಾಡಿಸಿದ್ದಾರೋ.. ಇಲ್ಲವೋ.. ತನಿಖೆಯಲ್ಲಿ ಗೊತ್ತಾಗಬೇಕಿದೆ. ಆದರೆ.. ಕೊಲೆ ಕೇಸಿನಲ್ಲಿ ಬಿಜೆಪಿ ಶಾಸಕ ಆರೋಪಿಯಾಗಿರುವುದು ಬಿಜೆಪಿಗೆ ಕೆಟ್ಟ ಹೆಸರು ತಂದಿದ್ದಂತೂ ಸತ್ಯ.
ಅದಾಧ ಮೇಲೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ. ಅತ್ಯಾಚಾರ, ಏಡ್ಸ್ ಇಂಜೆಕ್ಷನ್ ಕೊಡಿಸಿದ್ದು, ಹನಿಟ್ರಾಪ್ ಮಾಡಿಸಿದ್ದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಈಗಲೂ ಗುಡುಗುತ್ತಿರುವುದು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿರುದ್ಧ. ಆದರೆ.. ಬಿಜೆಪಿಯಲ್ಲಿಯೇ ಕೆಲವರನ್ನು ಹನಿಟ್ರಾಪ್ ಮಾಡಿದ ಆರೋಪ ಅವರ ಮೇಲಿದೆ.
ಇನ್ನೊಬ್ಬ ವ್ಯಕ್ತಿ ರಮೇಶ್ ಜಾರಕಿಹೊಳಿ. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರ ಅಶ್ಲೀಲ ವಿಡಿಯೋ ವೈರಲ್ ಆಗಿ, ರೇಪ್ ಕೇಸ್ ಆಗಿದ್ದು ಒಂದು ಕಥೆಯಾದರೆ.., ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಿದ್ದು, ತಮ್ಮ ಸೋದರನನ್ನು ಪಕ್ಷೇತರನಾಗಿ ಗೆಲ್ಲಿಸಿದ್ದು, ಈಗ ಯತ್ನಾಳ್ ಜೊತೆ ಸೇರಿ ಪಕ್ಷವನ್ನು ಒಡೆಯುತ್ತಿರುವುದು ಇನ್ನೊಂದು ಕಥೆ.
ಇನ್ನು ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್, ಇಬ್ಬರೂ ಈಗ ಉಚ್ಚಾಟನೆಯಾಗಿದ್ದಾರೆ. ಅವರು ಈಗ ಕೇವಲ ವಿಧಾನಸಭೆಯಲ್ಲಿ ಮಾತ್ರವೇ ಬಿಜೆಪಿ ಶಾಸಕರು. ಹೊರಗೆ ಅನಧಿಕೃತ ಕಾಂಗ್ರೆಸ್ ನಾಯಕರು.
ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮುಟಳ್ಳಿ ಕೂಡಾ ರಮೇಶ್ ಜಾರಕಿಹೊಳಿ ಟೀಂನಲ್ಲಿದ್ದಾರೆ. ಹುಣಸೂರಿನ ಹೆಚ್ ವಿಶ್ವನಾಥ್ ಅಂತೂ ಬಿಜೆಪಿ ನಾಯಕರಿಗೆ ಮಗ್ಗಲ ಮುಳ್ಳಾಗಿ ಕಾಡುತ್ತಿದ್ದಾರೆ. ಅವರ ಹೇಳಿಕೆಗಳು ಬಿಜೆಪಿ ನಾಯಕರಿಗೆ ಇರಿಸುಮುರುಸು ಮಾಡುತ್ತಲೇ ಇವೆ.
ಸಂಸದರಾಗಿರುವ ಸುಧಾಕರ್ ಕೂಡಾ.. ಪಕ್ಷ ಹಾಗೂ ಪಕ್ಷದ ಅಧ್ಯಕ್ಷರ ವಿರುದ್ಧ ಗುಡುಗಿದವರೇ. ಸುಧಾಕರ್ ಅವರು ಪಕ್ಷದ ಕೆಲವು ನಾಯಕರನ್ನು ಸೈಡಿಗೆ ತಳ್ಳಿದ್ದಾರೆ ಎಂಬ ಆರೋಪಗಳಿವೆ. ವಿಶೇಷವಾಗಿ ಕೊರೊನಾ ಅವಧಿಯಲ್ಲಿ ಸಚಿವರಾಗಿದ್ದ ಸುಧಾಕರ್ ಮೇಲೆ ಭ್ರಷ್ಟಾಚಾರ ಆರೋಪಗಳಿವೆ.
ಜನಾರ್ದನ ರೆಡ್ಡಿ, ಬಿಜೆಪಿಗೆ ವಾಪಸ್ ಬಂದಿದ್ದೇ ಬಂದಿದ್ದು, ಶ್ರೀರಾಮುಲು ಪಕ್ಷದಿಂದ ದೂರವಾಗಿದ್ದಾರೆ. ಈಗ ಅವರನ್ನು ಒಗ್ಗೂಡಿಸಲು ಮಂದಾಗಿರುವುದು ವಿ ಸೋಮಣ್ಣ. ಸೋಮಣ್ಣ ಕೂಡಾ ಒಂದು ಕಾಲದಲ್ಲಿ ಬಿಜೆಪಿಗೆ ವಲಸಿಗರೇ. ಮೂಲ ಕಾಂಗ್ರೆಸ್.
ಇನ್ನು ಕೆಸಿ ನಾರಾಯಣ ಗೌಡ, ಕೆ ಗೋಪಾಲಯ್ಯ ಅವರೆಲ್ಲ ಆಗಲೇ ಕಾಂಗ್ರೆಸ್ ಜೊತೆ ಸಂಪರ್ಕ ಸಾಧಿಸಿದ್ದಾರಂತೆ. ಇನ್ನು ಬಸನಗೌಡ ಪಾಟೀಲ ಯತ್ನಾಳ್ ಹಿಂದುತ್ವವನ್ನು ಬಿಟ್ಟರೆ, ಅವರೂ ವಲಸಿಗರೇ. ಮೂಲ ಬಿಜೆಪಿಗರಾದರೂ, ಜೆಡಿಎಸ್ಸಿನಲ್ಲಿದ್ದವರನ್ನು ಯಡಿಯೂರಪ್ಪನವರೇ ವಾಪಸ್ ಕರೆ ತಂದಿದ್ದರು. ಅವರೀಗ ಯಡಿಯೂರಪ್ಪ ಅವರನ್ನು ಬೀದಿ ಬೀದಿಯಲ್ಲಿ ಹರಾಜು ಹಾಕ್ತಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿಗೆ ವಲಸಿಗರೇ ದೊಡ್ಡ ಸಮಸ್ಯೆಯಾಗಿದ್ದಾರೆ.



